ADVERTISEMENT

ಕೋತಿ ಕಾಟ: ಸಾರ್ವಜನಿಕರ ಪರದಾಟ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 5:24 IST
Last Updated 18 ಡಿಸೆಂಬರ್ 2013, 5:24 IST
ಮನೆಗೆ ನುಗ್ಗಲು ನೋಡುತ್ತಿರುವ ಕೋತಿಗಳು.
ಮನೆಗೆ ನುಗ್ಗಲು ನೋಡುತ್ತಿರುವ ಕೋತಿಗಳು.   

ಮೇಲುಕೋಟೆ: ಕೋತಿಗಳ ಕಾಟದಿಂದಾಗಿ ಮೇಲುಕೋಟೆಯ ಜನರ ನೆಮ್ಮದಿ ಕಾಣೆಯಾಗಿದೆ. ನೂರಾರು ಸಂಖ್ಯೆಯಲ್ಲಿರುವ ಕೋತಿಗಳು ನಿತ್ಯ ಸಾರ್ವಜನಿಕರನ್ನು ಕಾಡುತ್ತಿವೆ.

ಮನೆಯ ಮೇಲೆ ದಾಳಿಯಿಡುವ ಕೋತಿಗಳ ಹಿಂಡು ಕೈಗೆ ಸಿಕ್ಕ ವಸ್ತುಗಳನ್ನು ಹೊತ್ತೊಯ್ಯುತ್ತವೆ. ಒಣಗಲು ಹಾಕಿದ ಬಟ್ಟೆಗಳನ್ನು ಹರಿದುಹಾಕುತ್ತವೆ. ವಿದ್ಯುತ್, ದೂರವಾಣಿ ತಂತಿ, ಡಿಷ್ ಆಂಟೆನಾ, ಸೋಲಾರ್ ಉಪಕರಣಗಳ ಮೇಲೆ ಕುಣಿದಾಡುವ ಕೋತಿಗಳು ಎಲ್ಲವನ್ನೂ ಹಾಳುಮಾಡುತ್ತಿವೆ.

ಮನೆಯ ಕಿಟಕಿಗಳ ಸಂದಿಯಿಂದ ಒಳನುಗ್ಗುವ ಕೋತಿಗಳು ಸಾಮಾನುಗಳನ್ನು ತೆಗೆದುಕೊಂಡು ಕ್ಷಣಮಾತ್ರದಲ್ಲಿ ಪರಾರಿಯಾಗುತ್ತವೆ. ಹಂಚಿನ ಮನೆಗಳದ್ದವರ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ. ಹಂಚಿನ ಮೇಲೆ ಕುಣಿದಾಡುವುದರಿಂದ ಹಂಚುಗಳು ಒಡೆದು ಹೋಗುತ್ತವೆ. ಒಂದೆರಡು ಹಂಚುಗಳನ್ನು ಬದಲಾಯಿಸಬೇಕಾದ ಪಡಬೇಕಾದ ಪಾಡು ಅಷ್ಟಿಷ್ಟಲ್ಲ.

ಬೆಳೆ ನಾಶ: ಮೇಲುಕೋಟೆ ಹೊರವಲಯದ ತೋಟಗಳ ಮೇಲೆಯೂ ದಾಳಿಯಿಡುವ ಕೋತಿಗಳು ಬೆಳೆಯನ್ನೆಲ್ಲಾ ಹಾಳು ಮಾಡುತ್ತವೆ.
ತೆಂಗಿನ ತೋಟಗಳಲ್ಲಿ ಮರದಲ್ಲಿ ಒಂದೂ ಕಾಯಿಯನ್ನೂ ಉಳಿಸುವುದಿಲ್ಲ. ಇದರಿಂದ ರೈತರು ಕಂಗಾಲಾಗಿದ್ದಾರೆ.
ಮೇಲುಕೋಟೆಯ ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಕೈಯಲ್ಲಿರುವ ಚೀಲ, ಪ್ರಸಾದವನ್ನೂ ಕಿತ್ತು ಕೊಂಡು ಹೋಗುತ್ತವೆ. ಇದರಿಂದ ಭಕ್ತರೂ ಭಯದ ನೆರಳಿನಲ್ಲಿಯೇ ತಿರುಗಾಡಬೇಕಾದ ಸ್ಥಿತಿ ಇದೆ.

ಮೇಲುಕೋಟೆಯಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿದ್ದರೂ, ಅರಣ್ಯಾಧಿಕಾರಿಗಳು, ಜನಪ್ರತಿನಿಧಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಅವುಗಳ ನಿಯಂತ್ರಣಕ್ಕೆ ತುರ್ತಾಗಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸುತ್ತಾರೆ ಜಿ.ರಮೇಶ್‌.

ಕೋತಿಗಳ ಕಾಟದಿಂದ ಮುಕ್ತಿಗೊಳಿಸಲು ಯಾವುದೇ ಕ್ರಮವನ್ನು ಸಂಬಂಧಿಸಿದವರು ಕೈಗೊಳ್ಳದಿದ್ದರೆ, ಮೇಲುಕೋಟೆ ಬಂದ್‌ ಮಾಡಬೇಕಾಗುತ್ತದೆ ಎಂದು ಎಚ್ಚರಿಸುತ್ತಾರೆ ಚಲುವೇಗೌಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.