ADVERTISEMENT

ಬರ: ಕುಡಿಯುವ ನೀರಿಗೂ ತತ್ವಾರ

ಪ್ರಜಾವಾಣಿ ವಿಶೇಷ
Published 20 ಏಪ್ರಿಲ್ 2012, 7:35 IST
Last Updated 20 ಏಪ್ರಿಲ್ 2012, 7:35 IST

ಮಳವಳ್ಳಿ: ಬರ ಪರಿಸ್ಥಿತಿಯ ತೀವ್ರತೆ ಮಳವಳ್ಳಿಯಲ್ಲಿಯೂ ಹೆಚ್ಚಿದ್ದು, ತಾಲ್ಲೂಕಿನ ಹಲವು ಕೆರೆಗಳಲ್ಲಿ ನೀರು ಬರಿದಾಗಿದ್ದು, ಜನ ಜಾನುವಾರಗಳಿಗೆ ಕುಡಿಯುವ ನೀರಿಗೆ ಪರದಾಡುವಂತಾಗಿದೆ.

ತಾಲ್ಲೂಕಿನ ಕಿರುಗಾವಲು ಹೋಬಳಿ ಮಿಕ್ಕೆರೆ ಗ್ರಾಮದ ಸುಮಾರು 80 ಎಕರೆ ವಿಸ್ತೀರ್ಣದ ಕೆರೆಯಲ್ಲಿ ಒಂದು ತೊಟ್ಟು ನೀರಿಲ್ಲ.  ಕೃಷ್ಣರಾಜಸಾಗರದಿಂದ ಕಾಲುವೆ ಮೂಲಕ ಬರುವ ನೀರು ಮೊದಲು ತುಂಬುವುದೇ ಮಿಕ್ಕೆರೆ ಗ್ರಾಮದ ಕೆರೆ. ಆದರೆ ಪ್ರಸ್ತುತ ಈ ಕೆರೆಯೆ ನೀರಿಲ್ಲದೆ ನೆಲ ಬಿರುಕುಬಿಟ್ಟಿದೆ.

ಇದರ ಪರಿಣಾಮ ಜಾನುವಾರುಗಳಿಗೆ ತೊಂದರೆಯಾಗಿದೆ. ಸದ್ಯ, ಜಾನುವಾರುಗಳಿಗೆ ನೀರು ಒದಗಿಸಲು ಅಲ್ಲಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಿಸಲಾಗಿದೆ. ಕೆರೆಯಲ್ಲಿ ನೀರಿಲ್ಲದ ಕಾರಣ ಅದನ್ನು ನಂಬಿದ್ದ ರೈತರಿಗೂ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ. ಅಲ್ಲದೆ ಅಂತರ್ಜಲ ಸಹ ಕುಸಿದಿದೆ.

ತಾಲ್ಲೂಕಿನ ಬಿ.ಜಿ.ಪುರ ಹೋಬಳಿಯ ಬಹುತೇಕ ಕೆರೆ, ಪಟ್ಟಣದ ಸಮೀಪವಿರುವ ಮಾರೇಹಳ್ಳಿ ಕೆರೆ, ಹಾಡ್ಲಿ, ಅಗಸನಪುರ ಕೆರೆಯಲ್ಲಿ ನೀರಿಲ್ಲ. ಬೆಳಕವಾಡಿ ಕೆರೆಯಲ್ಲಿ ನೀರಿಗಿಂತಲೂ ಗಿಡಗಂಟೆ, ಹೂಳು ತುಂಬಿಹೋಗಿವೆ.

ಕಳೆದ ವರ್ಷ ಹಲವು ಕೆರೆಗಳ ಹೂಳುತೆಗೆಸಿ ನೀರನ್ನು ಹೆಚ್ಚು ಸಂಗ್ರಹಿಸುವ ಉದ್ದೇಶ ಹೊಂದಲಾಗಿತ್ತು. ಆದರೆ ಕೃಷ್ಣರಾಜಸಾಗರದಲ್ಲೂ ನೀರಿನ ಪ್ರಮಾಣವು ಕಡಿಮೆಯಾಗಿದ್ದು ಮಳೆಯೂ ಬಾರದೆ ಬರದ ಛಾಯೆ ಎದ್ದು ಕಾಣುತ್ತಿದೆ.

ಕುಡಿಯುವ ನೀರಿನ ಸಮಸ್ಯೆ:  ತಾಲ್ಲೂಕಿನ ಲಿಂಗಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡ್ಡರದೊಡ್ಡಿ, ಬಸವನಪುರ, ಬಸವನಬೆಟ್ಟ, ಬ್ಯಾಡರಹಳ್ಳಿ ವ್ಯಾಪ್ತಿ ಬಿ.ಜಿ.ಪುರ ಹೋಬಳಿ ಚೊಟ್ಟನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಕೆಂಚನದೊಡ್ಡಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಚ್.ಓಂಕಾರಪ್ಪ ಅವರನ್ನು ಸಂಪರ್ಕಿಸಿದಾಗ, ಕುಡಿಯುವ ನೀರು ಸಮಸ್ಯೆ ಇರುವ ವಡ್ಡರದೊಡ್ಡಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಉಳಿದೆಡೆ, ಬೋರ್‌ವೆಲ್ ಮೂಲಕ ಪಡೆಯಲು ಹೆಚ್ಚಿನ ಆಳ ಕೊರೆಸಬೇಕಾಗಿದೆ.

ಅಂತರ್ಜಲ ಕುಸಿತದಿಂದ ನೀರು ಸಹ ಕಡಿಮೆಯಾಗುತ್ತಿದೆ. ಆದರೆ ಯಾವುದೇ ಭಾಗದಲ್ಲೂ ಕುಡಿಯುವ ನೀರಿನ ಸಮಸ್ಯೆ ಇದ್ದರೆ ಕೂಡಲೇ ದೂ. 244000 ಸಂಪರ್ಕಿಸಲು ಕೋರಿ, ನೀರಿನ ಪೂರೈಕೆಗೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.