ADVERTISEMENT

ಕೆಸ್ತೂರಿನಲ್ಲಿ ಕಸ್ತೂರ ಬಾ ವಸತಿ ಶಾಲೆ

ಪ್ರೌಢಶಾಲಾ ಸಹಶಿಕ್ಷಕರ ವಾರ್ಷಿಕ ಸಭೆಯಲ್ಲಿ ಶಾಸಕ ತಮ್ಮಣ್ಣ ಅಭಿಮತ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2017, 11:42 IST
Last Updated 31 ಡಿಸೆಂಬರ್ 2017, 11:42 IST

ಮದ್ದೂರು: ತಾಲ್ಲೂಕಿನ ಕೆಸ್ತೂರಿನಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ‘ಕಸ್ತೂರ ಬಾ ವಸತಿ ಶಾಲೆ’ ಆರಂಭಿಸಲು ಸರ್ಕಾರ ಅನುಮೋದನೆ ನೀಡಿದೆ ಎಂದು ಶಾಸಕ ಡಿ.ಸಿ.ತಮ್ಮಣ್ಣ ತಿಳಿಸಿದರು.

ಸಮೀಪದ ಶಿವಪುರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈಗಾಗಲೇ ತಾಲ್ಲೂಕಿನಲ್ಲಿ 4 ವಸತಿ ಶಾಲೆಗಳಿವೆ. ಈ ಶಾಲೆಗಳ ಕಟ್ಟಡ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಈಗಾಗಲೇ ₹ 15 ಕೋಟಿ ಬಿಡುಗಡೆ ಮಾಡಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ADVERTISEMENT

‘ಮೂರು ಬಾರಿ ಶಾಸಕನಾಗಿ ಗ್ರಾಮೀಣ ಭಾಗದ ಶಿಕ್ಷಣದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಸ್ನಾತಕೋತ್ತರ ಕೇಂದ್ರದ ಅಭಿವೃದ್ಧಿಗೆ ₹ 2 ಕೋಟಿ, ಸರ್ಕಾರಿ ಉಪಕರಣ ಹಾಗೂ ಕೈಗಾರಿಕಾ ತರಬೇತಿ ಕೇಂದ್ರಕ್ಕೆ ₹ 8 ಕೋಟಿ ಬಿಡುಗಡೆಯಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉನ್ನತ ಹಾಗೂ ತಾಂತ್ರಿಕ ಶಿಕ್ಷಣ ಪಡೆಯಲು ಅಗತ್ಯವಾದ ತರಬೇತಿ ಹಾಗೂ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರು ಹೆಚ್ಚಿನ ಕಾಳಜಿ ವಹಿಬೇಕು’ ಎಂದು ಮನವಿ ಮಾಡಿದರು.

ದಕ್ಷಿಣ ಪ್ರಾಂತ ಭಾರತ ವಿಕಾಸ ಪರಿಷತ್‌ ಅಧ್ಯಕ್ಷ ಡಿ.ಪಿ.ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಕೃಷ್ಣೇಗೌಡ ಸಂಘದ ದಿನದರ್ಶಿಕೆ ಬಿಡುಗಡೆ ಮಾಡಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ದಾಸೇಗೌಡ, ಉದ್ಯಮಿ ಕೆ.ವಿವೇಕಾನಂದ, ಕ್ಷೇತ್ರ ಸಮನ್ವಯಾಧಿಕಾರಿ ಚಂದ್ರು, ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ದೇವೇಗೌಡ, ಕಾರ್ಯದರ್ಶಿ ಜಿ.ಸಿ.ಶಿವಪ್ಪ, ಸಹಶಿಕ್ಷಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಲಿಂಗರಾಜು, ಜಿಲ್ಲಾ ಘಟದ ಅಧ್ಯಕ್ಷ ಎಚ್.ಎಸ್.ರವೀಶ್, ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಎಸ್.ಶಿವರಾಮು, ಕಾರ್ಯದರ್ಶಿ ದೇವರಾಜು, ಖಜಾಂಚಿ ಕೆಂಚೇಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.