ADVERTISEMENT

ಇನ್‌ಮಾನ್ಸ್ ಜೈಲು ಮಾರ್ಗ ಬಂದ್

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2013, 6:21 IST
Last Updated 4 ಆಗಸ್ಟ್ 2013, 6:21 IST

ಶ್ರೀರಂಗಪಟ್ಟಣ: ಇಲ್ಲಿನ ಪ್ರಸಿದ್ಧ ಸ್ಮಾರಕಗಳಲ್ಲಿ ಒಂದಾದ ಥಾಮಸ್ ಇನ್‌ಮಾನ್ಸ್ ಜೈಲಿಗೆ ಸಂಪರ್ಕ ಕಲ್ಪಿಸುವ ಮಾರ್ಗ ಸಂಪೂರ್ಣ ಬಂದ್ ಆಗಿದೆ. ಟಿಪ್ಪು ಸುಲ್ತಾನ್ ತಂದೆ ಹೈದರ್ ಅಲಿಖಾನ್ ಕಾಲದಲ್ಲಿ ನಿರ್ಮಾಣವಾಗಿರುವ ಈ ಸ್ಮಾರಕಕ್ಕೆ ತೆರಳುವ ಮಾರ್ಗದಗುಂಟ ಕಾವೇರಿ ನದಿಯ ನೀರು ಉಕ್ಕಿ ಹರಿಯುತ್ತಿದೆ. ಇದರಿಂದ ಶನಿವಾರ ಬೆಳಿಗ್ಗೆಯಿಂದ ಡಂಜನ್ (ಸೆರೆಮನೆ) ದಾರಿ ಜಲಾವೃತವಾಗಿದೆ.

ಪ್ರವಾಸಿಗರು ದೂರದಲ್ಲಿ ನಿಂತು ಈ ಸ್ಮಾರಕವನ್ನು ವೀಕ್ಷಿಸಿ ಹೋಗುತ್ತಿದ್ದಾರೆ. ಡಂಜನ್ ಸುತ್ತ ಸುಮಾರು 6 ಅಡಿಯಷ್ಟು ನೀರು ನಿಂತಿದೆ. ಕೋಟೆ, ಕಂದಕಗಳಿಗೆ ನೀರಿನ ಅಲೆಗಳು ತಾಕುತ್ತಿವೆ. ಇಲ್ಲಿಗೆ ಸಮೀಪದ ಬಿದ್ಕೋಟೆ ಗಣಪತಿ ದೇವಸ್ಥಾನದ ಮೆಟ್ಟಿಲುಗಳು ನೀರಿನಲ್ಲಿ ಮುಳುಗಿವೆ.  ಜನ ಸಾಗರ: ನದಿಯಲ್ಲಿ ನೀರಿನ ಮಟ್ಟ ಹೆಚ್ಚಿದ್ದರಿಂದ ಶನಿವಾರ ನದಿಯ ದಂಡೆಯಲ್ಲಿ ಜನ ಜಾತ್ರೆಯೇ ನೆರೆದಿತ್ತು. ವೆಲ್ಲೆಸ್ಲಿ ಸೇತುವೆ ಬಳಿ ನೂರಾರು ಮಂದಿ ಭೇಟಿ ನೀಡಿ ನದಿಯ ಭೋರ್ಗರೆತವನ್ನು ವೀಕ್ಷಿಸುತ್ತಿದ್ದ ದೃಶ್ಯ ಕಂಡುಬಂತು. ಜನ ಜಾತ್ರೆ ಸೇರಿದ್ದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿತ್ತು. ಶನಿವಾರ ಪಟ್ಟಣದಲ್ಲಿ ವಾರದ ಸಂತೆ ನಡೆಯುವುದರಿಂದ ಅಕ್ಕಪಕ್ಕದ ಊರುಗಳಿಂದ ಸಾಮಾನು ಸರಂಜಾಮು ಕೊಳ್ಳಲು ಬಂದವರು ನದಿಯ ದಂಡೆಗೆ ಭೇಟಿ ನೀಡುತ್ತಿದ್ದುದು ಸಾಮಾನ್ಯವಾಗಿತ್ತು. ವಿವಿಧ ಇಲಾಖೆಗಳ ನೌಕರರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಮೈದುಂಬಿ ಹರಿಯುತ್ತಿದ್ದ ಕಾವೇರಿ ನದಿಯನ್ನು ಕಣ್ತುಂಬಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.