ಮಂಡ್ಯ: ನಗರಸಭೆಯ ಬಜೆಟ್‌ಗೆ ಅನುಮೋದನೆ ಪಡೆಯುವ ದಿನ ಹತ್ತಿರವಾದಂತೆ ನಿರೀಕ್ಷೆಗಳು ಹೆಚ್ಚುತ್ತಿವೆ. ಅಭಿವೃದ್ಧಿಯನ್ನು ನಿರೀಕ್ಷಿಸುವುದು ಈಗ ನಗರದ ಖಾಸಗಿ ಬಸ್ ನಿಲ್ದಾಣದ ಸರದಿ. ಈ ಕಟ್ಟಡ ನಗರಸಭೆಯ ಆಸ್ತಿಯೇ ಆದರೂ ನಿರ್ವಹಣೆಯನ್ನು ಮಾತ್ರ ಅಲಕ್ಷಿಸ ಲಾಗಿದೆ.
ನಿರ್ವಹಣೆಗಾಗಿ ವಾರ್ಷಿಕ ಟೆಂಡರ್ ಕರೆದು ಬಸ್‌ಗಳಿಂದ ನಿಗದಿತ ಹಣ ವಸೂಲಿ ಮಾಡಿದರೂ ಅದರ ಫಲಿತಾಂಶ ಅಭಿವೃದ್ಧಿಯಲ್ಲಿ ಕಾಣುತ್ತಿಲ್ಲ. ಎರಡು ದಿನದ ಹಿಂದೆ ಬಸ್ ನಿಲ್ದಾಣದ ಆವರಣಕ್ಕೆ ಭೇಟಿ ನೀಡಿದ ನಗರಸಭೆಯ ಅಧ್ಯಕ್ಷ ಎಂ.ಪಿ.ಅರುಣ್‌ಕುಮಾರ್, ಸದಸ್ಯ ನಂಜುಂಡಪ್ಪ, ಅಧಿಕಾರಿಗಳಿಗೆ ಅಲ್ಲಿನ ಅವ್ಯವಸ್ಥೆಯ ಸಾಕ್ಷಾತ್ ಅರಿವಾಗಿದೆ.
ನೀರಿನ ಟ್ಯಾಂಕ್ ಶುದ್ದೀಕರಿಸಿ ವರ್ಷಗಳೇ ಕಳೆದಿವೆ. ಟ್ಯಾಂಕ್‌ನ ನೀರು ಸೋರಿ ಅಲ್ಲಿ ಕೇವಲ ಪಾಚಿಯಷ್ಟೇ ಕಟ್ಟಿಲ್ಲ; ಛಾವಣಿಯ ಮೇಲೆ ಕಳೆ ಹುಲುಸಾಗಿ ಬೆಳೆದಿದೆ. ಇದು, ಕಟ್ಟಡದ ಮೇಲೂ ಪರಿಣಾಮ ಬೀರಲಿದೆ. ಸ್ವಚ್ಛತೆಗೆ ಆದ್ಯತೆಯನ್ನೇ ನೀಡಿಲ್ಲ ಎಂಬುದು ಮೇಲ್ನೋಟಕ್ಕೆ ಕಾಣಿಸುವಂಥ ಪರಿಸರ ಅದು.
ಇನ್ನು ನಿಲ್ದಾಣಕ್ಕೆ ಬಸ್ ನಿರೀಕ್ಷಿಸಿ ಬರುವ ಸಾರ್ವಜನಿಕರ ಪಾಡು ದೇವರಿಗೆ ಪ್ರೀತಿ. ಕುಳಿತುಕೊಳ್ಳಲು ವ್ಯವಸ್ಥೆ ಇಲ್ಲ. ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಇಲ್ಲ. ತ್ಯಾಜ್ಯ, ಗಲೀಜು ನೀರು ಸರಿಯಾಗಿ ಹೋಗಲು ವ್ಯವಸ್ಥೆಯಿಲ್ಲದೇ ಅಲ್ಲಲ್ಲಿಯೇ ಕಸದ ರಾಶಿ.
ಈ ನಿಲ್ದಾಣದಿಂದ ನಿತ್ಯ ಸರಾಸರಿ 100 ಬಸ್‌ಗಳು ಸಂಚರಿಸಲಿವೆ. ಬಸ್‌ಗಳಿಂದ ಶುಲ್ಕ ಸಂಗ್ರಹಿಸುವುದರಿಂದ ಮೂಲ ಸೌಕರ್ಯ ಒದಗಿಸುವ ಹೊಣೆಗಾರಿಕೆ ನಗರಸಭೆಯ ಜೊತೆಗೆ, ಖಾಸಗಿ ಬಸ್‌ಗಳ ಮಾಲೀಕರ ಮೇಲೂ ಇರುತ್ತದೆ.
ಬಸ್ ಮಾಲೀಕರು ಆಗಿರುವ ಸದಸ್ಯ ನಂಜುಂಡಪ್ಪ ಅವರು, ನಿರ್ವಹಣೆಗಾಗಿ ಹಣ ಸಂಗ್ರಹಿಸುತ್ತಾರೆ. ಅದರೆ, ಏನೂ ಆಗಿಲ್ಲ. ನಿಲ್ದಾಣದಲ್ಲಿ ಮಾಡಿರುವ ರಸ್ತೆಯೂ ಕಳಪೆಯದ್ದಾಗಿದೆ. ನಗರಸಭೆಯೇ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎನ್ನುತ್ತಾರೆ.
ಮತ್ತೊಮ್ಮೆ ಟೆಂಡರ್ ಕರೆಯುವ ಅವಧಿ ಹತ್ತಿರವಾದಂತೆ ಈಗ ಮತ್ತೆ ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ನೀಡುವ ಕಾರ್ಯ ಮಾಡಿದ್ದಾರೆ. ಅಧ್ಯಕ್ಷ ಅರುಣ್ ಕುಮಾರ್ ಅವರ ಪ್ರಕಾರ, ಹೊಸದಾಗಿ ಟೆಂಡರ್ ನೀಡುವಾಗ ಸ್ವಚ್ಛತೆ ಕುರಿತು ಕ್ರಮ ಕೈಗೊಳ್ಳುವ ಬಗೆಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು.
ಅಲ್ಲಿನ ಏಜೆಂಟರದು ‘ಏನ್ ಸಾರ್. ಬರ್ತಾರೆ. ನೋಡ್ಕೊಂಡು ಹೋಗ್ತಾರೆ. ಪರಿಸ್ಥಿತಿ ಏನೂ ಬದಲಾಗಲ್ಲ ಎಂಬ ಬೇಸರ. ಈಚೆಗೆ ನಗರಸಭೆ ಅಧಿಕಾರಿಗಳು ಬಂದು ಹೋದ ಬಳಿಕ ಸ್ವಲ್ಪ ಸ್ವಚ್ಛತೆ ಆಗಿದೆ. ನಿತ್ಯ ನೂರಾರು ಜನರು ಸಾರ್ವಜನಿಕರು ಓಡಾಡುವ ಈ ನಿಲ್ದಾಣದ ಸ್ವಚ್ಛತೆಗೆ ಇದೇ ಆಸಕ್ತಿ ಇರುತ್ತದಾ ಎಂಬ ಖಾತರಿ ಅಲ್ಲಿನ ಏಜೆಂಟರಿಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.