ADVERTISEMENT

ಮಿಶ್ರಕೃಷಿಯಲ್ಲಿ ನೆಮ್ಮದಿ ಬದುಕು ಕಂಡ ನೇಗಿಲಯೋಗಿ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2017, 3:38 IST
Last Updated 19 ನವೆಂಬರ್ 2017, 3:38 IST
ಕೆರಗೋಡು ಸಮೀಪದ ಮಾರಗೌಡನಹಳ್ಳಿ ಗ್ರಾಮದ ರೈತ ಶಿವಣ್ಣಗೌಡ ತಮ್ಮ ಗದ್ದೆಯಲ್ಲಿ ಬೆಳೆದ ನವಣೆ ಬೆಳೆ ಪ್ರದರ್ಶಿಸುತ್ತಿರುವುದು
ಕೆರಗೋಡು ಸಮೀಪದ ಮಾರಗೌಡನಹಳ್ಳಿ ಗ್ರಾಮದ ರೈತ ಶಿವಣ್ಣಗೌಡ ತಮ್ಮ ಗದ್ದೆಯಲ್ಲಿ ಬೆಳೆದ ನವಣೆ ಬೆಳೆ ಪ್ರದರ್ಶಿಸುತ್ತಿರುವುದು   

ಕೆರಗೋಡು: ಸಮೀಪದ ಮಾರಗೌಡನಹಳ್ಳಿಯ ಪ್ರಗತಿಪರ ಕೃಷಿಕ ಶಿವಣ್ಣಗೌಡ ಅವರ ಶ್ರಮದ ಪ್ರತಿಫಲವಾಗಿ ಭೂಮಿ ಹಸಿರಿನಿಂದ ಕಂಗೊಳಿಸುತ್ತಿದೆ. ಸಾವಯವ ಗೊಬ್ಬರ , ನೀರಿನ ಮಿತ ಬಳಕೆ ಮೂಲಕ ಆರೋಗ್ಯಕರ ಕೃಷಿ ಮಾಡುತ್ತಿರುವ ಅವರು ತೆಂಗು, ಸಪೋಟ, ಮಾವು, ಹಲಸು, ದಾಳಿಂಬೆ, ನಿಂಬೆ, ಕಿತ್ತಳೆ, ಅಂಜೂರ, ದ್ರಾಕ್ಷಿ ಗಿಡ ಬೆಳೆದಿದ್ದಾರೆ.

ತೆಂಗಿನ ತೋಟದಲ್ಲಿ 1000 ರೆಡ್‌ಲೇಡಿ ತಳಿಯ ಪಪ್ಪಾಯವನ್ನು ಅಂತರಬೆಳೆಯಾಗಿ ಬೆಳೆಇದ್ದಾರೆ. ಜೊತೆಗೆ ಚೆಂಡು ಹೂ, ಸಿರಿಧಾನ್ಯಗಳಾದ ನವಣೆ, ಊರ್ಲು, ಸಾಮೆ ಬೆಳೆದಿದ್ದಾರೆ. ಇದೀಗ ಕೊಯ್ಲಿಗೆ ಬಂದಿದೆ. ಪಪ್ಪಾಯದಿಂದ ಸುಮಾರು ₹ 5 ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದಾರೆ. ಚೆಂಡು ಹೂವಿನಿಂದ ₹ 36,000 ಆದಾಯ ಈಗಾಗಲೇ ಬಂದಿದೆ. ಜತೆಗೆ ಟೊಮೊಟೊ, ನೆಲಗಡಲೆ, ಮೆಣಸಿನಕಾಯಿ, ಮನೆಬಳಕೆಗೆ ತರಕಾರಿ, ಈರುಳ್ಳಿ ಬೆಳೆದು ಬಳಸುತ್ತಾರೆ.

ಇವುಗಳ ಮಧ್ಯೆ ಜೇನುಪೆಟ್ಟಿಗೆ ಇಟ್ಟು ಸಾಕುತ್ತಿದ್ದಾರೆ. ಹೂವಿನ ಮಕರಂದ ಹೀರಲು ಬರುವ ಜೇನು ಹುಳುಗಳು ತರಕಾರಿ ಸೇರಿ ಇನ್ನಿತರ ಬೆಳೆಯ ಹೂಗಳನ್ನು ಕಾಡುವ ಕೀಟಗಳನ್ನು ಶಮನ ಮಾಡುತ್ತಿವೆ. ಈ ಮೂಲಕ ಫಲಭರಿತ ಕೃಷಿ ಕಾಣಲು ಸಹಾಯಕವಾಗಿದೆ. ಜತೆಗೆ ಕೃಷಿಹೊಂಡ ನಿರ್ಮಿಸಿದ್ದಾರೆ. ಇಲ್ಲಿಯೂ ಮೀನು ಮರಿಗಳನ್ನು ಬಿಟ್ಟು ಸಾಕಾಣಿಕೆ ಮಾಡುತ್ತಿದ್ದಾರೆ.

ADVERTISEMENT

ಎರೆಹುಳು ಘಟಕ: ತೋಟದ ಮನೆಯ ಜಮೀನಿನಲ್ಲಿ ಬಾಳೆ ಎಲೆ, ಆಲದಮರ ಮುಂತಾದ ಮರ ಬೆಳೆಸಿದ್ದಾರೆ. ಮರಗಳ ಎಲೆ ಸಂಗ್ರಹಿಸಿ ಎರೆಹುಳು ಗೊಬ್ಬರ ತಯಾರು ಮಾಡಿ, ಬೆಳೆಗಳಿಗೆ ಬಳಸುತ್ತಾರೆ. ತಮ್ಮ ತೋಟದಲ್ಲಿ ಒಂದೆಲಗ, ದೊಡ್ಡಪತ್ರೆ, ಬೇವು, ಲಕ್ಕಿ ಗಿಡ, ತುಳಸಿ ಮುಂತಾದ ಔಷಧೀಯ ಸಸ್ಯ ಬೆಳೆದಿದ್ದಾರೆ. ಕೃಷಿ ಇಲಾಖೆ ಇವರಿಗೆ ಬೇಸಾಯದ ಮನೆಗಾಗಿ ಸಹಾಯಧನ ನೀಡಿದೆ. ಅವರು 2011ರಲ್ಲಿ ಚೀನಾಕ್ಕೆ ಹೋಗಿ ಬಂದಿದ್ದಾರೆ.

‘ಚೀನಾ ಸರ್ಕಾರ ರೈತರಿಗೆ ನಿಗದಿ ಮಾಡಿದ ಬೆಳೆ ಬೆಳೆಯಲು ಸೂಚಿಸಿ, ಬಳಿಕ ಸರ್ಕಾರವೇ ಖರೀದಿ ಮಾಡಿ ರೈತರ ಬೆನ್ನಿಗಿದೆ. ಬೆಳೆ ನೀತಿ ಚೀನಾದಲ್ಲಿ ಇದೆ. ನನ್ನ ಕೃಷಿ ಅಭಿವೃದ್ಧಿಗೆ ಕೃಷಿ ವಿಜ್ಞಾನ ಕೇಂದ್ರದ ಸನತ್‌ಕುಮಾರ್, ರಂಗನಾಥ್ ಮತ್ತು ವಿ.ಸಿ. ಫಾರ್ಮ್‌ನ ಕೃಷಿ ತರಬೇತಿ ಸಂಸ್ಥೆ ಕಾರಣ’ ಎಂದು ಶಿವಣ್ಣಗೌಡ ತಿಳಿಸಿದರು. ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ, ಮೈಸೂರು ಆಕಾಶವಾಣಿ, ಆರ್ಗ್ಯಾನಿಕ್, ಸರ್ಕಾರಿ ನೌಕರರ ಸಂಘ ಸೇರಿದಂತೆ ಇನ್ನಿತರ ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.