ADVERTISEMENT

ಪ್ರವಾಸಿಗರಿಗೆ ತಟ್ಟದ ಶುಲ್ಕ ಏರಿಕೆ ಬಿಸಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2011, 8:20 IST
Last Updated 4 ಫೆಬ್ರುವರಿ 2011, 8:20 IST

ಶ್ರೀರಂಗಪಟ್ಟಣ: ತಾಲ್ಲೂಕಿನ ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮದ ಪ್ರವೇಶ ಶುಲ್ಕ ಫೆ.1ರಿಂದ ದುಪ್ಪಟ್ಟಾಗಿದ್ದರೂ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಮೇಲೆ ಅಷ್ಟಾಗಿ ಪರಿಣಾಮ ಬೀರಿಲ್ಲ.

  ಭಾರತೀಯರಿಗೆ ರೂ.25 ಇದ್ದ ಪ್ರವೇಶ ಶುಲ್ಕ ರೂ.50ಕ್ಕೆ ಏರಿಕೆಯಾಗಿದ್ದರೆ, ದೋಣಿ ವಿಹಾರ ಶುಲ್ಕ ಕೂಡ ರೂ.25ರಿಂದ ರೂ.50ಕ್ಕೆ ಹೆಚ್ಚಿಸಲಾಗಿದೆ. ವಿದೇಶಿಯರಿಗೆ ನಿಗದಿಯಾಗಿದ್ದ ಪ್ರವೇಶ ಶುಲ್ಕ ರೂ.75ರಿಂದ ರೂ.300ಕ್ಕೆ ಹಾಗೂ ದೋಣಿ ವಿಹಾರ ಶುಲ್ಕ ರೂ.100ರಿಂದ ರೂ.300ಕ್ಕೆ ಹೆಚ್ಚಿಸಲಾಗಿದೆ. ವಿಶೇಷ ದೋಣಿ ವಿಹಾರ ನಡೆಸುವ ಭಾರತೀಯರು ಈಗ ರೂ.1000 ಹಾಗೂ ವಿದೇಶಿಯರು ರೂ.2000 ಹಣ ಪಾವತಿಸಬೇಕಾಗಿದೆ.

ಪ್ರವೇಶ ಶುಲ್ಕ ಹಾಗೂ ದೋಣಿ ವಿಹಾರ ಶುಲ್ಕವನ್ನು ಅರಣ್ಯ ಇಲಾಖೆ ಎರಡರಷ್ಟು ಹೆಚ್ಚಿಸಿರುವುದು ಕಹಿ ಎನಿಸಿದರೂ ಪಕ್ಷಿಪ್ರಿಯರು ಇಲ್ಲಿಗೆ ಮಾಮೂಲಿನಂತೆ ಬರುತ್ತಿದ್ದಾರೆ. ಫೆ.1ರಂದು ಎರಡು ಹಾಗೂ ಫೆ.3ರಂದು ಒಂದು ಪ್ರವಾಸಿಗರ ಕಾರು ವಾಪಸ್ ಹೋಗಿದೆ. ಅದನ್ನು ಹೊರತುಪಡಿಸಿದರೆ ಪಕ್ಷಿ ಪ್ರಿಯರು ಆಸಕ್ತಿಯಿಂದ ಪಕ್ಷಿ ವೀಕ್ಷಣೆಗೆ ಬರುತ್ತಿದ್ದಾರೆ ಎಂದು ಪಕ್ಷಿಧಾಮ ಫಾರೆಸ್ಟರ್ ಆನಂದ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

 ಫೆ.1ರಂದು 670 ಭಾರತೀಯರು ಹಾಗೂ 19 ಮಂದಿ ವಿದೇಶಿಯರು ಭೇಟಿ ನೀಡಿದ್ದಾರೆ. ಫೆ.2ರಂದು 385 ಭಾರತೀಯರು ಹಾಗೂ 37 ವಿದೇಶಿ ಪ್ರವಾಸಿಗರು ಪಕ್ಷಿ ವೀಕ್ಷಿಸಿದ್ದಾರೆ. ಎರಡು ದಿನದಲ್ಲಿ ಒಟ್ಟು ರೂ.93,950 ಆದಾಯ ಬಂದಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.