ADVERTISEMENT

ಗುರುವಂದನಾ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2013, 6:19 IST
Last Updated 19 ಸೆಪ್ಟೆಂಬರ್ 2013, 6:19 IST

ಮಳವಳ್ಳಿ: ಡಾ.ರಾಧಾಕೃಷ್ಣನ್ ಅವರು ಉತ್ತಮ ಶಿಕ್ಷಕರಾಗಿ, ಸಮಾಜ ಸುಧಾರಕರಾಗಿ, ತತ್ವಜ್ಞಾನಿಯಾಗಿ,ರಾಜಕಾರಣಿಯಾಗಿ ಅವರ ಸೇವೆ ಅನನ್ಯವಾದುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಕೋಶಾಧ್ಯಕ್ಷ ಡಾ.ಕೃಷ್ಣೇಗೌಡ ಹುಸ್ಕರು ತಿಳಿಸಿದರು.

ತಾಲ್ಲೂಕಿನ ಶಿವನಸಮುದ್ರಂನಲ್ಲಿರುವ ಸೌರಶಕ್ತಿ ಸಭಾಂಗಣದಲ್ಲಿ ಮಂಗಳವಾರ ಮಳವಳ್ಳಿಯ ಭಾರತ್ ವಿಕಾಸ್ ಶಾಲೆ ಹಾಗೂ ಶಿವನಸಮುದ್ರಂನ ಕೆ.ಇ.ಬಿ.ಪ್ರೌಢಶಾಲೆ ಸಹಯೋಗದಲ್ಲಿ ಶಿಕ್ಷಕರ ದಿನ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರಸ್ತುತ ಶಿಕ್ಷಕರು ರಾಧಾಕೃಷ್ಣನ್ ಅವರ ಆದರ್ಶ ತತ್ವಗಳನ್ನು ಮೈಗೂಡಿಸಿಕೊಂಡು ಭಾಷೆಯಲ್ಲಿ ಹಿಡಿತ ಸಾಧಿಸಿ ಉತ್ತಮ ಶಿಕ್ಷಕರಾಗಿ ಕರ್ತವ್ಯನಿರ್ವಹಿಸಬೇಕು ಎಂದು ಮನವಿ ಮಾಡಿದರು. ಕರ್ನಾಟಕ ವಿದ್ಯುತ್ ನಿಗಮದ ಅಧೀಕ್ಷಕ ಎಂಜಿನಿಯರ್ ಆರ್.ಕೆ. ಸುರೇಶ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಹಲವು ಶಿಕ್ಷಕರನ್ನು ಸನ್ಮಾನಿಸಲಾಯಿತು. ಭಾರತ್ ವಿಕಾಸ್ ಪರಿಷತ್ ಅಧ್ಯಕ್ಷ ಎಂ.ಎಸ್. ರಮೇಶ್, ಮುಖ್ಯಶಿಕ್ಷಕ ನಾಗರಾಜು, ಯೋಗಗುರು ಎಂ.ಮಲ್ಲಿಕಾರ್ಜುನಸ್ವಾಮಿ, ನಿವೃತ್ತ ಶಿಕ್ಷಕ ಬಿ.ಎಂ.ಮಹದೇವಪ್ಪ, ಅಂದಾನಿಗೌಡ, ಬಿ.ಎನ್.ರಮೇಶ್, ನಾಗೇಗೌಡ, ರವಿ, ಶಂಭುಲಿಂಗೇಗೌಡ,ವೆಂಕಟೇಶ್ ಸೇರಿದಂತೆ ಇತರರು ಇದ್ದರು.

ಇಂದು ಶಿಕ್ಷಕರ ದಿನಾಚರಣೆ: 2013-14ನೇ ಸಾಲಿನ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಸೆ.19 ರಂದು ಪಟ್ಟಣದಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆವರಣದಲ್ಲಿ ನಡೆಯಲಿದ್ದು, ತಾಲ್ಲೂಕಿನ ಎಲ್ಲಾ ಸರ್ಕಾರಿ, ಅನುದಾನ ಹಾಗೂ ಅನುದಾನ ರಹಿತ ಶಾಲೆ ಶಿಕ್ಷಕರು ಹಾಗೂ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಿ ಸೆ.1 2012 ರಿಂದ ಆ.31, 2013ರವರಗೆ ನಿವೃತ್ತಿ ಹೊಂದಿರುವ ಶಿಕ್ಷಕರು ಮತ್ತು ಮರಣ ಹೊಂದಿರುವ ಶಿಕ್ಷಕರ ಸಂಬಂಧಿಕರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕ್ಷೇತ್ರಶಿಕ್ಷಣಾಧಿಕಾರಿ ಎನ್.ಎಂ.ರಾಮು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.