ಕೃಷ್ಣರಾಜಪೇಟೆ: ತಾಲ್ಲೂಕಿನ ಗಡಿಗ್ರಾಮ ವಸಂತಪುರ ಸಮೀಪದ ಕೃಷ್ಣಯ್ಯನ ಕೊಳದ ತಿರುವಿನಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಮತ್ತು ಆಟೊರಿಕ್ಷಾ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ.
ಮೇಲುಕೋಟೆಯಿಂದ ಕೃಷ್ಣರಾಜಪೇಟೆ ಪಟ್ಟಣದೆಡೆಗೆ ಬರುತ್ತಿದ್ದ ಸಾರಿಗೆ ಸಂಸ್ಥೆ ಬಸ್ಸು, ಮೇಲುಕೋಟೆ ಕಡೆಗೆ ಹೊರಟಿದ್ದ ಆಟೋರಿಕ್ಷಾಗೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದಾಗ ಈ ಅವಘಡ ಸಂಭವಿಸಿದೆ. ಬಸ್ ವೇಗವಾಗಿ ಬಂದು ಅಪ್ಪಳಿಸಿದ ರಭಸಕ್ಕೆ ಆಟೊರಿಕ್ಷಾ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಅಪಘಾತದಲ್ಲಿ ಆಟೊದಲ್ಲಿದ್ದ ತಾಲ್ಲೂಕಿನ ಮೈಲನಹಳ್ಳಿ ಗ್ರಾಮದ ಕೌಶಲ್ಯ (31) ಮತ್ತು ಪ್ರಜ್ವಲ್ (13) ಎಂಬ ಇಬ್ಬರು ಮೃತಪಟ್ಟಿದ್ದು, ಈ ಇಬ್ಬರು ಸಮೀಪದ ಬಂಧುಗಳಾಗಿದ್ದಾರೆ.
ಇವರಲ್ಲದೆ ಆಟೊದಲ್ಲಿದ್ದ ಶಿವಣ್ಣಗೌಡ, ಸುಮಾ, ಚಿರಂತ್ ಎಂಬ ಮೂವರಿಗೆ ತೀವ್ರ ಗಾಯಗಳಾಗಿದ್ದು, ಎಲ್ಲರನ್ನೂ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಟ್ಟಣ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಮೊಕದ್ದಮೆ ದಾಖಲಾಗಿದೆ.
ಅಪಘಾತಗಳ ಪುನರಾವರ್ತನೆ
ಅಪಘಾತ ನಡೆದ ಸ್ಥಳ ಅಪಾಯಕಾರಿ ತಿರುವಿನಿಂದ ಕೂಡಿದ್ದು, ಮೇಲುಕೋಟೆ ಕಡೆಯಿಂದ ರಸ್ತೆ ಇಳಿಜಾರಾಗಿದೆ. ಆ ಕಡೆಯಿಂದ ಬರುವ ವಾಹನಗಳು ವೇಗವಾಗಿ ಬರುವುದರ ಜೊತೆಗೆ, ಚಾಲಕ ತೀವ್ರ ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು. ರಸ್ತೆ ಇಕ್ಕೆಲಗಳಲ್ಲೂ ದಟ್ಟವಾದ ಪೊದೆಗಳು ಬೆಳೆದಿರುವುದು ಸಹ ಎದುರಿನಿಂದ ಬರುವ ವಾಹನಗಳ ಸೂಚನೆ ಸಿಗದಿರಲು ಕಾರಣವಾಗಿದೆ.
ಈ ಹಿಂದೆಯೂ ಇದೇ ಸ್ಥಳದಲ್ಲಿ ಮದುವೆಯ ದಿಬ್ಬಣವೊಂದು ಪ್ರಯಾಣಿಸುತ್ತಿದ್ದ ವಾಹನ ಅಪಘಾತವಾಗಿ, ಸಾಕಷ್ಟು ಸಾವು ನೋವುಗಳು ಸಂಭವಿಸಿತ್ತು.
ಸಾರ್ವಜನಿಕರ ಆಕ್ರೋಶ
ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಜನರು ಧಾವಿಸಿ ಬಂದು, ಆಕ್ರೋಶ ವ್ಯಕ್ತಪಡಿಸಿದರು. ಬಸ್ ಚಾಲಕನ ಅಜಾಗರೂಕತೆಯೇ ಅವಘಢಕ್ಕೆ ಕಾರಣವಾಗಿದ್ದು, ಸಾರಿಗೆ ಸಂಸ್ಥೆಯ ಉನ್ನತಾಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಆಗ್ರಹಿಸಿದರು. ಇದರಿಂದಾಗಿ ಘಟನಾ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಕುಮಾರ್ ಉದ್ರಿಕ್ತ ಜನರನ್ನು ಸಮಾಧಾನಪಡಿಸಿ ಶವಗಳನ್ನು ಸ್ಥಳದಿಂದ ತೆರವು ಮಾಡಿಸಿದರು.
ಮುಗಿಲುಮುಟ್ಟಿದ ಆಕ್ರಂದನ
ಅವಘಡದಲ್ಲಿ ಮೃತಪಟ್ಟ ಕೌಶಲ್ಯ ಮತ್ತು ಅವರ ನಾದಿನಿಯ ಮಗ ಪ್ರಜ್ವಲ್, ಇಬ್ಬರೂ ಒಂದೇ ಮನೆಯವರು, ಒಂದೇ ಕುಟುಂಬದವರು. ಮೇಲುಕೋಟೆಯ ಸಮೀಪದ ಉಳಿಗೆರೆಗೆ ಬಂಧುಗಳ ಗೃಹಪ್ರವೇಶಕ್ಕೆ ಆಟೊದಲ್ಲಿ ಹೋಗುತ್ತಿದ್ದರು. ಹತ್ತಕ್ಕೂ ಹೆಚ್ಚು ಜನರಿದ್ದ ಆಟೊ ಮಾರ್ಗ ಮಧ್ಯದಲ್ಲಿ ಅಪಘಾತಕ್ಕೀಡಾಗಿ ಇಬ್ಬರು ಸಾವನ್ನಪ್ಪಿದ್ದ ವಿಷಯ ಮೃತರ ಬಂಧುಗಳಿಗೆ ಬರ ಸಿಡಿಲೆರಗಿದಂತಾಗಿತ್ತು.
ಸುತ್ತಲಿನ ಹಳ್ಳಿಗಳಿಂದ ತಂಡೋಪತಂಡವಾಗಿ ಓಡೋಡಿ ಬರುತ್ತಿದ್ದ ಜನರು ಎರಡೂ ಅಮೂಲ್ಯ ಜೀವಗಳನ್ನು ಬಲಿ ತೆಗೆದುಕೊಂಡ ಜವರಾಯನಿಗೆ ಹಿಡಿಶಾಪ ಹಾಕುತ್ತಿದ್ದುದು, ಆಕ್ರಂದನ ಮಾಡುತ್ತಿದ್ದುದು ಎಂತಹ ಕಲ್ಲೆದೆಯೂ ಕರಗುವಂತಿತ್ತು.
ಗಣ್ಯರ ಭೇಟಿ: ಕೃಷ್ಣರಾಜಪೇಟೆ ಶಾಸಕ ಕೆ.ಬಿ.ಚಂದ್ರಶೇಖರ್, ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು, ಮನ್‌ಮುಲ್ ಅಧ್ಯಕ್ಷ ಎಂ.ಬಿ.ಹರೀಶ್, ಮುಖಂಡರಾದ ಕೆ.ಬಿ.ಮಹೇಶ್, ಕೆ.ಸಿ.ರೇವಣ್ಣ ಸೇರಿದಂತೆ ವಿವಿಧ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದರು. ಸಾರಿಗೆ ಸಂಸ್ಥೆಯ ಉನ್ನತಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮೃತರ ಕುಟುಂಬಗಳಿಗೆ ಮತ್ತು ಗಾಯಾಳುಗಳ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವಂತೆ ಆದೇಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.