ADVERTISEMENT

ಚುನಾವಣಾ ಅಕ್ರಮಗಳ ತಡೆಗೆ ನಾಕಾಬಂದಿ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2013, 6:52 IST
Last Updated 9 ಏಪ್ರಿಲ್ 2013, 6:52 IST

ಶ್ರೀರಂಗಪಟ್ಟಣ: ಮತದಾರರಿಗೆ ಹಂಚಲು ಹಣ, ಮದ್ಯ ಇತರ ವಸ್ತುಗಳನ್ನು ಹೊರಗಿನಿಂದ ತರುವುದನ್ನು ತಡೆಗಟ್ಟಲು ಕ್ಷೇತ್ರದ 6 ಕಡೆ ನಾಕಾಬಂದಿ ಏರ್ಪಡಿಸಲಾಗಿದೆ.

ಮೈಸೂರು ಜಿಲ್ಲೆಯಿಂದ ಸಂಪರ್ಕ ಕಲ್ಪಿಸುವ ತಾಲ್ಲೂಕಿನ ಬೆಳಗೊಳ ಹೋಬಳಿಯ ಕೆಆರ್‌ಎಸ್ ರೈಲ್ವೆ ನಿಲ್ದಾಣ, ಹುಣಸೂರು ಹಾಗೂ ಇಲವಾಲ ಮಾರ್ಗದ ಪೇಪರ್‌ಮಿಲ್ ಸರ್ಕಲ್, ಮೊಗರಹಳ್ಳಿ ಕ್ರಾಸ್, ಕಸಬಾ ಹೋಬಳಿಯ ಮಹದೇವಪುರ, ಬೊಂತಹಳ್ಳಿಯ ಮೈಸೂರು ಜಂಕ್ಷನ್ ಹಾಗೂ ಅರಕೆರೆ ಹೋಬಳಿಯ ಶ್ರೀರಂಗಪಟ್ಟಣ- ಬನ್ನೂರು ಜಂಕ್ಷನ್‌ಗಳಲ್ಲಿ ಸ್ಥಿರ ಜಾಗೃತ ತಂಡ (ಎಸ್‌ಎಸ್‌ಟಿ)ವನ್ನು ನಿಯೋಜಿಸಲಾಗಿದೆ. ಈ ಆರು ಜಂಕ್ಷನ್‌ಗಳ ಮೂಲಕ ಕ್ಷೇತ್ರಕ್ಕೆ ಪ್ರವೇಶಿಸುವ ಎಲ್ಲ ವಾಹನಗಳನ್ನು ತಪಾಸಣೆ ನಡೆಸಲಾಗುತ್ತಿದೆ.

ಪ್ರತಿ ಜಂಕ್ಷನ್‌ಗಳಲ್ಲಿ ಬ್ಯಾರಿಕೇಡ್ ಹಾಕಿದ್ದು, ಒಬ್ಬ ಪೊಲೀಸ್ ಸೇರಿ ಮೂವರು ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಪಟ್ಟಣ ಪ್ರವೇಶಿಸುವ ವಾಹನಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಚೆಕ್‌ಪೋಸ್ಟ್, ಕಿರಂಗೂರು ಸರ್ಕಲ್ ಬಳಿ ಹೊರಗಿನಿಂದ ಬರುವ ವಾಹನಗಳನ್ನು ಕಟ್ಟುನಿಟ್ಟಾಗಿ ತಪಾಸಣೆ ಮಾಡಲಾಗುತ್ತಿದೆ. ವಾಹನಗಳಲ್ಲಿ ಇರುವವರ ಕೈಚೀಲ ಸಹಿತ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಕ್ಷೇತ್ರದಲ್ಲಿ 3 ಫ್ಲೈಯಿಂಗ್ ಸ್ಕ್ವಾಡ್ ನಿಯೋಜಿಸಲಾಗಿದೆ. ಮತದಾರರಿಗೆ ಆಮಿಷ ನೀಡುವ ಪ್ರಕರಣಗಳ ಕುರಿತು ಈ ತಂಡ ನಿಗಾ ವಹಿಸಲಿದೆ.

ಚುನಾವಣಾ ಅಕ್ರಮ ನಡೆಸುವವರ ವಿರುದ್ಧ ಎಫ್‌ಐಆರ್ ದಾಖಲಿಸಲು ಸೆಕ್ಟರಲ್ ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಕ್ಷೇತ್ರದ ಮಾದರಿ ನೀತಿ ಸಂಹಿತೆ ಅಧಿಕಾರಿಯಾಗಿ ಕೆ.ಸಂಗಯ್ಯ ಕಾರ್ಯನಿರ್ವಹಿಸುತ್ತಿದ್ದು, ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ಸಾರ್ವಜನಿಕರು ಅವರಿಗೆ ದೂರು ನೀಡಬಹುದು ಎಂದು ತಹಶೀಲ್ದಾರ್ ಅರುಳ್‌ಕುಮಾರ್ ತಿಳಿಸಿದ್ದಾರೆ. ಸಂಗಯ್ಯ ಅವರ ಮೊ.ಸಂಖ್ಯೆ 94488 71760.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.