ADVERTISEMENT

ಪರಿಸರಕ್ಕೆ ಪ್ಲಾಸ್ಟಿಕ್‌ ಮಾರಕ

ಕಾವೇರಿ ಉದ್ಯಾನದಲ್ಲಿ ಚಿತ್ರಕಲೆ, ಪ್ರಬಂಧ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2018, 11:15 IST
Last Updated 13 ಜೂನ್ 2018, 11:15 IST

ಮಂಡ್ಯ: ‘ಜೀವ ಸಂಕುಲಕ್ಕೆ ಪ್ಲಾಸ್ಟಿಕ್ ಅಪಾಯಕಾರಿಯಾಗಿದ್ದು ಜನರು ಪ್ಲಾಸ್ಟಿಕ್‌ ಬ್ಯಾಗ್‌ ನಿರಾಕರಿಸಿ ಬಟ್ಟೆ, ಸೆಣಬಿನ ಕೈಚೀಲ ಬಳಸಬೇಕು’ ಎಂದು ಜಿಲ್ಲಾ ಪರಿಸರ ಅಧಿಕಾರಿ ಕೆ.ಎಲ್.ಸವಿತಾ ಹೇಳಿದರು.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಅರಣ್ಯ ಇಲಾಖೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕಾವೇರಿ ಉದ್ಯಾನದಲ್ಲಿ ಮಂಗಳವಾರ ನಡೆದ ಚಿತ್ರ ಬರೆಯುವ ಹಾಗೂ ಪ್ರಬಂಧ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.

‘ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಭೂಮಿ, ಸಮುದ್ರವನ್ನು ಕಲುಷಿತಗೊಳಿಸುತ್ತಿದೆ. ಒಂದು ತೆಳುವಾದ ಪ್ಲಾಸ್ಟಿಕ್ ಹಾಳೆ ಭೂಮಿಯಲ್ಲಿ ಕೊಳೆಯಲು ನೂರಾರು ವರ್ಷ ಬೇಕಾಗುತ್ತದೆ. ಭೂಮಿಯ ಮೇಲಿನ ನೀರು ಅಂತರ್ಜಲ ಸೇರಲು ಪ್ಲಾಸ್ಟಿಕ್‌ ಅಡ್ಡಿಯಾಗುತ್ತಿದ್ದು ಅಂತರ್ಜಲದ ಮಟ್ಟ ಕುಸಿಯುತ್ತಿದೆ. ಸಮುದ್ರ ಸೇರುವ ಪ್ಲಾಸ್ಟಿಕ್ ತ್ಯಾಜ್ಯ ಸಮುದ್ರದಲ್ಲಿ ಒಂದು ತ್ಯಾಜ್ಯ ದ್ವೀಪ ಸೃಷ್ಟಿಸುತ್ತಿದೆ. ಇದರಿಂದ ನೀರಿನ ಮಟ್ಟ ಹೆಚ್ಚಾಗಲು ಕಾರಣವಾಗಿದೆ’ ಎಂದು ಹೇಳಿದರು.

ADVERTISEMENT

‘ಮಾರುಕಟ್ಟೆಯಿಂದ ತಂದ ಪ್ಲಾಸ್ಟಿಕ್ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುತ್ತೇವೆ. ನಾವು ಬೀಸಾಡುವ ತ್ಯಾಜ್ಯ ಭೂಮಿಯಲ್ಲಿ ಕರಗದೇ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದರಿಂದ ಮನುಷ್ಯರ ಸೇರಿ ಪರಿಸರ, ಪ್ರಾಣಿ, ಪಕ್ಷಿಗಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಪ್ರಾಣಿಗಳ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಮಾರುಕಟ್ಟೆಗಳಿಗೆ ಹೋಗುವಾಗ ಮನೆಯಿಂದ ಬಟ್ಟೆ ಅಥವಾ ಸೆಣಬಿನ ಕೈಚೀಲ ತೆಗೆದುಕೊಂಡು ಹೋಗಬೇಕು. ಪರಿಸರವನ್ನು ನಾವು ಸಂರಕ್ಷಣೆ ಮಾಡಿದರೆ ಮಾತ್ರ ನಮ್ಮನ್ನು ಪರಿಸರ ಸಂರಕ್ಷಣೆ ಮಾಡುತ್ತದೆ’ ಎಂದು ಹೇಳಿದರು.

ಸಹಾಯಕ ಪರಿಸರ ಅಧಿಕಾರಿ ಮೀನಾಕ್ಷಿ, ಉಪ ಪರಿಸರ ಅಧಿಕಾರಿ ಹೇಮಲತಾ, ಶಿಕ್ಷಕರಾದ ಶಿವರುದ್ರಸ್ವಾಮಿ, ಮಧು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.