ADVERTISEMENT

ಗುಣಮಟ್ಟದ ಕಾಮಗಾರಿಗೆ ಸಹಕರಿಸಿ: ಗುರುಚರಣ್

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2012, 10:45 IST
Last Updated 24 ಫೆಬ್ರುವರಿ 2012, 10:45 IST

ಮದ್ದೂರು: 13ನೇ ಹಣಕಾಸು ಯೋಜನೆಯಡಿ ನಿರ್ಮಿಸಲಾಗುತ್ತಿರುವ ಅಂಗನವಾಡಿ ಕಟ್ಟಡ ಕಾಮಗಾರಿಯನ್ನು ಉತ್ತಮ ಗುಣಮಟ್ಟದಲ್ಲಿ ನಿರ್ವಹಿಸಲು ಗ್ರಾಮಸ್ಥರು ಅಗತ್ಯ ಸಹಕಾರ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಗುರುಚರಣ್ ಗುರುವಾರ ತಿಳಿಸಿದರು.

ಸಮೀಪದ ಬೆಸಗರಹಳ್ಳಿಯಲ್ಲಿ ನೂತನ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಬಹು ಹಿಂದಿನಿಂದಲೂ ಖಾಸಗಿ ಶಿಥಿಲ ಕಟ್ಟಡದಲ್ಲಿ ನಡೆಯುತ್ತಿದ್ದ ಅಂಗನವಾಡಿ ಕೇಂದ್ರಕ್ಕೆ ಅಗತ್ಯವಾದ ಕಟ್ಟಡ ನಿರ್ಮಿಸಲು ಸ್ಥಳೀಯ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯರುಗಳು ತಮ್ಮ ಅನುದಾನ ಒದಗಿಸಿರುವುದು ಶ್ಲಾಘನೀಯ ಎಂದರು.

ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರು ಬೆಸಗರಹಳ್ಳಿ ಮುಸ್ಲಿಂರ ಸ್ಮಶಾನ ಅಭಿವೃದ್ಧಿಗೆ ರೂ.5ಲಕ್ಷ, ರಾಂಪುರ ಸಮುದಾಯಭವನ ಅಡುಗೆ ಮನೆ ನಿರ್ಮಾಣಕ್ಕೆ ರೂ.5ಲಕ್ಷ, ಬೆಳತೂರು ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ರೂ.5ಲಕ್ಷ ಬಿಡುಗಡೆಗೊಳಿಸಿದ್ದು, ಕಾಮಗಾರಿ ಶೀಘ್ರ ಆರಂಭಗೊಳ್ಳಲಿದೆ ಎಂದರು.

ಜಿಪಂ ಸದಸ್ಯೆ ಸವಿತಾ ಮಧುಸೂದನ್, ತಾಪಂ ಸದಸ್ಯರಾದ ಸುನಂದ  ಸುಧಾಕರ್, ಸಂದರ್ಶ, ಗ್ರಾಪಂ ಉಪಾಧ್ಯಕ್ಷ ಪುಟ್ಟಸ್ವಾಮಿ, ಸದಸ್ಯರಾದ ರವಿ, ನಾಗರಾಜು, ಸನತ್‌ಕುಮಾರ್, ಪದ್ಮನಾಭ್, ನಾಜಿನಿ, ದೀಪ, ಮುಖಂಡರಾದ ಸಿದ್ದೇಗೌಡ, ಚಿಕ್ಕಬೋರಯ್ಯ, ಗುತ್ತಿಗೆದಾರರಾದ ಜಯರಾಂ, ಪ್ರದೀಪ್ ಇತರರು ಪಾಲ್ಗೊಂಡಿದ್ದರು.
ಜಿಲ್ಲಾ ಯುವ ಪ್ರಶಸ್ತಿಗೆ ಆಯ್ಕೆ

ಮೈಸೂರು: ಜಿಲ್ಲಾ ನೆಹರು ಯುವ ಕೇಂದ್ರವು ನೀಡುವ ಜಿಲ್ಲಾ ಯುವ ಪ್ರಶಸ್ತಿಗೆ ಕೆ.ಆರ್.ನಗರ ತಾಲ್ಲೂಕಿನ ಹೆಬ್ಬಾಳು ಬಸವೇಶ್ವರ ಯುವಕ ಸಂಘದ  ಎಚ್.ಎಂ. ದಿನೇಶ್, ಎಚ್.ಡಿ.ಕೋಟೆ ತಾಲ್ಲೂಕಿನ ಕೆ.ಆರ್.ಪುರದ ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ನಂದಿನಿ ಅವರನ್ನು ಆಯ್ಕೆ ಮಾಡಲಾಗಿದೆ.
 
ಐದು ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡ ಈ ಪ್ರಶಸ್ತಿಯನ್ನು ಮಾರ್ಚ್‌ನಲ್ಲಿ ನಡೆಯಲಿರುವ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಪ್ರದಾನ ಮಾಡಲಾಗುವುದು  ಎಂದು ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಎಂ.ಎನ್.ನಟರಾಜು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.