ADVERTISEMENT

ಬಿಡುಗಡೆಯಾಗದ ಪರಿಹಾರ: ತಪ್ಪದ ಅಲೆದಾಟ

ಬಸವರಾಜ ಹವಾಲ್ದಾರ
Published 10 ಡಿಸೆಂಬರ್ 2013, 6:47 IST
Last Updated 10 ಡಿಸೆಂಬರ್ 2013, 6:47 IST

ಮಂಡ್ಯ: ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಕಾಲುಬಾಯಿ ಜ್ವರದಿಂದ ಮೃತಪಟ್ಟ ಜಾನುವಾರುಗಳ ಪಟ್ಟಿ ಸಿದ್ಧವಾಗಿದೆ. ₨ 3 ಕೋಟಿಗೂ ಹೆಚ್ಚು ಪರಿಹಾರ ನೀಡಬೇಕಿದ್ದು, ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ. ಪರಿಣಾಮ ಪರಿಹಾರಕ್ಕಾಗಿ ರೈತರು ಅಲೆದಾಡುವಂತಾಗಿದೆ.
ಜಿಲ್ಲೆಯ ಮಳವಳ್ಳಿ ಹಾಗೂ ಶ್ರೀರಂಗಪಟ್ಟಣದ ತಾಲ್ಲೂಕುಗಳ ಮಹಜರು ಪಟ್ಟಿ ಇನ್ನೂ ಅಂತಿಮಗೊಂಡಿಲ್ಲ. 

ಮದ್ದೂರಿನ ಪಟ್ಟಿ ಅಂತಿಮಗೊಂಡಿದೆಯಾದರೂ, ಮೃತಪಟ್ಟ ಜಾನುವಾರುಗಳ ಸಂಖ್ಯೆ ಹೆಚ್ಚಿರುವುದರಿಂದ ಬಿಲ್ಲು ಸಲ್ಲಿಕೆಯಾಗಿಲ್ಲ. ಉಳಿದಂತೆ ಜಿಲ್ಲೆಯ ಮಂಡ್ಯ, ನಾಗಮಂಗಲ, ಕೆ.ಆರ್‌. ಪೇಟೆ ಹಾಗೂ ಪಾಂಡವಪುರ ತಾಲ್ಲೂಕುಗಳ ಮಹಜರು ಪಟ್ಟಿ ಅಂತಿಮಗೊಂಡಿದೆ.
ಹಾಲನ್ನು ಕರೆಯುತ್ತಿದ್ದ ಜಾನುವಾರುಗಳು ಸತ್ತು ಎರಡು ತಿಂಗಳಾಗಿದೆ. ರೈತನ ಕುಟುಂಬದ ಆದಾಯಕ್ಕೆ ಹೊಡೆತ ಬಿದ್ದಿದೆ. ಹಸುವಿಗೆ ₨ 25 ಸಾವಿರ, ಎಮ್ಮೆ, ಎತ್ತಿಗೆ ₨ 20 ಸಾವಿರ  ಹಾಗೂ ಕರುವಿಗೆ ₨ 10 ಸಾವಿರ ಎಂದು ಪರಿಹಾರ ಘೋಷಣೆಯಾಗಿದೆ. ಆದರೆ, ಕೈಗೆ ಸಿಕ್ಕಿಲ್ಲ.

ಜಿಲ್ಲೆಯಲ್ಲಿ ಒಟ್ಟು 3,650 ಜಾನುವಾರುಗಳಿಗೆ ಕಾಲುಬಾಯಿ ಜ್ವರ ಬಂದಿತ್ತು. ಅದರಲ್ಲಿ ಇಲ್ಲಿಯವರೆಗೆ 2,654 ಜಾನುವಾರುಗಳು ಸಾವನ್ನಪ್ಪಿವೆ. ಮದ್ದೂರು ತಾಲ್ಲೂಕಿನಲ್ಲಿ ಹೆಚ್ಚು, ಅಂದರೆ 1,302, ಮಂಡ್ಯ ತಾಲ್ಲೂಕಿನಲ್ಲಿ 570, ಪಾಂಡವಪುರ ತಾಲ್ಲೂಕಿನಲ್ಲಿ 366, ಕೆ.ಆರ್‌್್. ಪೇಟೆ ತಾಲ್ಲೂಕಿನಲ್ಲಿ 144, ನಾಗಮಂಗಲ ತಾಲ್ಲೂಕಿನಲ್ಲಿ 112, ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ 89 ಹಾಗೂ ಮಳವಳ್ಳಿ ತಾಲ್ಲೂಕಿನಲ್ಲಿ 71 ಜಾನುವಾರುಗಳು ಮೃತಪಟ್ಟಿವೆ ಎನ್ನುತ್ತಾರೆ ಪಶುಸಂಗೋಪನೆ ಇಲಾಖೆಯ ಉಪ ನಿರ್ದೇಶಕ                          ಪಿ.ಎಂ. ಪ್ರಸಾದ್‌ಮೂರ್ತಿ. 

ಜಾನುವಾರುಗಳ ಸಾವಿನ ಸಂಖ್ಯೆ ರಾಜ್ಯದಲ್ಲಿಯೇ ಅತಿ ಹೆಚ್ಚು ಎನ್ನುವುದು ಗಮನಾರ್ಹ. ಶ್ರೀರಂಗಪಟ್ಟಣ ಹಾಗೂ ಮಳವಳ್ಳಿ ತಾಲ್ಲೂಕಿನ ಸಂಪೂರ್ಣ ಮಹಜರ್‌ ವರದಿ ಇನ್ನೂ ಬಂದಿಲ್ಲ. ನ. 5ಕ್ಕೆ ವರದಿ ಸಲ್ಲಿಸಲು ಸೂಚಿಸಲಾಗಿತ್ತು. ದಿನಾಂಕ ವಿಸ್ತರಣೆಯಾಗುತ್ತಿವೆಯೇ ಹೊರತು ವರದಿ ಜಿಲ್ಲಾಮಟ್ಟದ ಅಧಿಕಾರಿಗಳ ಕೈಸೇರಿಲ್ಲ.

ಶ್ರೀರಂಗಪಟ್ಟಣ ತಾಲ್ಲೂಕಿಗೆ ₨ 14,35,500 ಪರಿಹಾರವನ್ನು ರೈತರಿಗೆ ವಿತರಿಸಲಾಗಿದೆ. ಉಳಿದಂತೆ ಮಂಡ್ಯ ತಾಲ್ಲೂಕಿಗೆ ₨ 75.73 ಲಕ್ಷ,  ಪಾಂಡವಪುರಕ್ಕೆ ₨ 59.06 ಲಕ್ಷ, ನಾಗಮಂಗಲಕ್ಕೆ ₨ 24,13 ಲಕ್ಷ, ಕೆ.ಆರ್‌್. ಪೇಟೆಗೆ ₨ 20.28 ಲಕ್ಷ, ಮಳವಳ್ಳಿಗೆ ₨ 10.94 ಲಕ್ಷ ಹಾಗೂ ಮದ್ದೂರು ತಾಲ್ಲೂಕಿಗೆ ₨ 1 ಕೋಟಿ  ಹೆಚ್ಚು ಹಣವನ್ನು ಪರಿಹಾರ ರೂಪದಲ್ಲಿ ಪಾವತಿಸಬೇಕಿದೆ.

ಮರಣೋತ್ತರ ಪರೀಕ್ಷೆಯಲ್ಲಿಯೇ ಜಿಲ್ಲೆಯಲ್ಲಿ 657 ಜಾನುವಾರುಗಳು ಮೃತಪಟ್ಟಿರುವುದು ದೃಢಪಟ್ಟಿತ್ತು. ಕೆಲವು ಜಾನಾವರುಗಳನ್ನು ಪರೀಕ್ಷೆಗೆ ಒಳಪಡಿಸದೆಯೇ ಹೂಳಲಾಗಿತ್ತು. ಅವುಗಳ ಮಹಜರುಗಾಗಿ ಗ್ರಾಮ ಹಾಗೂ ತಾಲ್ಲೂಕುಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗಿತ್ತು. ಮಹಜರ್‌ನಲ್ಲಿ 1,997 ಮೃತಪಟ್ಟಿರುವುದು ದೃಢಪಟ್ಟಿದೆ. ಇನ್ನೂ ಎರಡು ತಾಲ್ಲೂಕುಗಳ ಪಟ್ಟಿ ಬಂದರೆ, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ.

ಮಂಡ್ಯ ಜಿಲ್ಲಾ ಹಾಲು ಸಹಕಾರ ಒಕ್ಕೂಟವು ಪ್ರತಿ ಜಾನುವಾರಿಗೆ 10 ಸಾವಿರ ರೂಪಾಯಿಯಂತೆ ಪರಿಹಾರ ನೀಡುವುದಾಗಿ ಘೋಷಣೆ ಮಾಡಿತ್ತು. ಪರಿಹಾರದ ಹಣಕ್ಕಾಗಿ ರೈತರಿಂದ ಅರ್ಜಿಯನ್ನೂ ಆಹ್ವಾನಿಸಲಾಗಿತ್ತು. ಒಕ್ಕೂಟದ್ದೂ ಸೇರಿಸಿ ಸರ್ಕಾರ ನೀಡಿ ಪರಿಹಾರ ಘೋಷಣೆ ಮಾಡಿದ ಮೇಲೆ ರಾಜ್ಯ ಸರ್ಕಾರಕ್ಕೆ ‘ಮನ್‌ಮುಲ್‌್’ ವತಿಯಿಂದ 50 ಲಕ್ಷ ರೂಪಾಯಿ ಚೆಕ್‌್ ನೀಡಲಾಗಿದೆ ಎನ್ನುತ್ತಾರೆ ಅಧ್ಯಕ್ಷ ಎಂ.ಬಿ. ಹರೀಶ್‌.

ಹಣ ನೀಡಿದರೆ, ಬೇರೆ ಕಾರಣಕ್ಕೆ ಖರ್ಚಾಗಬಹುದು. ಆದ್ದರಿಂದ ಹಸುಗಳನ್ನೇ ನೀಡಿದರೆ ಒಳ್ಳೆಯದು ಎಂದು ಸರ್ಕಾರಕ್ಕೆ ತಿಳಿಸಿದ್ದೇವೆ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT