ADVERTISEMENT

ಕನ್ನಡ ಅಭಿವೃದ್ಧಿಯ ವೇಗ ಕ್ಷೀಣ: ನ್ಯಾಯಾಧೀಶ ಅಭಿಮತ

​ಪ್ರಜಾವಾಣಿ ವಾರ್ತೆ
Published 10 ಜೂನ್ 2013, 5:27 IST
Last Updated 10 ಜೂನ್ 2013, 5:27 IST

(ವೀರಯೋಧ ಸತೀಶ್ ವೇದಿಕೆ) ಕೆ.ಆರ್. ಪೇಟೆ: `ಕನ್ನಡ ಭಾಷೆಯು ನಿರೀಕ್ಷಿಸಿದಷ್ಟು ಅಭಿವೃದ್ಧಿಯಾಗಿಲ್ಲ. ಭಾಷೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು' ಎಂದು ಜಿಲ್ಲಾ ಪ್ರಧಾನ ನ್ಯಾಯಾಧೀಶ ಬಿ. ಶಿವಲಿಂಗೇಗೌಡ ಹೇಳಿದರು.

ಪಟ್ಟಣದಲ್ಲಿ ಭಾನುವಾರ ನಡೆದ ಜಿಲ್ಲಾಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಕನ್ನಡವು ಇಂದಿಗೂ ಸಂಪೂರ್ಣವಾಗಿ ಆಡಳಿತದ ಭಾಷೆಯಾಗಿಲ್ಲ. ಕನ್ನಡ ಭಾಷೆಯ ಮಟ್ಟಿಗೆ ನಾವು ದುಷ್ಟರು, ಭ್ರಷ್ಟರೂ ಆಗಿದ್ದೇವೆ. ಕನ್ನಡಕ್ಕೆ ಆಗಾಗ ಅಪಚಾರ ಆಗುತ್ತಲೇ ಇದೆ. ಭಾಷೆ ಉಳಿಸಲು ಮನಸ್ಸು ಮಾಡಬೇಕು ಎಂದರು.

ಭಾಷೆ ಉಳಿಸಿಕೊಳ್ಳಲು ಸರ್ಕಾರದ ಒತ್ತಾಸೆ ಬೇಕೆ ಎಂದು ಪ್ರಶ್ನಿಸಿದ ಅವರು, ಹಕ್ಕು, ಸೌಲಭ್ಯ ಕೇಳುತ್ತೇವೆ. ಆದರೆ ಭಾಷೆಯ ಉಳಿವಿಕೆಯ ಕರ್ತವ್ಯ ನಿರ್ವಹಿಸುತ್ತಿಲ್ಲ. ಉಳಿದ ಭಾಷೆಗಳನ್ನು ಕಲಿಯಬೇಕು. ಮೊದಲ ಆದ್ಯತೆಯನ್ನು ಕನ್ನಡಕ್ಕೆ ನೀಡಬೇಕು ಎಂದು ಹೇಳಿದರು.

ಭಾಷೆ ಕೇವಲ ವ್ಯವಹಾರದ ಮಾಧ್ಯಮವಾಗಿ ಮಾತ್ರ ಬಳಕೆಯಾಗುವುದಿಲ್ಲ. ಆ ಭಾಗದ ಚರಿತ್ರೆ, ಸಂಸ್ಕೃತಿ, ಆಚಾರ-ವಿಚಾರಗಳನ್ನೂ ಬಿಂಬಿಸುತ್ತದೆ. ಭಾಷೆಯು ಭಾವನೆಗಳ ವಿನಿಯಮ ಕೊಂಡಿಯಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಹೈಕೋರ್ಟ್ ನ್ಯಾಯಾಧೀಶ ಬಿ.ಶ್ರೀನಿವಾಸ್‌ಗೌಡ ಮಾತನಾಡಿ, ಪ್ರಪಂಚದ ಮೂಲೆ, ಮೂಲೆಗಳಲ್ಲಿಯೂ ಮಂಡ್ಯ ಜಿಲ್ಲೆಯು ತನ್ನದೇ ಆದ ಛಾಪು ಮೂಡಿಸಿದೆ ಎಂದರು.

ಆರ್.ಜಿ. ಮಹದೇವಸ್ವಾಮಿ, ಕೆ.ವಿ. ಬಸವರಾಜು, ಡಾ.ಎಚ್.ಎಂ. ನಾಗರಾಜು, ಸ್ಯಾಮ್ಯುಯಲ್ ಸತ್ಯಕುಮಾರ್, ಡಾ.ಸುಜಯ ಕುಮಾರ್, ಸುಶೀಲ ಹೊನ್ನೇಗೌಡ, ಪ್ರಮೀಳ ಧರಣೇಂದ್ರಯ್ಯ, ಹೆಮ್ಮಿಗೆ ಬಸವರಾಜು, ಲಕ್ಷ್ಮಿದೇವಮ್ಮ ಹೊಸಕೋಟೆ, ಬಸಪ್ಪ ನೆಲಮಾಕನಹಳ್ಳಿ ಅವರನ್ನು ಸನ್ಮಾನಿಸಲಾಯಿತು.

ಶಾಸಕ ಕೆ.ಸಿ. ನಾರಾಯಣಗೌಡ, ಮಕ್‌ಬುಲ್ ಅಹ್ಮದ್ ಷರೀಫ್, ಮೈಕಲ್ ಅಗಸ್ಟಿನ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್. ಲಿಂಗಣ್ಣ, ಕಸಾಪ ಜಿಲ್ಲಾ ಘಟಕದ  ಅಧ್ಯಕ್ಷೆ    ಮೀರಾ ಶಿವಲಿಂಗಯ್ಯ ಉಪಸ್ಥಿತರಿದ್ದರು.

ಪಟ್ಟಣ ವ್ಯಾಮೋಹ ಏಕೆ? ಹಳ್ಳಿಗರಿಗೆ ಪ್ರಶ್ನೆ
ಮಂಡ್ಯ: ಜೀವನಾಧಾರವಾದ ಭೂಮಿ ಮಾರಾಟ ಮಾಡಿ ಹಳ್ಳಿಗಳ ಯುವಕರು ಪಟ್ಟಣದತ್ತ ಮುಖ ಮಾಡಿದ್ದಾರೆ. ಪರಿಣಾಮ ಕೃಷಿ ಚಟುವಟಿಕೆ ಮಾಡುವುದು ಕಷ್ಟಕರವಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಎನ್. ಕೃಷ್ಣಯ್ಯ ಹೇಳಿದರು.

ಜಿಲ್ಲೆಯ ಕೆ.ಆರ್. ಪೇಟೆಯಲ್ಲಿ ಭಾನುವಾರ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ `ನೆಲ, ಜಲ, ಸಂರಕ್ಷಣೆ' ವಿಷಯ ಕುರಿತು ಮಾತನಾಡಿದರು.
ರಸಾಯನಿಕ ಗೊಬ್ಬರ ಹೆಚ್ಚಿನ ಬಳಕೆಯಿಂದಾಗಿ ಭೂಮಿ ಫಲವತ್ತತೆಯನ್ನು ಕಳೆದುಕೊಂಡಿದೆ. ಆದ್ದರಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚಲು ಫಸಲು ಪಡೆಯುವ ನೈಸರ್ಗಿಕ ಹಾಗೂ ಸಾವಯವ ಕೃಷಿ ಮಾಡಬೇಕು ಎಂದು ಸಲಹೆ ಮಾಡಿದರು.

ಪಟ್ಟಣ ಪ್ರದೇಶವನ್ನು ವ್ಯಾಪಿಸಿದ್ದ ರಿಯಲ್ ಎಸ್ಟೇಟ್ ದಂಧೆಯು ಇದೀಗ ಹಳ್ಳಿಗಳಿಗೂ ವ್ಯಾಪಿಸಿದೆ. ಪರಿಣಾಮ ಭೂಮಿಯ ಮಾರಾಟ ಜೋರಾಗಿದೆ. ಪರಿಣಾಮ ಮುಂದಿನ ದಿನಗಳಲ್ಲಿ ಆಹಾರ ಸಮಸ್ಯೆ ಉಂಟಾಗಲಿದೆ ಎಂದರು.

ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಇದಕ್ಕೆ ಸಾರ್ವಜನಿಕರೂ ಸಹಕಾರ ನೀಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ವೈದ್ಯಕೀಯ ಶಿಕ್ಷಣ ಇಲಾಖೆಯ ನಿವೃತ್ತ ಪ್ರಧಾನ ಕಾರ್ಯದರ್ಶಿ ಕೆ.ಎಚ್.ಗೋಪಾಲ ಕೃಷ್ಣೇಗೌಡ ಮಾತನಾಡಿ,  ಸಮಸ್ಯೆಗಳ ಸುಳಿಯಲ್ಲಿ ಬದುಕು ಸಾಗುತ್ತಿದೆಯಾದರೂ ಇರುವ ವ್ಯವಸ್ಥೆಯನ್ನೇ ಸದುಪ ಯೋಗಪಡಿಸಿಕೊಂಡು ಸಾರ್ಥಕ ಜೀವನ ನಡೆಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.

ಸಾಹಿತ್ಯ ಸಮ್ಮೇಳನಗಳು ಮನಸ್ಸಿಗೆ ಶಾಂತಿ ನೆಮ್ಮದಿಯನ್ನು ನೀಡಬೇಕು ಹೇಳಿದರು. ಡಾ.ಬಿ.ಶಿವಲಿಂಗಯ್ಯ `ವಿದ್ಯುತ್ ಕೊರತೆ ನಿವಾರಿಸುವಲ್ಲಿ ಅನುಸರಿಸಬಹುದಾದ ಪರ್ಯಾಯ ವಿಧಾನಗಳು' ಕುರಿತು ಹಾಗೂ ಜಿ.ಪಂ. ಮುಖ್ಯ ಕಾರ್ಯನಿವಾರ್ಹಕ ಅಧಿಕಾರಿ ಪಿ.ಸಿ. ಜಯಣ್ಣ ಅವರು `ಜಿಲ್ಲೆಯ ಗ್ರಾಮೀಣ ಸಮಸ್ಯೆಗಳು' ಕುರಿತು ಮಾತನಾಡಿದರು. ಸಮ್ಮೇಳನಾಧ್ಯಕ್ಷ ಪ್ರೊ.ಎಚ್.ಎಲ್.ಕೇಶವ ಮೂರ್ತಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.