ADVERTISEMENT

ನಾಲೆ ಆಧುನೀಕರಣ: ಗುಣಮಟ್ಟಕ್ಕೆ ಒತ್ತು ನೀಡಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2012, 8:15 IST
Last Updated 19 ಫೆಬ್ರುವರಿ 2012, 8:15 IST

ಕೃಷ್ಣರಾಜಪೇಟೆ: ತಾಲ್ಲೂಕಿನಲ್ಲಿ ನಡೆಯುತ್ತಿರುವ ನಾಲೆಗಳ ಆಧುನೀಕರಣ ಕಾಮಗಾರಿ ಕನಿಷ್ಠ 25 ವರ್ಷಗಳ ಕಾಲ ಬಾಳಿಕೆ ಬರುವಂತೆ ಗುಣಮಟ್ಟ ಕಾಯ್ದುಕೊಳ್ಳಲು ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಎಸ್. ಪುಟ್ಟಣ್ಣಯ್ಯ ಒತ್ತಾಯಿಸಿದರು.

ರೈತಸಂಘ ಮತ್ತಿತರ ಪ್ರಗತಿಪರ ಸಂಘಟನೆಗಳ ವತಿಯಿಂದ ಪಟ್ಟಣದ ಮಿನಿ ವಿಧಾನ ಸೌಧದ ಎದುರು ಶನಿವಾರ ಏರ್ಪಡಿಸಿದ್ದ ಪ್ರತಿಭಟನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸದ್ಯಕ್ಕೆ ದುರಸ್ತಿಯಾಗುತ್ತಿರುವ ತಾಲ್ಲೂಕಿನ ನಾಲೆಗಳಲ್ಲಿ ಕಳೆದ 60-70 ವರ್ಷಗಳಿಂದ ನೀರು ಹರಿದಿದೆ. ಜನರಿಗೆ ಹೆಚ್ಚಿನ ಅನುಕೂಲವಾಗಿದೆ. ನಾಲೆಗಳು ಆಧುನೀಕರಣಗೊಂಡು ಹೆಚ್ಚುಕಾಲ ಬಾಳಿಕೆ ಬಂದರೆ ರೈತರಿಗೆ ಅನುಕೂಲವಾಗುತ್ತದೆ.
 
ಆದರೆ, ಆಧುನೀಕರಣ ಕಾಮಗಾರಿ ನಡೆಸುತ್ತಿರುವ ಉಪ್ಪಾರ್ ಕಂಪೆನಿ ಕಳಪೆ ಗುಣಮಟ್ಟದ ಕೆಲಸ ಮಾಡುವುದರಲ್ಲಿ ನಿಸ್ಸೀಮವಾಗಿದೆ. ಚಾಮರಾಜನಗರ ಜಿಲ್ಲೆ ಮತ್ತು ತುಂಗಭದ್ರಾ ಡ್ಯಾಂ ಭಾಗದ ವಿವಿಧೆಡೆ ಈ ಕಂಪೆನಿ ನಡೆಸಿದ ಕಾಮಗಾರಿ ಗುಣಮಟ್ಟ ಕಳಪೆಯಾಗಿದೆ ಎಂಬುದು ಈಗಾಗಲೇ ಬಹಿರಂಗಗೊಂಡಿದೆ ಎಂದರು.

ಈಗ ನಡೆಯುತ್ತಿರುವ ಕಾಮಗಾರಿ ಉತ್ತಮವಾಗಿ ನಡೆದು ತಾಲ್ಲೂಕಿನ ಕೊನೆಯ ಭಾಗವಾದ ಪುರ, ಸಂಗಾಪುರ ಸೇರಿದಂತೆ ಆ ಭಾಗದ ನೂರಾರು ಹಳ್ಳಿಗಳಿಗೆ ನೀರು ಹರಿಯಬೇಕು ಎಂಬುದು ಎಲ್ಲರ ಆಶಯವಾಗಿದೆ. ಆದರೆ ಈಗ ನಡೆಯುತ್ತಿರುವ ಆಧುನೀಕರಣ ಕಾಮಗಾರಿ ಗಮನಿಸಿದರೆ ಅಂತಹ ಲಕ್ಷಣ ಕಾಣುತ್ತಿಲ್ಲ ಎಂದರು.

ಉತ್ತಮವಾಗಿ ಕೆಲಸ ಮಾಡುವ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸುವ ಮತ್ತು ಗುಣಮಟ್ಟಕ್ಕಾಗಿ ಒತ್ತಾಯಿಸುವ ಚಳವಳಿಗಾರರ ವಿರುದ್ಧ ಹಗುರವಾಗಿ ಮಾತನಾಡುವ ತಾಲ್ಲೂಕಿನ ಶಾಸಕ ಕೆ.ಬಿ. ಚಂದ್ರಶೇಖರ್‌ಅವರ ವರ್ತನೆ ಸರಿಯಲ್ಲ. ತಮ್ಮ ಕಾರ್ಯಕರ್ತರನ್ನು ರೈತ ಹೋರಾಟಗಾರರ ವಿರುದ್ಧ ಪ್ರಚೋದಿಸುವ ಇವರ ನಡವಳಿಕೆ ಒಬ್ಬ ಶಾಸಕರಿಗೆ ಶೋಭೆ ತರುವಂತಹದ್ದಲ್ಲ ಎಂದರು.

ತಾಲ್ಲೂಕು ರೈತ ಸಂಘದ ಅಧ್ಯಕ್ಷ ಮಂಚನಹಳ್ಳಿ ನಾಗಣ್ಣ, ತಾಲ್ಲೂಕು ಭ್ರಷ್ಟಾಚಾರ ವಿರೋಧಿರಂಗದ ಅಧ್ಯಕ್ಷ ಜವರಾಯಿ ಗೌಡ, ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಎ.ಸಿ. ಕಾಂತರಾಜು, ಜಿ.ಪಂ. ಮಾಜಿ ಸದಸ್ಯ ಡಾ.ಎಸ್. ಕೃಷ್ಣಮೂರ್ತಿ, ಆಸರೆ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಎಚ್.ಬಿ. ಮಂಜುನಾಥ್, ರೈತ ಮುಖಂಡರಾದ ಎಂ.ವಿ. ರಾಜೇಗೌಡ, ಎಲ್.ಬಿ. ಜಗದೀಶ್, ನಗರೂರು ಕುಮಾರ್, ಮರುವನಹಳ್ಳಿ ಶಂಕರ್, ಕಾರಿಗನಹಳ್ಳಿ ಕುಮಾರ್, ಎಸ್.ಬಿ. ಮಂಜು ನಾಥ್, ಬಿ.ಆರ್. ಪ್ರಸನ್ನ, ನೀತಿಮಂಗಲ ಮಹೇಶ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.