ADVERTISEMENT

ನೀರಾವರಿ ಯೋಜನೆಗೆ ಹಣದ ಕೊರತೆ: ಶಾಸಕ

​ಪ್ರಜಾವಾಣಿ ವಾರ್ತೆ
Published 9 ಜೂನ್ 2011, 11:05 IST
Last Updated 9 ಜೂನ್ 2011, 11:05 IST

ಶ್ರೀರಂಗಪಟ್ಟಣ: ಸರ್ಕಾರ ಅಗತ್ಯ ಹಣಕಾಸು ನೀಡದ ಕಾರಣ ಕರೀಘಟ್ಟ ಏತ ನೀರಾವರಿ ಯೋಜನೆ ಪೂರ್ಣಗೊಳ್ಳದೆ ಕುಂಟುತ್ತಾ ಸಾಗಿದೆ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

ತಾಲ್ಲೂಕಿನ ಕರೀಘಟ್ಟ 2ನೇ ಹಂತದ ಏತ ನೀರಾವರಿ ಯೋಜನೆ ಘಟಕದಲ್ಲಿ ಬುಧವಾರ ನಡೆದ ಮೈಸೂರು ವಿಭಾಗದ ಏತ ನೀರಾವರಿ ಯೋಜನೆಗಳ ಪಂಪ್ ಆಪರೇಟರ್‌ಗಳ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ಹತ್ತಾರು ಗ್ರಾಮಗಳ ಬರಡು ಭೂಮಿಗೆ ನೀರುಣಿಸಲು ರೂಪಿಸಿರುವ ಕರೀಘಟ್ಟ ಯೋಜನೆ ಅನುಷ್ಠಾನ ಸಾಧ್ಯವಾಗಿಲ್ಲ. ಒಟ್ಟು 887 ಹೆಕ್ಟೇರ್ ಪ್ರದೇಶಕ್ಕೆ ನೀರು ಹರಿಸುವ ಯೋಜನೆಯ ಅಲ್ಲಾಪಟ್ಟಣ ಹಾಗೂ ಟಿ.ಎಂ.ಹೊಸೂರು ಶಾಖಾ ಕಾಲುವೆ ಕಾಮಗಾರಿಗಳು ಬಾಕಿ ಉಳಿದಿವೆ. ವಿ.ಸಿ ಸಂಪರ್ಕ ನಾಲೆಯಿಂದ ಹಿಮ್ಮುಖವಾಗಿ ನೀರು ಹರಿಸುವ ಕಾಮಗಾರಿಗೆ ರೂ.90 ಲಕ್ಷ, 5.86 ಕಿ.ಮೀನಲ್ಲಿ ಗಟ್ಟಿಕಲ್ಲು ಅಗೆತಕ್ಕೆ ರೂ.60 ಲಕ್ಷ ಹಣ ಸೇರಿ ರೂ.1.5ಕೋಟಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು. ಈ ಕುರಿತು ಜಲ ಸಂಪನ್ಮೂಲ ಇಲಾಖೆ ಕಾರ್ಯದರ್ಶಿಗೆ 5 ತಿಂಗಳ ಹಿಂದೆ ಪತ್ರ ಬರೆದಿದ್ದು, ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

  ವಿದ್ಯುತ್ ಸಮಸ್ಯೆಯಿಂದ ನಾಲೆಯಲ್ಲಿ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ಸೆಸ್ಕ್‌ಗೆ ಬಾಕಿ 60 ಲಕ್ಷ ಪಾವತಿಸಲಾಗಿದೆ. 24 ಗಂಟೆ ವಿದ್ಯುತ್ ಸರಬರಾಜು ಮಾಡುವ ಎಕ್ಸ್‌ಪ್ರೆಸ್ ಫೀಡರ್ ಮಾರ್ಗ ಅಳವಡಿಸುವಂತೆ ಸೆಸ್ಕ್ ಅಧೀಕ್ಷಕ ಎಂಜಿನಿಯರ್‌ಗೆ ಮನವಿ ಸಲ್ಲಿಸಲಾಗಿದೆ ಎಂದು ಎಇಇ ಕೆ.ಎಸ್.ಕಾಂತರಾಜು ತಿಳಿಸಿದರು. ಅಧೀಕ್ಷಕ ಎಂಜಿನಿಯರ್ ಎಸ್.ರಂಗನಾಥನಾಯಕ್ ಮಾತನಾಡಿ, ರಾಜ್ಯದಲ್ಲಿ ಬಹಳಷ್ಟು ಏತ ನೀರಾವರಿ ಯೋಜನೆಗಳು ಶವದ ಪೆಟ್ಟಿಗೆ ಸೇರಿವೆ. ಮೈಸೂರು ಭಾಗದ 47 ಯೋಜನೆಗಳು ಜೀವಂತವಾಗಿದ್ದು, ರೈತರು ಪ್ರಯೋಜನ ಪಡೆಯುತ್ತಿದ್ದಾರೆ. ತಾಂತ್ರಿಕ ತೊಂದರೆಯಿಂದ ಕೆಲವು ಸ್ಥಗಿತಗೊಂಡಿದ್ದು, ಮರುಜೀವ ನೀಡಲಾಗುತ್ತಿದೆ ಎಂದರು.

ಕಾರ್ಯ ನಿರ್ವಾಹಕ ಎಂಜಿನಿಯರ್ ಎಚ್.ಬಿ.ಮಲ್ಲಪ್ಪ, ಎಇಇಗಳಾದ ರಂಗಸ್ವಾಮಿ, ಯೋಗೇಶ್, ಬೆಂಗಳೂರು ಜಲಮಂಡಳಿ ಎಂಜಿನಿಯರ್ ಜಾನ್ ಇದ್ದರು. ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳ ಪಂಪ್ ಆಪರೇಟರ್‌ಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.