ADVERTISEMENT

ಕೆಆರ್‌ಎಸ್‌ಗೆ ಖಾಕಿ ಸರ್ಪಗಾವಲು

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 19:30 IST
Last Updated 2 ಅಕ್ಟೋಬರ್ 2012, 19:30 IST

ಮಂಡ್ಯ: ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯು ಅ.3 ರಂದು ಕೃಷ್ಣರಾಜಸಾಗರ ಜಲಾಶಯಕ್ಕೆ ಮುತ್ತಿಗೆ ಹಾಕುವುದಾಗಿ ಘೋಷಿಸಿರುವ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಖಾಕಿ ಸರ್ಪಗಾವಲು ಹಾಕಲಾಗಿದೆ.

ಜಲಾಶಯ ಪ್ರವೇಶಿಸುವ ಮುಖ್ಯದ್ವಾರ, ಉತ್ತರ ದಡದ ದ್ವಾರ ಹಾಗೂ ಬೃಂದಾವನದ ದ್ವಾರವಲ್ಲದೇ ವಿವಿಧೆಡೆ ಪ್ರತಿಭಟನಾಕಾರರು ಪ್ರವೇಶಿಸದಂತೆ ತಾತ್ಕಾಲಿಕ ಬೇಲಿ ನಿರ್ಮಿಸಲಾಗಿದೆ. ಏಳು ಅಡಿಗೂ ಹೆಚ್ಚು ಎತ್ತರದ ತಂತಿ ಬೇಲಿ ನಿರ್ಮಿಸಲಾಗಿದ್ದೂ ಯಾವುದೇ ಕಾರಣಕ್ಕೂ ಪ್ರತಿಭಟನಾಕಾರರು ಒಳಕ್ಕೆ ಪ್ರವೇಶಿಸದಂತೆ ಕ್ರಮಕೈಗೊಳ್ಳಲಾಗಿದೆ.

ಒಂದು ತುಕಡಿ ಗಡಿ ಭದ್ರತಾ ಪಡೆ, ಒಂದು ತುಕಡಿ ಕ್ಷಿಪ್ರ ಕಾರ್ಯಾಚರಣೆ ಪಡೆ, 15 ತುಕಡಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ, ಐವರು ಡಿವೈಎಸ್‌ಪಿ, 10 ಮಂದಿ ಇನ್‌ಸ್ಪೆಕ್ಟರ್, 15 ಮಂದಿ ಸಬ್ ಇನ್‌ಸ್ಪೆಕ್ಟರ್, 200 ಮಂದಿ ಮುಖ್ಯ ಪೇದೆಗಳನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ.

ಕೇಂದ್ರ ವಲಯ ಐಜಿಪಿ ಅಮರಕುಮಾರ್ ಪಾಂಡೆ, ಜಿಲ್ಲಾಧಿಕಾರಿ ಬಿ.ಎನ್. ಕೃಷ್ಣಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೌಶಲೇಂದ್ರಕುಮಾರ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎ.ಎನ್. ರಾಜಣ್ಣ ಮತ್ತಿತರರು ಸಭೆ ನಡೆಸಿದರು. ನಂತರ ಬಂದೋಬಸ್ತ್ ಪರಿಶೀಲಿಸಿದರು.

ನಿಷೇಧಾಜ್ಞೆ: ಕೆಆರ್‌ಎಸ್ ಜಲಾಶಯ ಪ್ರದೇಶದ ಒಂದು ಕಿ.ಮೀ. ವ್ಯಾಪ್ತಿಯವರೆಗೂ ಅ.3 ರಂದು ನಿಷೇಧಾಜ್ಞೆಯನ್ನು ವಿಧಿಸಿ ಪಾಂಡವಪುರ ಉಪವಿಭಾಗಾಧಿಕಾರಿ ಆರ್.ಲತಾ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ಇದ್ದ 200 ಮೀಟರ್ ವ್ಯಾಪ್ತಿಯನ್ನು ಒಂದು ಕಿ.ಮೀ.ಗೆ ವಿಸ್ತರಿಸಲಾಗಿದೆ. ಪರಿಣಾಮ ಬೆಳಗೋಳ, ಬಸ್ತಿಪುರ ಗ್ರಾಮಗಳೂ ಈಗ ನಿಷೇಧಾಜ್ಞೆ ವ್ಯಾಪ್ತಿಗೆ ಒಳಪಟ್ಟಿವೆ.

ಹಿತರಕ್ಷಣಾ ಸಮಿತಿ ಪಡೆ ಸಜ್ಜು: ಕೆಆರ್‌ಎಸ್ ಜಲಾಶಯಕ್ಕೆ ಮುತ್ತಿಗೆ ಹಾಕಲು ಕರೆ ನೀಡಿರುವ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಶ್ರೀರಂಗಪಟ್ಟಣ ಸೇರಿದಂತೆ ವಿವಿಧೆಡೆ ಡಂಗುರ ಹೊಡೆಸಲಾಗಿದೆ.

ಖಾಸಗಿ ಬಸ್, ಲಾರಿ, ಟೆಂಪೊ ಟ್ರ್ಯಾಕ್ಸ್, ಗೂಡ್ಸ್ ವಾಹನಗಳನ್ನು ನೀಡಲು ವಾಹನಗಳ ಮಾಲೀಕರು ಸ್ವಯಂ ಆಗಿ ಮುಂದೆ ಬಂದಿದ್ದಾರೆ. ಇವುಗಳನ್ನು ಗ್ರಾಮವಾರು ಹಂಚಿಕೆ ಮಾಡಲಾಗಿದೆ. ಪ್ರತಿ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಶಾಸಕರುಗಳೂ ಸಭೆ ನಡೆಸಿದ್ದು, ಸಾರ್ವಜನಿಕರನ್ನು ಪ್ರತಿಭಟನೆಗೆ ಬರಬೇಕು ಎಂದು ಮನವಿ ಮಾಡಿದ್ದಾರೆ.

ಬೆಳಿಗ್ಗೆ 8 ಗಂಟೆಯಿಂದಲೇ ಜಿಲ್ಲೆಯ ವಿವಿಧೆಡೆಯಿಂದ ಹೊರಡಬೇಕು. 10 ಗಂಟೆಯ ವೇಳೆಗೆ ಕೆಆರ್‌ಎಸ್ ಅಣೆಕಟ್ಟಿನ ಬಳಿ ಜಮಾವಣೆಗೊಳ್ಳಬೇಕು ಎಂದು ಕರೆ ನೀಡಲಾಗಿದೆ.

ಶಾಲಾ-ಕಾಲೇಜು ರಜೆ
ಮಂಡ್ಯ: ಕಾವೇರಿ ಹೋರಾಟದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅ.3 ರಂದು ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಜಿಲ್ಲಾಧಿಕಾರಿ ಬಿ.ಎನ್.ಕೃಷ್ಣಯ್ಯ ರಜೆ ಘೋಷಿಸಿದ್ದಾರೆ.

ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಅಂದು ನಡೆಯಬೇಕಾಗಿದ್ದ ವಿಜ್ಞಾನ ಪರೀಕ್ಷೆಯನ್ನೂ ಮುಂದೂಡಲಾಗಿದ್ದು, ಪರೀಕ್ಷಾ ದಿನಾಂಕವನ್ನು ಶಾಲೆಗಳಿಗೆ ನಂತರ ತಿಳಿಸಲಾಗುವುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.