ADVERTISEMENT

ಅಧಿಕಾರಿಗಳ ತಂಡದಿಂದ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2012, 6:05 IST
Last Updated 12 ಅಕ್ಟೋಬರ್ 2012, 6:05 IST

ಶ್ರೀರಂಗಪಟ್ಟಣ: ಅ.9ರಂದು ಕೆಆರ್‌ಎಸ್ ಅಚ್ಚುಕಟ್ಟು ಪ್ರದೇಶದಲ್ಲಿ ಬಿದ್ದ ಭಾರಿ ಮಳೆಗೆ ನಾಲೆಗಳು ಒಡೆದು ಉಂಟಾಗಿರುವ ಹಾನಿಯ ಕುರಿತು ವರದಿ ಸಿದ್ಧಪಡಿಸಲು ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ತಂಡ ಗುರುವಾರ ತಾಲ್ಲೂಕಿನ ವಿವಿಧೆಡೆ ಪರಿಶೀಲನೆ ನಡೆಸಿತು.

ತಾಲ್ಲೂಕಿನ ಹೊಸ ಆನಂದೂರು, ಪಾಲಹಳ್ಳಿ. ಕಾರೇಕುರ, ಬ್ರಹ್ಮಪುರ, ರಂಗನತಿಟ್ಟು, ಕರಿಮಂಟಿ, ಬೊಮ್ಮೂರು ಅಗ್ರಹಾರ ವ್ಯಾಪ್ತಿಯಲ್ಲಿ ಬೆಳೆ ಹಾನಿಯಾಗಿದ್ದ ಸ್ಥಳಕ್ಕೆ ಈ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಬೆಳಗೊಳ ಉಪ ತಹಶೀಲ್ದಾರ್ ರೇಣುಕುಮಾರ್ ನೇತೃತ್ವದ ತಂಡ ಬೆಳಿಗ್ಗೆ 10ರಿಂದ ಸಂಜೆ 4.30ರ ವರೆಗೆ ಬೆಳೆ ಹಾನಿಯಾಗಿರುವ ಸ್ಥಳದಲ್ಲಿ ಸಂಚರಿಸಿತು. ವಿರಿಜಾ ನಾಲೆ 4 ಕಡೆ ಒಡೆದಿದ್ದು, ದೇವರಾಯ ಹಾಗೂ ಬಲದಂಡೆ ನಾಲೆಗಳು ಬೆಳಗೊಳ ಸಮೀಪ ಸಂಪೂರ್ಣ ಕುಸಿದಿವೆ. ನೂರಾರು ಎಕರೆ ಭತ್ತದ ಬೆಳೆ ಹಾನಿಯಾಗಿದೆ. ರಂಗನತಿಟ್ಟು ಇತರೆಡೆ ರಸ್ತೆಗಳು ಕಡ ಕೊಚ್ಚಿ ಹೋಗಿವೆ ಎಂದು ತಂಡದ ಸದಸ್ಯರು ತಿಳಿಸಿದರು.

ಲೋಕೋಪಯೋಗಿ, ತೋಟಗಾರಿಕೆ, ನೀರಾವರಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ತಂಡ ವಸ್ತುನಿಷ್ಠ ವರದಿ ತಯಾರಿಸಲಿದೆ. ಇನ್ನೆರಡು ದಿನಗಳಲ್ಲಿ ಸ್ಪಷ್ಟ ಚಿತ್ರಣ ಸಿಗಲಿದ್ದು, ತಹಶೀಲ್ದಾರ್ ಅವರಿಗೆ ನಷ್ಟದ ವರದಿ ಸಲ್ಲಿಸಲಾಗುವುದು ಎಂದು ರೇಣುಕುಮಾರ್ ತಿಳಿಸಿದರು.

ಅಧಿಕಾರಿಗಳ ತಂಡ ಪರಿಶೀಲನೆಗೆ ಬಂದ ವೇಳೆ ರೈತರು ಬೆಳೆ ನಷ್ಟದ ಕುರಿತು ಮಾಹಿತಿ ನೀಡಿದರು. ಬೆಳೆ, ಅದಕ್ಕೆ ಮಾಡಿದ ಖರ್ಚು, ನೀರಿನ ಅಭಾವ ಇತರ ವಿಷಯಗಳನ್ನು ತಿಳಿಸಿದರು. ಎಂಜಿನಿಯರ್‌ಗಳಾದ ತಮ್ಮೇಗೌಡ, ಶಿವಕುಮಾರ್, ನಾಗರಾಜು, ಪ್ರಸನ್ನ, ಕಂದಾಯ ನಿರೀಕ್ಷಕ ಪ್ರಸನ್ನ, ಗ್ರಾಮಲೆಕ್ಕಿಗ ಗಫೂರ್, ಕೃಷಿ ಅಧಿಕಾರಿ ಕೆ.ಟಿ.ರಂಗಯ್ಯ ಪರಿಶೀಲನಾ ತಂಡದಲ್ಲಿದ್ದರು.

ಕಾಮಗಾರಿಗೆ ಬಿರುಸು: ಭಾರಿ ಮಳೆಗೆ ಒಡೆದಿದ್ದ ಕೆಆರ್‌ಎಸ್ ಅಚ್ಚುಕಟ್ಟು ಪ್ರದೇಶದ ನಾಲೆಗಳ ದುರಸ್ತಿ ಕಾರ್ಯಕ್ಕೆ ಕಾವೇರಿ ನೀರಾವರಿ ನಿಗಮದ ಚಾಲನೆ ನೀಡಿದ್ದು, ಮೊದಲ ಹಂತವಾಗಿ ದೇವರಾಯ ನಾಲೆಯ ದುರಸ್ತಿ ಕಾರ್ಯ ಆರಂಭಿಸಿದೆ.

ತಾಲ್ಲೂಕಿನ ಬೆಳಗೊಳ ಬಳಿ ಒಡೆದಿದ್ದ ದೇವರಾಯ ನಾಲೆಯ ಏರಿಯನ್ನು ಯಂತ್ರಗಳ ಸಹಾಯದಿಂದ ರಿಪೇರಿ ಮಾಡಲಾಗುತ್ತಿದೆ.

 ಈ ನಾಲೆ ಕಾಮಗಾರಿ ಮುಗಿದ ನಂತರ ಆರ್‌ಬಿಎಲ್‌ಎಲ್ ಹಾಗೂ ವಿರಿಜಾ ನಾಲೆಗಳ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.