ADVERTISEMENT

ನಾಳೆ ‘ಮೈಷುಗರ್‌’ ಚಕ್ರ ತಿರುಗಲಿವೆ!

​ಪ್ರಜಾವಾಣಿ ವಾರ್ತೆ
Published 4 ಜುಲೈ 2017, 6:56 IST
Last Updated 4 ಜುಲೈ 2017, 6:56 IST
ನಾಳೆ ‘ಮೈಷುಗರ್‌’ ಚಕ್ರ ತಿರುಗಲಿವೆ!
ನಾಳೆ ‘ಮೈಷುಗರ್‌’ ಚಕ್ರ ತಿರುಗಲಿವೆ!   

ಮಂಡ್ಯ: ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಮೈಷುಗರ್‌ ಕಾರ್ಖಾನೆ ಯಂತ್ರಗಳು ಜುಲೈ 5ರಂದು ಕಾರ್ಯಾರಂಭ ಮಾಡಲಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. 2015, ಏ. 21ರಂದು ಸ್ಥಗಿತಗೊಂಡಿದ್ದ ಕಾರ್ಖಾನೆ ಚಕ್ರಗಳು ಮತ್ತೆ ತಿರುಗಲಿವೆ. ಮುಖಂಡರು ಹಾಗೂ ರೈತರು ನಡೆಸಿದ ಹೋರಾಟದ ಫಲವಾಗಿ ಕಾರ್ಖಾನೆ ಆರಂಭವಾಗುವ ಮಹೂರ್ತ ಬಂದಿದೆ.

ಏಪ್ರಿಲ್‌ 14ರಂದು ಅಂಬೇಡ್ಕರ್‌ ಜಯಂತಿಯ ದಿನ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ ಹಾಗೂ ಶಾಸಕ ಅಂಬರೀಷ್‌ ಕಾರ್ಖಾನೆಯ ಬಾಯ್ಲರ್‌ಗೆ ಬೆಂಕಿ ಹಚ್ಚಿದ್ದರು. ಅಲ್ಲಿಂದ ಆಡಳಿತ ಮಂಡಳಿ ಕಾರ್ಖಾನೆ ಆರಂಭಿ ಸಲು ಸಕಲ ಯತ್ನ ನಡೆಸಿತ್ತು. ಆ ಎಲ್ಲ ಶ್ರಮದ ಪರಿಣಾಮವಾಗಿ ಕಾರ್ಖಾನೆಯ ಚಿಮಣಿಯಲ್ಲಿ ಹೊಗೆಯಾಡುತ್ತಿದೆ.

‘ನಾವೆಲ್ಲ ನಮ್ಮ ಕರ್ತವ್ಯ ಮಾಡಿದ್ದೇವೆ. ಇದರಲ್ಲಿ ರೈತರ ಹಿತವೇ ಮುಖ್ಯವಾಗಿತ್ತು. ಐತಿಹಾಸಿಕ ಕಾರ್ಖಾನೆ ನಡೆಯಬೇಕು ಎಂಬ ಒತ್ತಾಸೆಯಿಂದ ಆಡಳಿತ ಮಂಡಳಿ ಕೆಲಸ ಮಾಡಿತು. ಹೀಗಾಗಿ ಕಾರ್ಖನೆ ಆರಂಭವಾಗುತ್ತಿದೆ’ ಎಂದು ಕಾರ್ಖಾನೆ ಪ್ರಧಾನ ವ್ಯವಸ್ಥಾಪಕ ಕೆ.ಎಂ.ಬೋರೇಗೌಡ ಹೇಳಿದರು.

ADVERTISEMENT

2 ಲಕ್ಷ ಟನ್‌ ಕಬ್ಬು ಪೂರೈಸಲು ಒಪ್ಪಿಗೆ: ಮೈಷುಗರ್‌ ವ್ಯಾಪ್ತಿಯಲ್ಲಿ ಎಂಟು ಕಬ್ಬು ಬೆಳೆಗಾರರ ವಲಯಗಳಿವೆ. ಶಿವಳ್ಳಿ, ಹೊಳಲು, ಮಂಡ್ಯ, ಕೊತ್ತತ್ತಿ, ಬೆಸಗರಹಳ್ಳಿ, ಹಲ್ಲೆಗೆರೆ, ಬಸರಾಳು ವ್ಯಾಪ್ತಿಯಲ್ಲಿ ಬರುವ ಕಬ್ಬು ಬೆಳೆಗಾರರು ಪ್ರಸ್ತುತ 2 ಲಕ್ಷ ಟನ್‌ ಕಬ್ಬು ಪೂರೈಕೆ ಮಾಡಲು ಒಪ್ಪಿಗೆ ನೀಡಿದ್ದಾರೆ. ಕಬ್ಬು ಅಭಿವೃದ್ಧಿ ಅಧಿಕಾರಿಗಳು ಹಾಗೂ ಕ್ಷೇತ್ರ ಸಹಾಯಕರು ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ರೈತರಲ್ಲಿ ಭರವಸೆ ಮೂಡಿಸಿ ಕಬ್ಬು ಪೂರೈಸಲು ಒಪ್ಪಿಗೆ ಪಡೆದಿದ್ದಾರೆ.

‘ಜಿಲ್ಲೆಯ ರೈತರು ಬಹಳ ಪ್ರೀತಿ ಯಿಂದ ಮೈಷುಗರ್‌ ಕಾರ್ಖಾನೆಗೆ ಕಬ್ಬು ಪೂರೈಸುತ್ತಾರೆ. ಆದರೆ ಸರ್ಕಾರ ಅಷ್ಟೇ ಪ್ರೀತಿಯಿಂದ ಅವರಿಗೆ ನ್ಯಾಯಯುತ ಬೆಲೆ ನೀಡಬೇಕು’ ಎಂದು ಮೈಷುಗರ್‌ ವ್ಯಾಪ್ತಿಯ ಕಬ್ಬು ಒಪ್ಪಿಗೆದಾರರ ಸಂಘದ ಅಧ್ಯಕ್ಷ ಎಸ್‌.ಕೃಷ್ಣ ಹೇಳಿದರು.

ಸಹವಿದ್ಯುತ್‌ ಘಟಕವೂ ಆರಂಭ: ಕಾರ್ಖಾನೆ ಜೊತೆಜೊತೆಯಲ್ಲೇ ಸಹ ವಿದ್ಯುತ್‌ ಘಟಕವನ್ನೂ ಆರಂಭಿಸಲು ಆಡಳಿತ ಮಂಡಳಿ ಸಿದ್ಧತೆ ನಡೆಸಿದೆ. ದಿನಕ್ಕೆ 30 ಮೆಗಾ ವಾಟ್‌ ವಿದ್ಯುತ್‌ ಉತ್ಪಾದನಾ ಸಾಮರ್ಥ ಹೊಂದಿರುವ ಘಟಕ ಮಂಗಳವಾರದಿಂದ ಕಾರ್ಯಾರಂಭ ಮಾಡಲಿದೆ.

₹ 3000 ಮುಂಗಡ ಹಣ ನೀಡಲಿ: ‘ಕಾರ್ಖಾನೆ ಆರಂಭವಾಗುತ್ತಿರುವುದು ಸಂತಸದ ವಿಷಯ. ರೈತರಿಗೆ ಸೂಕ್ತ ಬೆಲೆ ಸಿಗಬೇಕು. ಟನ್‌ ₹ 3000 ಮುಂಗಡ ಹಣ ನೀಡಿ ಕಬ್ಬು ಅರೆಯಬೇಕು. ಕಳೆದ ಎರಡು ವರ್ಷಗಳಿಂದ ರೈತರು ಕಷ್ಟ ಪಟ್ಟು ಕಬ್ಬು ಬೆಳೆದಿದ್ದಾರೆ. ಸರ್ಕಾರದ ಯಾವುದೇ ಸಹಾಯ ಇಲ್ಲದೆ, ಕಾವೇರಿ ನೀರು ಪಡೆಯಡೆ ಸಾಲ ಮಾಡಿ ಕೊಳವೆ ಬಾವಿ ಕೊರೆಸಿ ಕಬ್ಬು ಉಳಿಸಿಕೊಂಡಿದ್ದಾರೆ. ಹೀಗಾಗಿ ರೈತರಿಗೆ ಸೂಕ್ತ ಬೆಲೆ ಸಿಗಬೇಕು’ ಎಂದು ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಂಬೂನಹಳ್ಳಿ ಸುರೇಶ್‌ ಒತ್ತಾಯಿಸಿದರು.

ರೈತರ ವಿಶ್ವಾಸ ಉಳಿಸಿಕೊಳ್ಳಲಿ
‘ಮಂಡ್ಯ ಜಿಲ್ಲೆಗೆ ಆರ್ಥಿಕ ಭದ್ರತೆ ನೀಡಿದ್ದೇ ಮೈಷುಗರ್‌ ಕಾರ್ಖಾನೆ. ಸಕ್ಕರೆ ನಾಡು, ಕಬ್ಬು ಬೆಳೆಗಾರರ ಕ್ಷೇತ್ರ ಎಂದು ಗುರುತಿಸಿಕೊಳ್ಳಲು ಈ ಐತಿಹಾಸಿಕ ಕಾರ್ಖಾನೆಯೇ ಕಾರಣ. ಆದರೆ, ಕಾರಣಾಂತರಗಳಿಂದ ಕಾರ್ಖಾನೆ ಸ್ಥಗಿತಗೊಂಡಾಗ ಜಿಲ್ಲೆಗೆ ಒಂದು ಕಪ್ಪು ಚುಕ್ಕಿ ತಾಗಿತ್ತು. ಆದರೆ, ಈಗ ಅದು ಮರೆಯಾಗುವ ಕಾಲ ಬಂದಿದೆ.

ಕಾರ್ಖಾನೆಯ ಚಿಮಣಿಯಲ್ಲಿ ಹೊಗೆಯಾಡುತ್ತಿದೆ. ಬರೀ ಕಾರ್ಖಾನೆ ಆರಂಭವಾದರೆ ಸಾಲದು, ರೈತರಿಗೆ ಸೂಕ್ತ ಬೆಲೆ ನೀಡಿ ಅವರ ವಿಶ್ವಾಸ ಉಳಿಸಿಕೊಳ್ಳಬೇಕು. ಆಗ ಮಾತ್ರ ಮೈಷುಗರ್‌ನ ಐತಿಹಾಸಿಕ ಪರಂಪರೆ ಮತ್ತೊಮ್ಮೆ ರೂಪುಗೊಳ್ಳುತ್ತದೆ’ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್‌.ಆತ್ಮಾನಂದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.