ಮಂಡ್ಯ: ಬೆಂಬಲ ಬೆಲೆ ಹಾಗೂ ಲೇವಿ ರೂಪದಲ್ಲಿ ಭತ್ತ ಹಾಗೂ ಅಕ್ಕಿ ಮಾರಾಟ ಮಾಡಲು ರೈತರು, ಅಕ್ಕಿ ಗಿರಣಿಗಳ ಮಾಲೀಕರು ಪೈಪೋಟಿ ನಡೆಸಿದ್ದಾರೆ. ಖರೀದಿ ಮಾಡಿದ ಭತ್ತ ಸಂಗ್ರಹಿಸಿಡಲು ಗೋದಾಮು ಸಿಗದೇ ಖರೀದಿಯನ್ನೇ ನಿಲ್ಲಿಸಲಾಗಿದೆ. ಪರಿಣಾಮ ರೈತರು ಪರದಾಡುವಂತಾಗಿದೆ.
ಭತ್ತ ಹಾಗೂ ಅಕ್ಕಿಯ ಖರೀದಿಯ ಪರಿಣಾಮ ಜಿಲ್ಲೆಯ 62 ಗೋದಾಮುಗಳು ಭರ್ತಿಯಾಗಿವೆ. ಹೊಸದಾಗಿ ಗೋದಾಮು ಸಿಗುತ್ತಿಲ್ಲ. ಆದ್ದರಿಂದ ಮಂಡ್ಯ ತಾಲ್ಲೂಕಿನಲ್ಲಿ ಬೆಂಬಲ ಬೆಲೆಯಲ್ಲಿ ಅಕ್ಕಿ ಖರೀದಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎನ್ನುತ್ತಾರೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ವೃಷಭರಾಜೇಂದ್ರಮೂರ್ತಿ.
ಲೇವಿ ರೂಪದಲ್ಲಿ 2.62 ಲಕ್ಷ ಕ್ವಿಂಟಲ್ ಅಕ್ಕಿ ಸಂಗ್ರಹಿಸಲು ರಾಜ್ಯ ಸರ್ಕಾರ ಸೂಚನೆ ನೀಡಿದೆ. ಫೆ. 7ರ ಅಂತ್ಯಕ್ಕೆ 2.41 ಲಕ್ಷ ಕ್ವಿಂಟಲ್ ಅಕ್ಕಿ ಖರೀದಿಯಾಗಿದೆ. ಅಕ್ಕಿ ಗಿರಣಿಗಳ ಮಾಲೀಕರಿಗೆ 40 ಕೋಟಿ ರೂಪಾಯಿ ಪಾವತಿಸಲಾಗಿದೆ. ಇನ್ನೂ 17 ಕೋಟಿ ರೂಪಾಯಿ ಪಾವತಿಸಬೇಕಿದೆ.
ಬೆಂಬಲ ಬೆಲೆಯಲ್ಲಿ ಈಗಾಗಲೇ 3,49,701 ಲಕ್ಷ ಕ್ವಿಂಟಲ್ ಭತ್ತ ಖರೀದಿಸಲಾಗಿದೆ. ಇದಕ್ಕಾಗಿ 22 ಕೋಟಿ ರೂಪಾಯಿ ಪಾವತಿ ಮಾಡಲಾಗಿದ್ದು, ಇನ್ನೂ 33.5 ಕೋಟಿ ರೂಪಾಯಿ ಪಾವತಿಸಬೇಕಿದೆ. ನಿರೀಕ್ಷೆಗೂ ಮೀರಿ ಭತ್ತ ಬರುತ್ತಿರುವುದರಿಂದ ನಿಯಮಿತವಾಗಿ ಖರೀದಿಸಲು ಸಾಧ್ಯವಾಗುತ್ತಿಲ್ಲ.
ಬೆಂಬಲ ಬೆಲೆಯಲ್ಲಿ ಪಾಂಡವಪುರ ತಾಲ್ಲೂಕಿನಲ್ಲಿ 48,274 ಕ್ವಿಂಟಲ್, ಮಂಡ್ಯದಲ್ಲಿ 1,12,192 ಕ್ವಿಂಟಲ್, ಶ್ರೀರಂಗಪಟ್ಟಣದಲ್ಲಿ 46,410 ಕ್ವಿಂಟಲ್, ಕೆ.ಆರ್. ಪಟ್ಟಣದಲ್ಲಿ 42,688 ಕ್ವಿಂಟಲ್, ಮದ್ದೂರಿನಲ್ಲಿ 63,188 ಕ್ವಿಂಟಲ್, ಮಳವಳ್ಳಿಯಲ್ಲಿ 20,970 ಕ್ವಿಂಟಲ್ ಹಾಗೂ ನಾಗಮಂಗಲ ತಾಲ್ಲೂಕಿನಲ್ಲಿ 15,979 ಕ್ವಿಂಟಲ್ ಭತ್ತ ಖರೀದಿಸಲಾಗಿದೆ.
ಭತ್ತ ಹಾಗೂ ಅಕ್ಕಿ ಖರೀದಿಯ ಪರಿಣಾಮ 62 ಗೋದಾಮುಗಳು ಭರ್ತಿಯಾಗಿವೆ. ಗೋದಾಮುಗಳನ್ನು ಹುಡುಕುವುದೇ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಒಂದು ಗೋದಾಮು ಭರ್ತಿಯಾಗುತ್ತಿದ್ದಂತೆ ಇನ್ನೊಂದು ಗೋದಾಮಿಗೆ ಹೋಗಲಾಗುತ್ತಿದೆ.
ರಾಜ್ಯ ಆಹಾರ ನಿಗಮ, ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮುಗಳು ಭರ್ತಿಯಾಗಿದ್ದು, ಖಾಸಗಿ ರೈಸ್‌ಮಿಲ್‌ಗಳ ಗೋದಾಮುಗಳನ್ನೂ ಬಾಡಿಗೆ ಆಧಾರದ ಮೇಲೆ ಪಡೆಯಲಾಗಿದೆ. ಭತ್ತ ಹಾಗೂ ಅಕ್ಕಿ ಸಾಕಷ್ಟು ಪ್ರಮಾಣದಲ್ಲಿ ಬರುತ್ತಿರುವುದರಿಂದ ಜಾಗ ಸಾಲುತ್ತಿಲ್ಲ.
ಖರೀದಿ ಕೇಂದ್ರ ಸ್ಥಳಾಂತರ: ಒಂದು ಗೋದಾಮಿನ ಬಳಿ ಖರೀದಿ ಮಾಡಲಾಗುತ್ತಿರುತ್ತದೆ. ಅದು ಭರ್ತಿ ಆಗುತ್ತಿದ್ದಂತೆಯೇ ಖರೀದಿ ಕೇಂದ್ರವನ್ನು ಬಾಡಿಗೆ ಸಿಗುವ ಇನ್ನೊಂದು ಗೋದಾಮಿಗೆ ಸ್ಥಳಾಂತರಿಸಲಾಗುತ್ತದೆ. ಹೀಗೆ ಎರಡು, ಮೂರು ದಿನಕ್ಕೊಮ್ಮೆ ಖರೀದಿ ಕೇಂದ್ರದ ಸ್ಥಳ ಬದಲಾಗುತ್ತಿದೆ. ಮಂಡ್ಯದಲ್ಲಿ ಹತ್ತು, ಕೆ.ಆರ್‌್. ಪೇಟೆಯಲ್ಲಿ ಎಂಟು, ಪಾಂಡವಪುರ ತಾಲ್ಲೂಕಿನಲ್ಲಿ ಆರು ಕಡೆ ಬದಲಾಗಿವೆ.
ಖರೀದಿ ಕೇಂದ್ರಗಳ ಮುಂದೆ ಉದ್ದನೆಯ ಸಾಲಿರುವುದರಿಂದ ಒಂದೊಂದು ಕಡೆ ಮೂರ್‌್ನಾಲ್ಕು ದಿನದವರೆಗೂ ಭತ್ತ ಖರೀದಿ ಸಾಧ್ಯವಾಗುತ್ತಿಲ್ಲ. ವಾಹನಗಳನ್ನು ನಿಲ್ಲಿಸಿದ ಪರಿಣಾಮ ಹೆಚ್ಚು ಬಾಡಿಗೆ ಕೊಡಬೇಕಾಗುತ್ತಿದೆ ಎನ್ನುವುದು ರೈತರ ದೂರು.
ಮಧ್ಯವರ್ತಿಗಳ ಹಾವಳಿ: ಮುಕ್ತ ಮಾರುಕಟ್ಟೆಯಲ್ಲಿ ಭತ್ತ ಕ್ವಿಂಟಲ್‌ಗೆ 1,300 ರೂಪಾಯಿಂದ 1,400 ರೂಪಾಯಿಗೆ ಮಾರಾಟವಾಗುತ್ತಿದೆ. ಆ ಬೆಲೆಗೆ ಮಧ್ಯವರ್ತಿಗಳು ರೈತರಿಂದ ಆರ್‌ಟಿಸಿಯೊಂದಿಗೆ ಖರೀದಿ ಮಾಡಿಕೊಂಡಿದ್ದು, ಖರೀದಿ ಕೇಂದ್ರಗಳಿಗೆ ಪ್ರತಿ ಕ್ವಿಂಟಲ್‌ಗೆ 200 ರೂಪಾಯಿ ಹೆಚ್ಚಳಕ್ಕೆ ಮಾರಾಟ ಮಾಡುತ್ತಿದ್ದಾರೆ.
ಮಧ್ಯವರ್ತಿಗಳ ಹಾವಳಿ ತಡೆಗಟ್ಟಬೇಕು ಎಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಮೂರು ದಿನ ಪ್ರತಿಭಟನೆಯನ್ನೂ ನಡೆಸಲಾಗಿತ್ತು. ಬೆಂಬಲ ಬೆಲೆ ಖರೀದಿಯನ್ನು ನಿಲ್ಲಿಸಿದ್ದರಿಂದ ಸಂಗ್ರಹಿಸಿಡಲು ಸಾಧ್ಯವಾಗದ ರೈತರು ಕಡಿಮೆ ಬೆಲೆ ಮಧ್ಯವರ್ತಿಗಳಿಗೆ ಮಾರಾಟ ಮಾಡಬೇಕಾದ ಸ್ಥಿತಿ ಎದುರಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.