ADVERTISEMENT

`ನೊಂದ ಮನಗಳ ಜೊತೆಗೆ ನಮ್ಮ ಹೆಜ್ಜೆ'

​ಪ್ರಜಾವಾಣಿ ವಾರ್ತೆ
Published 14 ಜೂನ್ 2013, 10:38 IST
Last Updated 14 ಜೂನ್ 2013, 10:38 IST

ಮಂಡ್ಯ: ರಕ್ತ ಬೇಕಾಗಿದೆ !
ಅಪಘಾತ, ಪ್ರಸವ, ಶಸ್ತ್ರ ಚಿಕಿತ್ಸೆ ಅಥವಾ ರಕ್ತ ಅಗತ್ಯವಿರುವ ರೋಗಿಯನ್ನು ಆಸ್ಪತ್ರೆಗೆ ಕರೆತಂದಾಗ ರೋಗಿಯ ಸಂಬಂಧಿಕರಿಗೆ ಗಂಭೀರವಾಗಿ ಕಾಡುವ ಪ್ರಶ್ನೆ ಇದು.

ಆಸ್ಪತ್ರೆಗೆ ದಾಖಲಾದಾಗ ನಿಮ್ಮ ಹೆಸರೇನು, ರಕ್ತದ ಗುಂಪು ಯಾವುದು ಎಂಬ ಪ್ರಶ್ನೆ ಜೊತೆಗೆ, `.. ಗುಂಪಿನ ರಕ್ತ ಬೇಕು. ಡೋನರ್ಸ್‌ ಇದ್ರೆ ನೋಡಿ' ಎಂಬ ಸಲಹೆಯೂ ಬರುತ್ತದೆ. ದಾನಿಗಳನ್ನು ಹುಡುಕುತ್ತಾ ಹೊರಟಾಗ ಪ್ರತಿಕ್ರಿಯೆ ಪಾಸಿಟಿವ್ ಇದ್ದರೆ ಗೆದ್ದೆವು. ನೆಗೆಟಿವ್ ಆದರೆ ಸಂಬಂಧಿಕರ ಪರಿಸ್ಥಿತಿ, ರೋಗಿಗಿಂತಲೂ ಗಂಭೀರ !

ಅದರಲ್ಲೂ, ಪಾಸಿಟಿವ್ ಗುಂಪಿನ ರಕ್ತ ಸಿಗಬಹುದೇನೋ. ಗುಂಪು ನೆಗೆಟಿವ್ ಇದ್ದರಂತೂ ಪರಿಸ್ಥಿತಿ ವಿವರಿಸುವುದೇ ಬೇಡ. ಆತಂಕ, ದುಃಖದಿಂದಾಗಿ ಆಗ ಕಣ್ಣಲ್ಲಿ ನೀರಷ್ಟೇ ಅಲ್ಲ; ರಕ್ತವೇ ಹರಿಯಬಹುದೇನೋ !

ಹೀಗೆ, ಎದುರಾದ ನೆಗೆಟಿವ್ ಪ್ರತಿಕ್ರಿಯೆಗಳನ್ನೇ ಪಾಸಿಟಿವ್ ಆಗಿ ಪರಿಗಣಿಸಿದ ಯುವಕನೊಬ್ಬ ರಕ್ತ ಸಂಗ್ರಹದ ಅಭಿಯಾನ ಅರಂಭಿಸಿದ ಬೆಳವಣಿಗೆ ಇದು.
ಸ್ವತಃ ರಕ್ತದಾನ ಮಾಡುವುದರ ಜತೆಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಾ, ಅದೆಷ್ಟೋ, ಜೀವಗಳ ಪಾಲಿಗೆ ಅಕ್ಷರಶಃ `ಜೀವ ರಕ್ಷಕ'ನಾಗಿದ್ದಾರೆ. ಅವರು ಎಸ್.ಎಂ. ನಟರಾಜು. ಮಂಡ್ಯ ಜಿಲ್ಲೆಯ ಸಂತೆಕಸಲಗೆರೆ ಹುಟ್ಟೂರು. ಮಂಡ್ಯದ ಮಾರುಕಟ್ಟೆಯ ಅಂಗಳದಲ್ಲಿ ಪುಟ್ಟದೊಂದು ಕ್ಯಾಂಟೀನ್ ನಡೆಸುತ್ತಾರೆ. ಅದು, ಅವರ ಬದುಕಿನ ಜೀವಧಾರೆ.

`ನೊಂದ ಮನಗಳ ಜೊತೆಗೆ ನಮ್ಮ ಹೆಜ್ಜೆ' ಎನ್ನುವ ಟ್ಯಾಗ್‌ಲೈನ್‌ನೊಂದಿಗೆ ಸಮಾನಮನಸ್ಕ ಗೆಳೆಯರೊಡಗೂಡಿ `ಜೀವಧಾರೆ ಟ್ರಸ್ಟ್' ಸ್ಥಾಪಿಸ್ದ್ದಿದಾರೆ. ಕಷ್ಟದಲ್ಲಿದ್ದವರಿಗೆ ರಕ್ತದ ನೆರವು ಒದಗಿಸಿ ಅವರಿಗೂ ಜೀವಧಾರೆ ಆಗುವುದು ಇದರ ಉದ್ದೇಶ.

2002ನೇ ಇಸವಿಯಲ್ಲಿ ಅನಾರೋಗ್ಯದಿಂದ ಇದ್ದ ಗೆಳೆಯನ ಪತ್ನಿಗೆ ರಕ್ತಕ್ಕೆ ಒದಗಿಸಲು ಎದುರಾದ ಸಮಸ್ಯೆಯೇ ಇವರಿಗೆ ರಕ್ತದಾನ ಅಭಿಯಾನದಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ.

`ಒಳ್ಳೆಯ ಕೆಲಸ ಮಾಡ್ತಿದ್ದಿ ಮುಂದುವರೆಸು...' ಎಂಬ ಶಿಕ್ಷಕ ಸಿದ್ದಯ್ಯ, ಅಣ್ಣ ಪರಶಿವಮೂರ್ತಿ ಮಾತುಗಳೂ ಉತ್ಸಾಹ ಮೂಡಿಸಿತ್ತು. ವ್ಯವಸ್ಥಿತವಾಗಿ ಈ ಕಾಯಕ ಮುಂದುವರೆಸಬೇಕೆಂಬ ಸ್ನೇಹಿತರ ಸಲಹೆಯೇ `ಜೀವಧಾರೆ ಸ್ವಯಂ ಪ್ರೇರಿತ ರಕ್ತದಾನಿಗಳ ಟ್ರಸ್ಟ್' ಹುಟ್ಟಿಗೆ ಕಾರಣವಾಯಿತು' ಎಂದು ಹಿಂದಿನ ಘಟನೆಗಳನ್ನು ಸ್ಮರಿಸಿಕೊಳ್ಳುತ್ತಾರೆ ನಟರಾಜ್.

`ರಕ್ತದಾನಿಗಳೇ ನಮ್ಮಡನೆ ಬನ್ನಿ, ಜೀವ ಜೀವಗಳ ಬೆಸುಗೆ ಹಾಕೋಣ' ಎನ್ನುವ ಪ್ರೀತಿಯ ಕರೆಗೆ ಸುಮಾರು 2500ಕ್ಕೂ ಹೆಚ್ಚು ಮಂದಿ ಓಗೊಟ್ಟಿದ್ದಾರೆ. ಆಟೋ ಚಾಲಕರು, ಕಾರ್ಮಿಕರು, ಗ್ರಾಮೀಣ ಯುವಕರು, ಕಾಲೇಜು ವಿದ್ಯಾರ್ಥಿಗಳು, ಕೆಲ ಉದ್ಯೋಗಿಗಳು, ತರಕಾರಿ ವ್ಯಾಪಾರಿಗಳೇ `ಜೀವಧಾರೆ' ಕುಟುಂಬದ ಸದಸ್ಯರು.

`ಜೀವ ರಕ್ಷಕ' ಯುವ ಪಡೆಯಲ್ಲಿ ಪಿ.ಪ್ರಶಾಂತ್, ಜಿ.ಕಿರಣ್, ಎ.ಆರ್.ರವಿ, ಶಶಿಧರ್, ಕೆ.ಟಿ.ಹನುಮೇಶ್, ಎಂ.ಸಿ.ಲಂಕೇಶ್, ಆನಂದ್, ವೈರಮುಡಿ, ಚೆಲುವರಾಜು, ಪ್ರಶಾಂತ್, ಜಿ.ಎಸ್.ಶಿಲ್ಪಾ ಸೇರಿದಂತೆ ಅನೇಕರು ಇದ್ದಾರೆ. ಮಂಡ್ಯದಲ್ಲಷ್ಟೇ ಅಲ್ಲದೆ, ಮೈಸೂರು, ಚಾಮರಾಜನಗರ, ಬೆಂಗಳೂರು ನಗರದಲ್ಲೂ ಈ ಟ್ರಸ್ಟ್ ಕೆಲಸ ನಿರ್ವಹಿಸುತ್ತಿದೆ. `150ಕ್ಕೂ ಹೆಚ್ಚು ಶಿಬಿರ ಸಂಘಟಿಸಿದ್ದೇನೆ, 11,000ಕ್ಕೂ ಹೆಚ್ಚು ಯೂನಿಟ್ ರಕ್ತ ಸಂಗ್ರಹಿಸಿ ನೀಡಿದ್ದೇನೆ. ದಿನದ 24 ಗಂಟೆಯೂ ಸೇವೆಗೆ ಲಭ್ಯ. ರಕ್ತ ಅಗತ್ಯವಿರುವವರು ಕರೆ ಮಾಡಿದರೆ, ಆಯಾ ಜಿಲ್ಲೆಯಲ್ಲೇ, ರಕ್ತದಾನಿಗಳಿಂದ ರಕ್ತಕ್ಕೆ ವ್ಯವಸ್ಥೆ ಮಾಡತ್ತೇನೆ' ಎನ್ನುತ್ತಾರೆ ನಟರಾಜು.

ರಕ್ತದಾನ ಬಗೆಗೆ ಜಾಗೃತಿ ಕಾರ್ಯಕ್ರಮಗಳು, ಶಿಬಿರಗಳನ್ನೂ ನಡೆಸುತ್ತಾ ಬಂದಿರುವ ಟ್ರಸ್ಟ್‌ಗೆ, ಯಾವುದೇ ಆರ್ಥಿಕ ನೆರವು ಸಿಕ್ಕಿಲ್ಲ. ದಾನಿಗಳಿಗೆ ಹಣ್ಣುಹಂಪಲು, ಮೊಳಕೆ ಕಾಳು ನೀಡಬೇಕು. ಆ ವೆಚ್ಚವನ್ನಾದರೂ ಭರಿಸಲು ಹಣ ಬೇಕು. ಸರ್ಕಾರ ನೆರವು ನೀಡಬೇಕೆಂದು ಮನವಿ ಮಾಡುತ್ತಾರೆ.
ನಟರಾಜು ಅವರ ನಿಸ್ವಾರ್ಥ ಕಾಯಕಕ್ಕೆ ಜಿಲ್ಲಾ ಯುವ ಪ್ರಶಸ್ತಿ, ರಾಜ್ಯ ಯುವ ಪ್ರಶಸ್ತಿ ದೊರಕಿದೆ. ಪ್ರಶಸ್ತಿ ಸ್ವೀಕರಿಸಿದ ನಾನು ಸಾಂಕೇತಿಕ. ಇದರ ಶ್ರೇಯ, ನನ್ನ ಜೊತೆ ನಿಂತ `ರಕ್ತದಾನಿ'ಗಳಿಗೆ ಸಲ್ಲಬೇಕು ಎನ್ನುತ್ತಾರೆ.

`ಪ್ರಾಣ ಕೊಟ್ಟೇವು, ರಕ್ತ ಕೊಟ್ಟೇವು..' ಎಂಬ ಘೋಷಣೆಗಳು ಆಗಾಗ್ಗೆ ಕೇಳಿಬಂದರೂ ರಕ್ತದ ಅಗತ್ಯ ಇದ್ದಾಗ ಇಂಥವು ನೆರವಿಗೆ ಬರುವುದಿಲ್ಲ. ಆದರೆ, ಇದಕ್ಕೆ ಭಿನ್ನ ಎನ್ನುವಂತೆ ನಟರಾಜ್ ಮತ್ತು ಆತನ `ಜೀವ ರಕ್ಷಕ ಪಡೆ' ಸದ್ದಿಲ್ಲದೆ ಕೆಲಸ ಮುಂದುವರೆಸಿಕೊಂಡು ಹೋಗುತ್ತದೆ.  ನಟರಾಜು ಅವರ ಮೊ.ಸಂ. 97431-91816.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.