ADVERTISEMENT

ಕಲಾವಿದರೊಬ್ಬರ ಮಾದರಿ ಶಿಕ್ಷಣ ಸೇವೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2011, 9:30 IST
Last Updated 12 ಜೂನ್ 2011, 9:30 IST

ಮದ್ದೂರು: ಕಳೆದ 15ವರ್ಷಗಳಿಂದ ತಾಲ್ಲೂಕಿನ ಹಲವು ಶಾಲೆಗಳಿಗೆ ತಮ್ಮ ಕುಂಚದಿಂದ ಗೋಡೆ ಬರಹ ಹಾಗೂ ಚಿತ್ರಗಳನ್ನು ರಚಿಸಿ `ಬಣ್ಣದ ಶಾಲೆ~ಗಳನ್ನು  ಸೃಜಿಸಿದ್ದ ಚಿತ್ರ ಕಲಾವಿದ ತೂಬಿನಕೆರೆ ಗೋವಿಂದ್.  ಇದೀಗ ನಲಿ-ಕಲಿ ವಿನೂತನ ಬೋಧನಾ ಭಾಷಾ ತಟ್ಟೆಗಳ ರಚನೆಗೆ ಮುಂದಾಗಿದ್ದಾರೆ. 

ಮಕ್ಕಳ ಸಂತಸದಾಯಕ ಕಲಿಕೆಗಾಗಿ ಸರ್ಕಾರ ಮೂರು ವರ್ಷಗಳಿಂದ ನಲಿ-ಕಲಿ ವಿನೂತನ ಬೋಧನಾ ಚಟುವಟಿಕೆ ಜಾರಿಗೊಳಿಸಿದೆ. ವಿಧಾನದ ಬಗೆಗೆ ಕಲಾವಿದ ತೂಬಿನಕೆರೆ ಗೋವಿಂದ್ ಇದೀಗ ತಮ್ಮ ಗೆಳೆಯರ ಸಹಕಾರದೊಂದಿಗೆ ನಲಿ-ಕಲಿ ಬೋಧನೆಗೆ ಬೇಕಾದ ಕಲಿಕಾ ಸಾಮಗ್ರಿಗಳ ರಚನೆ ಹಾಗೂ ಅಳವಡಿಕೆಗೆ ಉತ್ಸಾಹ ತೋರಿದ್ದಾರೆ. 

ತಾಲ್ಲೂಕಿನ ಮರಕಾಡದೊಡ್ಡಿ, ಕುದುರುಗುಂಡಿ ಕಾಲೋನಿ, ಹೊಸಹಳ್ಳಿದೊಡ್ಡಿ, ಕುರಿದೊಡ್ಡಿ, ಹುನುಗನಹಳ್ಳಿ, ತೂಬಿನಕೆರೆ, ಕೆಸ್ತೂರಿನ ಉರ್ದು ಶಾಲೆಗಳ ಕೊಠಡಿಗಳ ನೆಲದಲ್ಲಿ ಈಗಾಗಲೇ ಗೋವಿಂದ್ ಅವರ ಕೈಚಳಕದಿಂದ ಕಲಿಕಾ ತಟ್ಟೆಗಳು ಅರಳಿವೆ. 

`ಒಂದು ಕೊಠಡಿಗೆ ಐದು ಕಲಿಕಾ ತಟ್ಟೆ ರಚಿಸಲಾಗಿದೆ. ಈ ತಟ್ಟೆಗಳಲ್ಲಿ ಭಾಷೆ ಮತ್ತು ಗಣಿತ ಹಾಗೂ ಪರಿಸರ ಅಧ್ಯಯನಕ್ಕೆ ಸಂಬಂಧಿಸಿದ ವಿಚಾರಗಳಿವೆ. ಇದು, ಪಠ್ಯಪುಸ್ತಕಗಳ ಹಂಗಿಲ್ಲದೇ ಕಲಿಸುವ ವಿನೂತನ ಮಾಧ್ಯಮ. ಈ ತಟ್ಟೆಗಳಲ್ಲಿ ಮಕ್ಕಳನ್ನು ನಿಲ್ಲಿಸಿ ಹಾಡು, ನೃತ್ಯ ಇನ್ನಿತರ ಚಟುವಟಿಕೆಗಳನ್ನು ಆಯೋಜಿಸಬಹುದಾಗಿದೆ.

ಈ ಮೂಲಕ ಕಲಿಕೆಯನ್ನು ಸಂತಸದಾಯಕವಾಗಿಸುವ ವಿನೂತನ ಕೌಶಲ್ಯ ಇದಾಗಿದೆ~ ಎನ್ನುವ ಗೋವಿಂದ್ ಮಕ್ಕಳ ಸೃಜನಾತ್ಮಕ ಕಲಿಕೆಗೆ ತಮ್ಮದು ಅಳಿಲು ಸೇವೆ ಎನ್ನುತ್ತಾರೆ.

ಜಾಗೃತಿ ಬರಹ: ಏಡ್ಸ್, ಡೆಂಗೆ ಜ್ವರ ಜಾಗೃತಿ ಸೇರಿದಂತೆ ಪರಿಸರ ನೈರ್ಮಲ್ಯದ ಕುರಿತು ಇವರ ಜಾಗೃತಿ ಚಿತ್ರ ಬರಹಗಳು ಗಮನ ಸೆಳೆದಿವೆ. ಸೂಪರ್ ಮೂನ್, ಪರಿಸರ ಸಂವರ್ಧನೆ ಸೇರಿದಂತೆ ಇತ್ತೀಚೆಗೆ ಭ್ರಷ್ಟಚಾರ ವಿರೋಧಿ ಆಂದೋಲನ ಕುರಿತು ಗೋವಿಂದ್ ಹಲವು ಗೋಡೆ ಬರಹಗಳನ್ನು ರಚಿಸಿ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.

ಲಾಭದ ಬಗ್ಗೆ ಎಂದೂ ಯೋಚಿಸದ ತೂಬಿನಕೆರೆ ಗೋವಿಂದ್ ಮಕ್ಕಳ ಕಲಿಕೆ ಉತ್ತಮಗೊಳ್ಳಲಿ ಎಂಬ ನಿಟ್ಟಿನಲ್ಲಿ ಕೆಸ್ತೂರಿನಲ್ಲಿ  `ಕುವೆಂಪು ಗ್ರಾಮೀಣ ಮಕ್ಕಳ ಸಾಂಸ್ಕೃತಿಕ ಕಲಾ ವೇದಿಕೆ~ ಆರಂಭಿಸಿದ್ದಾರೆ. ಈ ಮೂಲಕ ಪ್ರತಿ ವರ್ಷ ಉಚಿತ ಬೇಸಿಗೆ ಶಿಬಿರ ಏರ್ಪಡಿಸಿ, ತಮ್ಮ ಚಿತ್ರಕಲೆ ನೈಪುಣ್ಯತೆಯನ್ನು ಮಕ್ಕಳಿಗೆ ಧಾರೆಯರೆಯುತ್ತಿದ್ದಾರೆ. ಗೋವಿಂದ್ ಅವರನ್ನು (ಮೊ.9341664198) ಸಂಪರ್ಕಿಸಬಹುದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.