ADVERTISEMENT

ಪರಿಸರಕ್ಕಾಗಿ ಸೈಕಲ್‌ ಜಾಥಾ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2017, 8:21 IST
Last Updated 21 ಅಕ್ಟೋಬರ್ 2017, 8:21 IST
ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಿಂದ ಸೈಕಲ್‌ ಏರಿ ಹೊರಟ ಮಂಡ್ಯ ಗಿರೀಶ್‌
ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಿಂದ ಸೈಕಲ್‌ ಏರಿ ಹೊರಟ ಮಂಡ್ಯ ಗಿರೀಶ್‌   

ಮಂಡ್ಯ: ‘ಪರಿಸರ ನಮ್ಮ ಉಸಿರು, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ’ ಎಂಬ ವಿಷಯಗಳನ್ನಿಟ್ಟುಕೊಂಡು ಸೈಕಲ್‌ ಜಾಥಾ ಮೂಲಕ ಏಕಾಂಗಿಯಾಗಿ ಅರಿವು ಮೂಡಿಸುತ್ತಿರುವ ಮಂಡ್ಯ ಗಿರೀಶ್‌ ಅವರು ಯುವಜನರಿಗೆ ಸ್ಫೂರ್ತಿಯಾಗಿದ್ದಾರೆ.

ಮದ್ದೂರು ತಾಲ್ಲೂಕು, ಮಾರಂಗೆರೆ ಗ್ರಾಮದ ಶಿವಯ್ಯ– ರೇವಮ್ಮ ದಂಪತಿಯ ಪುತ್ರರಾದ ಗಿರೀಶ್‌ ನಗರದ ಗುತ್ತಲು ಬಡಾವಣೆಯ ನಿವಾಸಿ. ಇವರು ಟೊಯೊಟಾ ಕಂಪೆನಿಯ ನೌಕರರಾಗಿದ್ದು, ಕಂಪೆನಿಯಲ್ಲಿ ನಡೆಸುವ ಪರಿಸರ ಜಾಗೃತಿ ಕಾರ್ಯಕ್ರಮದಿಂದ ಆಕರ್ಷಿತರಾಗಿ ಸಮಾಜಕ್ಕೆ ಸಂದೇಶ ನೀಡಲು ಸೈಕಲ್‌ ಜಾಥಾ ಆಯ್ಕೆಮಾಡಿಕೊಂಡಿದ್ದಾರೆ

ಮೊದಲ ಬಾರಿಗೆ ಕಳೆದ ನವೆಂಬರ್‌ನಲ್ಲಿ ಮದ್ದೂರು, ಮಳವಳ್ಳಿ, ನಾಗಮಂಗಲ, ಪಾಂಡವಪುರ, ಕೆ.ಆರ್‌.ಪೇಟೆ, ಶ್ರೀರಂಗಪಟ್ಟಣ ತಾಲ್ಲೂಕು ಕೇಂದ್ರಗಳಲ್ಲಿ ಸೈಕಲ್‌ ಜಾಥಾ ಮೂಲಕ ಪರಿಸರ ಜಾಗೃತಿ ನಡೆಸಿದ ಅವರು 300 ಕಿ.ಮೀಗೂ ಹೆಚ್ಚು ಸೈಕಲ್‌ ತುಳಿದಿದ್ದಾರೆ. ಜಿಲ್ಲೆಯ ಹಳ್ಳಿಗಳಲ್ಲಿ ಸಂಚರಿಸಿ ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸಿದ್ದಾರೆ. ಇಲ್ಲಿಯವರೆಗೆ 110 ಹಳ್ಳಿಗಳಲ್ಲಿ ಜಾಥಾ ನಡೆಸಿರುವ ಇವರು 1,000ಕ್ಕೂ ಹೆಚ್ಚು ಪರಿಸರ ಕಾಳಜಿಯ ಭಿತ್ತಿ ಪತ್ರ ಹಂಚಿದ್ದಾರೆ.

ADVERTISEMENT

‘ನನ್ನ ಈ ಸೈಕಲ್‌ ಜಾಥಾಕ್ಕೆ ನನ್ನ ಅಣ್ಣ, ಕಾನ್‌ ಸ್ಟೆಬಲ್‌ ಶಿವಸ್ವಾಮಿ ಹಾಗೂ ಗ್ರಾಮದ ನೆಚ್ಚಿನ ಸ್ನೇಹಿತರು ಎಲ್ಲಿಲ್ಲದ ಪ್ರೋತ್ಸಾಹ ನೀಡುತ್ತಿದ್ದಾರೆ. ನನ್ನಲ್ಲಿ ಶಕ್ತಿ ಇರುವವರೆಗೂ ನೈಸರ್ಗಿಕ ಪದಾರ್ಥಗಳ ಬಳಕೆ, ಪರಿಸರದ ಮೇಲಾಗುವ ದುಷ್ಪರಿಣಾಮ ಹಾಗೂ ಅಪೌಷ್ಟಿಕತೆಯಿಂದ ಸಾಯುತ್ತಿರುವ ಮಕ್ಕಳ ಬಗ್ಗೆ ಅರಿವು ಮೂಡಿಸುವೆ.

ನೀರಿನ ಮಿತವ್ಯಯ, ಸೌಂದರ್ಯ ವರ್ಧಕ ಬಳಕೆಯಿಂದಾಗುವ ದುಷ್ಪರಿಣಾಮ, ಪ್ಲಾಸ್ಟಿಕ್‌ ವಸ್ತುಗಳ ಬಳಕೆಯಿಂದ ದೂರ ಇರುವುದು, ಕೃಷಿಯಲ್ಲಿ ರಾಸಾಯನಿಕ ಗೊಬ್ಬರ ಬಳಕೆಯಿಂದ ಆಗುವ ಅಡ್ಡ ಪರಿಣಾಮ, ರಾಜಕೀಯ ಮುಖಂಡರು ಅಳವಡಿಸುವ ಫ್ಲೆಕ್ಸ್‌ಗಳಿಂದ ಆಗುವ ಪರಿಸರ ಹಾನಿ ಮುಂತಾದ ವಿಷಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವೆ’ ಎನ್ನುತ್ತಾರೆ.

‘ಆಹಾರ, ನೀರು, ಶುದ್ಧವಾದ ಗಾಳಿ ಎಲ್ಲವೂ ಸಿಗುತ್ತಿದ್ದು, ಅದನ್ನು ಕಲುಷಿತ ಮಾಡುತ್ತಿದ್ದೇವೆ. ಅದನ್ನು ಜೋಪಾನ ಮಾಡಿ ಮುಂದಿನ ಪೀಳಿಗೆಗೆ ಉಳಿಸಬೇಕು. ಇಲ್ಲವಾದರೆ ಮುಂದೆ ಮನುಕುಲವೇ ನಾಶವಾಗುತ್ತದೆ’ ಎಂದು ಗಿರೀಶ್‌ ಕಳವಳ ವ್ಯಕ್ತಪಡಿಸುತ್ತಾರೆ.

‘ಹಳ್ಳಿಗಳಿಗೆ ಹೋದಾಗ ಜನರು ಉತ್ಸಾಹದಿಂದ ನನ್ನ ಬಳಿ ಬಂದು ಮಾತನಾಡುತ್ತಾರೆ. ಅವರ ಆಶೀರ್ವಾದ ಇದ್ದರೆ ಸಾಕು, ಇನ್ನೂ ಹೆಚ್ಚು ಪರಿಸರ ಜಾಗೃತಿ ಕೆಲಸದಲ್ಲಿ ತೊಡಗುತ್ತೇನೆ’ ಎಂದು ಅವರು ತಿಳಿಸಿದರು.
ಮೋಹನ್‌ ರಾಗಿಮುದ್ದನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.