ಪಾಂಡವಪುರ: ತಾಲ್ಲೂಕಿನ ಚಿಕ್ಕಾಡೆ ಗ್ರಾಮದಲ್ಲಿ ಕೃಷಿ ಮಹಾವಿದ್ಯಾಲಯ ಬುಧವಾರ ಆಯೋಜಿಸಿದ್ದ ಕೃಷಿ ವಸ್ತು ಪ್ರದರ್ಶನ ರೈತರಿಗೆ ಕೃಷಿ ಜಾತ್ರೆಯಾಗಿ ಪರಿಣಿಮಿಸಿತು.
ಮಂಡ್ಯದ ವಿ.ಸಿ.ಫಾರಂನ ಕೃಷಿ ಮಹಾವಿದ್ಯಾಲಯ ಹಾಗೂ ವಲಯ ಕೃಷಿ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ, ಕೃಷಿ ತೋಟಗಾರಿಕೆ, ರೇಷ್ಮೆ, ಅರಣ್ಯ, ಮೀನುಗಾರಿಕೆ ಮತ್ತು ಪಶುಸಂಗೋಪನಾ ಇಲಾಖೆಗಳು, ಇತರೆ ಸಂಘಸಂಸ್ಥೆಗಳ ಸಹಕಾರ ದೊಂದಿಗೆ ಏರ್ಪಡಿಸಿದ್ದ ಕೃಷಿ ವಸ್ತ ಪ್ರದರ್ಶನ ಶಸ್ವಿಯಾಗಿ ಜರುಗಿತು.
ಬೇಸಾಯ ಭೂಮಿಯ ಮಣ್ಣಿನ ನಿರ್ವಹಣೆಯನ್ನು ಹೇಗೆ ಮಾಡಬೇಕು ಎಂಬ ವಿವರ ಮತ್ತು ಮಣ್ಣು ರೈತನ ಕಣ್ಣು, ಮಣ್ಣು ಪರೀಕ್ಷೆ ಮಾಡಿಸಿದರೆ ರಕ್ತ ಪರೀಕ್ಷೆ ಮಾಡಿಸಿದಂತೆ ಎಂಬ ನುಡಿಗಟ್ಟುಗಳು ಕೃಷಿಕರು ಮಣ್ಣಿನ ಬಗ್ಗೆ ವಹಿಸಬೇಕಾದ ಕಾಳಜಿಯನ್ನು ತಿಳಿಸುತ್ತಿದ್ದವು.
ಭತ್ತದ ತಳಿಗಳಾದ ಜಯ, ತನು, ಐಆರ್ 64, ಪರಿಚಯ, ನಾಟಿ ಪದ್ದತಿ-ವೈಜ್ಞಾನಿಕ ಪದ್ದತಿಗಳ ಅಳವಡಿಸುವಿಕೆ. ರಾಗಿ ಬ್ರಹ್ಮ ರಾಗಿ ಲಕ್ಷ್ಮಣಯ್ಯ ಸಂಶೋಧನೆ ಮಾಡಿದ ರಾಗಿ ತಳಿಗಳ ಪ್ರದರ್ಶನ, `ಹಿಟ್ಟಂ ತಿಂದಂ ಬೆಟ್ಟಂ ಕಿತ್ತಿಟ್ಟಂ~ ಫಲಕ ರಾಗಿಯ ಅವಶ್ಯಕತೆಗಳನ್ನು ತಿಳಿಯಪಡಿಸಿದರೆ, ಕಬ್ಬು ಬೆಳೆಯಿರಿ ಹೆಚ್ಚು ಲಾಭ ಗಳಿಸಿರಿ ಎಂಬ ಪ್ರೇರಣೆಯ ಮಾತು. ಕಬ್ಬಿನ ತರಗನ್ನು ಸುಡಬೇಡಿ ಗೊಬ್ಬರವಾದೀತು ಎಂಬ ನುಡಿ ರೈತರಿಗೆ ಕಬ್ಬಿನ ವಿವಿಧ ಬಗೆಯ ಅನುಕೂಲತೆಗಳ ಅರಿವನ್ನು ತಿಳಿಸುತ್ತಿತ್ತು.
ಜಾನುವಾರುಗಳಿಗೆ ಬೇಕಾದ ವಿವಿಧ ಮೇವಿನ ಬೆಳೆಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಅಣಬೆ ಬೇಸಾಯ ಮತ್ತು ಜೈವಿಕ ಗೊಬ್ಬರ ಬಳಕೆಯ ಅಗತ್ಯತೆಯನ್ನು ಪ್ರಚುರಪಡಿಸಲಾಯಿತು.
ರೈತ ಮಿತ್ರ ಎರೆಹುಳುವಿನ ಎರೆಗೊಬ್ಬರ, ಜಪಾನ್ ಮಾದರಿ ತೊಟ್ಟಿ ಗೊಬ್ಬರ, ದ್ರವ ರೂಪದ ಗೊಬ್ಬರಗಳು ಬೇಸಾಯಕ್ಕೆ ಹೇಗೆ ಪೂರಕವಾಗಿ ಪರಿಣಮಿಸಿವೆ, ಕೃಷಿ ಯಂತ್ರೋಪಕರಣಗಳಿಂದ ಆಧುನಿಕ ಬೇಸಾಯ ಕೈಗೊಳ್ಳುವುದು ಹೇಗೆ, ಜಮೀನು ಉಳುವ, ನಾಟಿ ಮಾಡುವ, ಕಳೆ ತೆಗೆಯುವ ಯಂತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.
ರಾಗಿ ಶಾವಿಗೆ, ರಾಗಿ ಬಿಸ್ಕತ್, ರಾಗಿ ನಿಪ್ಪಟ್ಟು, ರಾಗಿ ಉಂಡೆ, ರಾಗಿ ಚಕ್ರಮನಿ ಸೇವು, ಹಪ್ಪಳ ಮುಂತಾದ ಪ್ರದರ್ಶನಗಳು ಉದ್ದಿಮೆಗಾಗಿ ಸಿದ್ದ ಪಡಿಸಬಹುದಾದ ಮೌಲ್ಯ ವರ್ಧಿತ ಆಹಾರ ಉತ್ಪನ್ನಗಳನ್ನು ತಯಾರಿಕೆಯಲ್ಲಿ ತೊಡಗಿಸಿಕೊಳ್ಳಬಹುದಾದ ಬಗ್ಗೆ ಮಹಿಳೆಯರಲ್ಲಿ ಆತ್ಮ ವಿಶ್ವಾಸ ತುಂಬಿದವು.
ಸುತ್ತಮುತ್ತಲಿನ ರೈತರು ಪ್ರದರ್ಶನಕ್ಕಿಟ್ಟಿದ್ದ ದೇಸಿಯ ತಳಿಗಳಾದ ಹಳ್ಳಿಕಾರ್ ಎತ್ತುಗಳು, ಹಸುಗಳು. ಸಂವರ್ಧನೆಗಾಗಿ ಟಗರಿನ ಆಯ್ಕೆಯ ಬರಹ ಹಾಗೂ ಕುರಿ, ಮೇಕೆ, ಟಗರು, ನಾಟಿ ಕೋಳಿ, ಮೊಲದ ಸಾಕಣೆಯ ಪ್ರದರ್ಶನಗಳು ರೈತರು ಬೇಸಾಯದ ಜತೆಗೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.