ADVERTISEMENT

ಮಕ್ಕಳ ಹಕ್ಕು ರಕ್ಷಣೆಗೆ ಆದ್ಯತೆ: ಕೃಪಾ

ಬಾಲ್ಯವಿವಾಹ ತಡೆಯಲು ಗ್ರಾಮಲೆಕ್ಕಿಗ, ಶಾಲಾ ಮುಖ್ಯಶಿಕ್ಷಕರಿಗೆ ಅಧಿಕಾರ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2018, 8:58 IST
Last Updated 14 ಮಾರ್ಚ್ 2018, 8:58 IST
ಕೃಪಾ ಅಮರ್‌ ಆಳ್ವ
ಕೃಪಾ ಅಮರ್‌ ಆಳ್ವ   

ಮಂಡ್ಯ: ‘ಇಡೀ ದೇಶದಲ್ಲಿ ಮೊದಲ ಬಾರಿಗೆ ನಮ್ಮ ರಾಜ್ಯದ ಬಾಲ ನ್ಯಾಯ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು ಮಕ್ಕಳ ಹಕ್ಕುಗಳ ರಕ್ಷಣೆಗೆ ಆದ್ಯತೆ ನೀಡಲಾಗಿದೆ’ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಕೃಪಾ ಅಮರ್‌ ಆಳ್ವ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ನಡೆದ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಬಾಲ ನ್ಯಾಯ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಪೋಕ್ಸೊ (ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ) ಮಕ್ಕಳ ಹಕ್ಕುಗಳ ರಕ್ಷಣೆ, ದೌರ್ಜನ್ಯ ತಡೆಗಾಗಿ ಜಾರಿಗೊಳಿಸಲಾಗಿದೆ. ಈ ಕಾನೂನುಗಳ ಅನುಷ್ಠಾನಕ್ಕಾಗಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹಲವು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ರಕ್ಷಣ ಸಮಿತಿಗಳನ್ನು ರಚನೆ ಮಾಡಲಾಗಿದ್ದು ಹಕ್ಕುಗಳ ರಕ್ಷಣೆಗೆ ಪ್ರಾಶಸ್ತ್ಯ ನೀಡಲಾಗಿದೆ. ಸರ್ಕಾರಿ ಇಲಾಖೆಗಳು ಮಾತ್ರವಲ್ಲದೇ ಪ್ರತಿಯೊಬ್ಬ ಪ್ರಜೆಯೂ ಮಕ್ಕಳ ಹಕ್ಕುಗಳ ರಕ್ಷಣೆ ಮಾಡುವುದನ್ನು ಕರ್ತವ್ಯ ಎಂದು ಭಾವಿಸಬೇಕು’ ಎಂದು ಹೇಳಿದರು.

ADVERTISEMENT

‘ಕಾನೂನಿನ ಅಸ್ತ್ರದ ಬಳಕೆಯಿಂದ ಮಕ್ಕಳನ್ನು ರಕ್ಷಣೆ ಮಾಡಬಹುದು. ಮಕ್ಕಳ ಮೇಲೆ ಶೋಷಣೆ ಕಂಡು ಬಂದರೆ ಅದನ್ನು ತಡೆಯಲು ಸಮೀಪದ ಪೊಲೀಸ್‌ ಠಾಣೆಗೆ, ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತರಬೇಕು. ಬಾಲ್ಯ ವಿವಾಹ ತಡೆಯುವುದು ಎಲ್ಲರ ಜವಾಬ್ದಾರಿಯಾಗಿದೆ. ಗ್ರಾಮ ಲೆಕ್ಕಿಗನಿಂದ ಶಾಲಾ ಮುಖ್ಯಶಿಕ್ಷಕರವರೆಗೂ ಬಾಲ್ಯ ವಿವಾಹ ತಡೆಯುವ ಅಧಿಕಾರ ಇದೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ವಿಶೇಷ ಪೊಲೀಸ್‌ ಘಟಕ ತೆರೆಯಲಾಗಿದ್ದು ಮಕ್ಕಳ ಮೇಲಿನ ದೌರ್ಜನ್ಯದ ವಿರುದ್ಧ ದೂರು ಸಲ್ಲಿಸಬಹುದಾಗಿದೆ’ ಎಂದು ಹೇಳಿದರು.

‘ಬಾಲ್ಯ ವಿವಾಹ ತಡೆಯಲು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಅಷ್ಟಾದರೂ ಬಾಲ್ಯ ವಿವಾಹ ನಡೆದರೆ ಅಂತಹ ವಿವಾಹಗಳಿಗೆ ಕಾನೂನಿನ ಮಾನ್ಯತೆ ಇರುವುದಿಲ್ಲ. ಆ ವಿವಾಹವನ್ನು ರದ್ದು ಮಾಡಲಾಗುವುದು. ಹೀಗಾಗಿ ಬಾಲ್ಯ ವಿವಾಹ ನಡೆಯದಂತೆ ಎಚ್ಚರಿಕೆ ವಹಿಸಬೇಕು. ದೇವಾಲಯ, ಸಾಮೂಹಿಕ ವಿವಾಹ ಮತ್ತಿತರ ಕಡೆ ಬಾಲ್ಯ ವಿವಾಹ ನಡೆಯುತ್ತಿರುವುದು ಕಂಡು ಬಂದರೆ ತಕ್ಷಣ ದೂರು ನೀಡಬೇಕು’ ಎಂದು ಹೇಳಿದರು.

ವಕೀಲ, ಪೋಪಲ್ಸ್‌ ಲೀಗಲ್‌ ಫೋರಂ ನಿರ್ದೇಶಕ ಪಿ.ಬಾಬುರಾಜು ಮಾತನಾಡಿ ‘ಪ್ರತಿ ಮಗು ಮನೆಯಿಂದ ಶಾಲೆಯವರೆಗೆ ಸುರಕ್ಷಿತವಾಗಿ ತಲುಪಲು ವಿವಿಧ ಸೌಲಭ್ಯ ನೀಡಬೇಕು. ಶಾಲೆಗೆ ತೆರಳುವಾಗ ಮಗು ಯಾವುದೇ ಸಮಸ್ಯೆ ಎದುರಿಸದರೆ ಅದು ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಅದಕ್ಕಾಗಿ ಸರ್ಕಾರ ಮಕ್ಕಳಿಗೆ ಸಕಲ ಸೌಕರ್ಯ ಒದಗಿಸಬೇಕು. ಮಗುವಿನ ಹಕ್ಕನ್ನು ಕಾಪಾಡುವ ಜವಾಬ್ದಾರಿ ಇಡೀ ಸಮಾಜದ ಮೇಲಿದೆ. ಅಪೌಷ್ಟಿಕಾಂಶ, ಸೌಲಭ್ಯಗಳ ಕೊರತೆ ಸೇರಿ ಇನ್ನಿತರ ತೊಂದರೆಗಳಿಂದ ಮಕ್ಕಳ ಹಕ್ಕು ಉಲ್ಲಂಘನೆಯಾಗುತ್ತವೆ’ ಎಂದರು.

‘ಯಾವುದೇ ಮಗುವಿನ ಶೋಷಣೆ, ದೌರ್ಜನ್ಯಗಳು ನಡೆದಾಗ ಅದು ಗೊತ್ತಿದ್ದರೂ ಗೊತ್ತಿಲ್ಲದಂತೆ ಇರುವುದು ಕೂಡ ಅಪರಾಧವಾಗಿದೆ. ದೌರ್ಜನ್ಯ ಕಂಡ ಕೂಡಲೇ ಸಂಬಂಧಿಸಿದ ಇಲಾಖೆಗಳಿಗೆ ದೂರು ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ. ಸಮಾಜ ಮಕ್ಕಳನ್ನು ಘನತೆಯಿಂದ ನಡೆಸಿಕೊಳ್ಳಬೇಕು. ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾದಾಗ ಸಂತ್ರಸ್ತೆಯ ಗುರುತನ್ನು ರಹಸ್ಯವಾಗಿ ಇಡಬೇಕು. ವೈದ್ಯಕೀಯ ಪರೀಕ್ಷೆ ಹೆಸರಿನಲ್ಲಿ ವೈದ್ಯರು, ಪೊಲೀಸರು ಮಗುವಿಗೆ ಘನತೆಗೆ ಧಕ್ಕೆ ತರುವಂತಿಲ್ಲ. ಮಕ್ಕಳನ್ನು ಪೊಲೀಸ್‌ ಠಾಣೆಯಲ್ಲಿ ಹಲ್ಲೆ ಮಾಡುವಂತಿಲ್ಲ’ ಎಂದು ಹೇಳಿದರು.

ಸಂವಾದದಲ್ಲಿ ಆಯೋಗದ ಸದಸ್ಯ ಚಂದ್ರಶೇಖರ್‌ ಅಲ್ಲಿಪುರ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಅಶ್ವಥ್‌ ನಾರಾಯಣ್‌, ಸದಸ್ಯ ಎಂ.ಕೆ.ಮಹೇಶ್‌, ಬಾಲ ನ್ಯಾಯ ಮಂಡಳಿ ಸದಸ್ಯ ತಿರುಮಲಾಪುರ ಗೋಪಾಲ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಡಾ.ಎಸ್‌.ದಿವಾಕರ್‌, ಸೋಮಶೇಖರ್‌ ಕೆರೆಗೋಡು, ಮತ್ತೀಕೆರೆ ಜಯರಾಮ್‌, ಕೆ.ಸಿ.ಮಂಜುನಾಥ್‌ ಹಾಜರಿದ್ದರು.

ತಂದೆಗೆ ಸಹಾಯ ಮಾಡುವ ಮಕ್ಕಳು ಬಾಲ ಕಾರ್ಮಿಕರಲ್ಲ
‘ಬಾಲ ಕಾರ್ಮಿಕ ನಿಷೇಧ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು ತಂದೆಯ ಕೆಲಸಗಳಲ್ಲಿ ಸಹಾಯ ಮಾಡುವ ಮಕ್ಕಳನ್ನು ಬಾಲ ಕಾರ್ಮಿಕರು ಎಂದು ಪರಿಗಣಿಸಲು ಸಾಧ್ಯವಿಲ್ಲ. ಆದರೆ ಕಡ್ಡಾಯವಾಗಿ ಮಕ್ಕಳು ಶಾಲೆಗೆ ಹೋಗಬೇಕು. ಶಾಲೆಗೆ ಹೋಗುತ್ತಾ ತಂದೆ ಅಂಗಡಿ, ವರ್ಕ್‌ಶಾಪ್‌, ಹೋಟೆಲ್‌ ಇನ್ನಿತರ ವ್ಯವಹಾರದಲ್ಲಿ ಸಹಾಯ ಮಾಡಿದರೆ ಅಂತಹ ಮಕ್ಕಳು ಕಾರ್ಮಿಕರಾಗುವುದಿಲ್ಲ’ ಎಂದು ಕೃಪಾ ಆಳ್ವ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.