ADVERTISEMENT

ಟನ್ ಕಬ್ಬಿಗೆ ರೂ 3 ಸಾವಿರ ನಿಗದಿ ಮಾಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 5:27 IST
Last Updated 4 ಸೆಪ್ಟೆಂಬರ್ 2013, 5:27 IST

ಮಂಡ್ಯ: ಪ್ರಸಕ್ತ ಸಾಲಿನಲ್ಲಿ ಪ್ರತಿ ಟನ್ ಕಬ್ಬಿಗೆ ರೂ 3 ಸಾವಿರ ನಿಗದಿ ಮಾಡಬೇಕು ಎಂದು ಆಗ್ರಹಿಸಿ ಮದ್ದೂರು ತಾಲ್ಲೂಕು ಕೊಪ್ಪ ಎನ್‌ಎಸ್‌ಎಲ್ ಶುಗರ್ಸ್‌ ಕಬ್ಬು ಬೆಳೆಗಾರರ ಒಕ್ಕೂಟದ ಸದಸ್ಯರು ಮಂಗಳವಾರ ನಗರದಲ್ಲಿ ಪ್ರತಿಭಟಿಸಿದರು.

ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಿಂದ ಮೆರವಣಿಗೆ ಮೂಲಕ ತೆರಳಿದ ಕಬ್ಬು ಬೆಳೆಗಾರರು, ಸರ್ಕಾರಿ ಬಸ್ ನಿಲ್ದಾಣ ಸಮೀಪದ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಯ ವರೆಗೆ ಜಾಥಾ ನಡೆಸಿದ ಪ್ರತಿಭಟನಕಾರರು ಅಲ್ಲಿಯೂ ಕೆಲಕಾಲ ಧರಣಿ ನಡೆಸಿದರು. ನಂತರ ಅಲ್ಲಿನ ಸಿಬ್ಬಂದಿಗೆ ಮನವಿಪತ್ರ ಸಲ್ಲಿಸಿದರು.

ಸಚಿವ ಅಂಬರೀಷ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆ ಪ್ರತಿ ಟನ್ ಕಬ್ಬಿಗೆ ದರ ನಿಗದಿ ಮಾಡುವಲ್ಲಿ ವಿಫಲವಾಗಿದ್ದನ್ನು ಕಬ್ಬು ಬೆಳೆಗಾರರು ಖಂಡಿಸಿದರು.

ಕಬ್ಬು ಉತ್ಪದನಾ ವೆಚ್ಚ ಆಧರಿಸಿ ಬೆಲೆ ನಿಗದಿ ಮಾಡಬೇಕು. ಮುಂಗಡವಾಗಿ ರೂ. 2600 ನೀಡಬೇಕು. ಕಳೆದ ಸಾಲಿನಲ್ಲಿ ಪೂರೈಕೆ ಮಾಡಿರುವ ಕಬ್ಬಿಗೆ ಅಂತಿಮ ದರ ಗೊತ್ತುಪಡಿಸಿ ಹಣ ಪಾವತಿಸುವುದು; ಕಬ್ಬು ಪೂರೈಕೆಯಾದ 14 ದಿನದೊಳಗೆ ಸಂಪೂರ್ಣ ಹಣ ಬಟಾವಡೆ ಮಾಡಬೇಕು ಎಂಬುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮನವಿಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮುಖಂಡರಾದ ಬಿ. ಶಂಕರೇಗೌಡ, ಚಿಕ್ಕಬಳ್ಳಿ ರಾಜಣ್ಣ, ಎಂ.ಸಿ. ಕುಮಾರ, ಭೈರೇಗೌಡ, ಯೋಗೀಶ್, ದ್ಯಾವಪ್ಪ, ಎಚ್.ಸಿ. ಜಯರಾಂ, ಸಿ.ಬಿ. ಸುರೇಶ್, ಸಿದ್ದೇಗೌಡ ಸೇರಿದಂತೆ ಹಲವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.