ADVERTISEMENT

ಉದ್ಯೋಗ ಖಾತ್ರಿ: ಕೂಲಿ ಹೆಚ್ಚಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಜನವರಿ 2014, 5:13 IST
Last Updated 8 ಜನವರಿ 2014, 5:13 IST

ಶ್ರೀರಂಗಪಟ್ಟಣ:  ಉದ್ಯೋಗ ಖಾತರಿ ಯೋಜನೆಯಡಿ ಕೈಗೊಳ್ಳುವ ಕೆಲಸಗಳಿಗೆ ನೀಡುತ್ತಿರುವ ಕೂಲಿ ಕಡಿಮೆ ಇದ್ದು, ಕನಿಷ್ಟ ರೂ.300ಕ್ಕೆ ಹೆಚ್ಚಿಸಬೇಕು ಎಂದು ರೈತರು ಒತ್ತಾಯಿಸಿದರು.

ತಾಲ್ಲೂಕಿನ ತಡಗವಾಡಿ ಗ್ರಾಮದಲ್ಲಿಉದ್ಯೋಗ ಖಾತ್ರಿ ಯೋಜನೆಯ 2013–14ನೇ ಸಾಲಿನ ಸಾಮಾಜಿಕ ಪರಿಶೋಧನೆ ಹಿನ್ನೆಲೆಯಲ್ಲಿ ಈಚೆಗೆ ನಡೆದ ಗ್ರಾಮ ಸಭೆಯಲ್ಲಿ ಈ ಒತ್ತಾಯ ಕೇಳಿಬಂತು. ಈ ಯೋಜನೆಯಡಿ ಕೆಲಸ ಮಾಡುವ ಕಾರ್ಮಿಕರಿಗೆ ದಿನವೊಂದಕ್ಕೆ  ರೂ.174 ಕೂಲಿ ನೀಡಲಾಗುತ್ತಿದೆ. ಅಗತ್ಯ ವಸ್ತುಗಳ ಬೆಲೆ ದುಪ್ಪಟ್ಟಾಗಿರುವುದರಿಂದ ಕೂಲಿಯ ಮೊತ್ತವನ್ನು ಹೆಚ್ಚಿಸಬೇಕು. ಒಂದು ಎಕರೆ ಜಮೀನು ಸಮತಟ್ಟು ಮಾಡಿದರೆ ಜಲಾನಯ ಇಲಾಖೆ ಕೇವಲ ರೂ.6 ಸಾವಿರ ಹಣ ನೀಡುತ್ತದೆ.

ಇದರಿಂದ ಬದು ನಿರ್ಮಿಸಿಕೊಳ್ಳುವುದೂ ಕಷ್ಟ. ಹಾಗಾಗಿ ಒಂದು ಎಕರೆಗೆ ರೂ.15 ಸಾವಿರ ಹಣ ನೀಡಬೇಕು ಎಂದು ಬಳ್ಳಾರಿಗೌಡ ಇತರರು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಲಾನಯನ ಇಲಾಖೆ ಅಧಿಕಾರಿ ದೇವೇಗೌಡ, ಒಂದು ಎಕರೆ ಜಮೀನು ಸಮತಟ್ಟು ಮಾಡಲು ಇಂತಿಷ್ಟೇ ಹಣ ನೀಡಬೇಕು ಎಂದು ಸರ್ಕಾರದ ನಿಯಮ ಇದ್ದು, ಅದಕ್ಕಿಂತ ಹೆಚ್ಚು ಹಣ ಕೊಡಲು ಸಾಧ್ಯವಿಲ್ಲ ಎಂದು ಹೇಳಿದರು.

ಗ್ರಾ.ಪಂ. ನೋಡೆಲ್‌ ಅಧಿಕಾರಿ ಮಹೇಶ್‌ಕುಮಾರ್‌ ಮಾಗೆ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಡಿ, ಹಿಪ್ಪುನೇರಳೆ ತೋಟ ಬೆಳೆಸಲು, ರೇಷ್ಮೆ ಹುಳು ಸಾಕಣೆ ಮನೆ ನಿರ್ಮಾಣ, ದನ ಮತ್ತು ಕುರಿ ಕೊಟ್ಟಿಗೆ ನಿರ್ಮಿಸಿಕೊಳ್ಳಲು ಉದ್ಯೋಗ ಭರವಸೆ ಯೋಜನೆಯಲ್ಲಿ ಅವಕಾಶ ಇದ್ದು, ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು. ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರವಿಕುಮಾರ್‌, ತೋಟಗಾರಿಕೆ ಇಲಾಖೆ ಸಹಾಯಕ ಅಧಿಕಾರಿ ಹೊಂಬೇಗೌಡ, ಗ್ರಾ.ಪಂ. ಅಧ್ಯಕ್ಷೆ ಭಾರತಿ, ಉಪಾಧ್ಯಕ್ಷೆ ಶಶಿಕಲಾ ಸಿದ್ದಲಿಂಗು, ಸದಸ್ಯರಾದ ದೇವೇಗೌಡ, ಮರೀಗೌಡ, ಅಭಿವೃದ್ಧಿ ಅಧಿಕಾರಿ ಸಿ.ವಿ.ರಮೇಶ್‌ಮೂರ್ತಿ, ಕಾರ್ಯದರ್ಶಿ ಮಹಲಿಂಗೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.