ADVERTISEMENT

ತಡೆಗೋಡೆ ಇಲ್ಲದ ಕಿರು ಸೇತುವೆ, ಅಪಾಯಕ್ಕೆ ಆಹ್ವಾನ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2017, 4:38 IST
Last Updated 18 ಡಿಸೆಂಬರ್ 2017, 4:38 IST

ಮದ್ದೂರು: ಸಮೀಪದ ಆಲೂರು ಕೆರೆ ಬಳಿ ಇರುವ ಕಿರು ಸೇತುವೆಗೆ ತಡೆಗೋಡೆ ಇಲ್ಲದ ಕಾರಣ ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಪಟ್ಟಣದಿಂದ ಕೆ.ಹೊನ್ನಲಗೆರೆ ಸಂಪರ್ಕಿಸುವ ಈ ಮಾರ್ಗದಲ್ಲಿ ನಿತ್ಯ ಅಸಂಖ್ಯ ವಾಹನಗಳು ಓಡಾಡುತ್ತವೆ. ಕಿರುಸೇತುವೆ ಬಳಿ ತಿರುವು ಇದ್ದು, ಜನರು ಆತಂಕದಲ್ಲಿಯೇ ಓಡಾಡಬೇಕಾಗಿದೆ.

ಆರು ತಿಂಗಳ ಹಿಂದೆ ಹೊಸದಾಗಿ ರಸ್ತೆ ಮಾಡಲಾಯಿತು. ಆಗ ರಸ್ತೆ ಎತ್ತರಿಸಿದ ಹಿಂದೆ ಇದ್ದ ತಡೆಗೋಡೆ ಮುಚ್ಚಿಹೋಯಿತು. ರಸ್ತೆ ನಿರ್ಮಿಸಿದ ಗುತ್ತಿಗೆದಾರರೂ ತಡೆಗೋಡೆ ಎತ್ತರಿಸುವ ಗೋಜಿಗೆ ಹೋಗಲಿಲ್ಲ. ಈ ಮಾರ್ಗದಲ್ಲಿ ರಾತ್ರಿವೇಳೆ ಸಂಚರಿಸುವುದು ಇನ್ನು ದುಸ್ತರ. ಬೀದಿ ದೀಪಗಳಿಲ್ಲ. ಬೈಕ್‌ ಸವಾರರಂತೂ ಜೀವ ಹಿಡಿದುಕೊಂಡೇ ಚಾಲನೆ ಮಾಡಬೇಕಾದ ಸ್ಥಿತಿ.

ಅಪಾಯ ಸಂಭವಿಸುವ ಮುನ್ನ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಜಾಗೃತರಾಗಿ ಕಿರುಸೇತುವೆಗೆ ತಡೆಗೋಡೆ ನಿರ್ಮಿಸಲು ಮುಂದಾಗಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ADVERTISEMENT

ಪ್ರತಿನಿತ್ಯ ಈ ರಸ್ತೆಯಲ್ಲಿಯೇ ಶಾಲೆಗೆ ಓಡಾಡುತ್ತೇವೆ. ಇಲ್ಲಿ ತಿರುವು ಇರುವುದರಿಂದ ಜೀವ ಕೈಯಲ್ಲಿಡಿದು ಪ್ರಯಾಣಿಸಬೇಕಿದೆ ಎಂದು ಕೆ.ಹೊನ್ನಲಗೆರೆಯ ಶಿಕ್ಷಕ ಬಿ.ವಿ.ಹಳ್ಳಿ ನಾರಾಯಣ್‌ ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.