ADVERTISEMENT

ಮೈಷುಗರ್‌ ಕಾರ್ಖಾನೆ ಆಸ್ಪತ್ರೆ ಕಟ್ಟಡ ಅನಾಥ

ಕಾಯಕಲ್ಪಕ್ಕೆ ಕಾಯುತ್ತಿದೆ ಸ್ವಾತಂತ್ರ್ಯಪೂರ್ವದಿಂದಲೂ ಸೇವೆ ನೀಡುತ್ತಿದ್ದ ಆರೋಗ್ಯ ಕೇಂದ್ರ

ಎಂ.ಎನ್.ಯೋಗೇಶ್‌
Published 18 ಜೂನ್ 2018, 7:26 IST
Last Updated 18 ಜೂನ್ 2018, 7:26 IST
ಮೈಷುಗರ್‌ ಕಾರ್ಖಾನೆ ಆವರಣದಲ್ಲಿರುವ ಆಸ್ಪತ್ರೆ ಕಟ್ಟಡ
ಮೈಷುಗರ್‌ ಕಾರ್ಖಾನೆ ಆವರಣದಲ್ಲಿರುವ ಆಸ್ಪತ್ರೆ ಕಟ್ಟಡ   

ಮಂಡ್ಯ: ಸ್ವಾತಂತ್ರ್ಯ ಪೂರ್ವದಿಂದಲೂ ನಗರ ಹಾಗೂ ಸುತ್ತಮುತ್ತಲಿನ ರೋಗಿಗಳಿಗೆ ಆರೋಗ್ಯ ಸೇವೆ ನೀಡುತ್ತಿದ್ದ ‘ಮೈಷುಗರ್‌ ಕಾರ್ಖಾನೆ ಆಸ್ಪತ್ರೆ’ ಕಟ್ಟಡ ಈಗ ಅನಾಥವಾಗಿದೆ. ಸೂಕ್ತ ನಿರ್ವಹಣೆ ಕೊರತೆಯಿಂದಾಗಿ ಕಟ್ಟಡ ಕುಸಿದು ಬೀಳುವ ಹಂತಕ್ಕೆ ಬಂದಿದೆ.

ಮೈಷುಗರ್‌ ಕಾರ್ಖಾನೆ ಆವರಣದಲ್ಲಿ 2.5 ಎಕರೆ ಜಾಗದಲ್ಲಿ 1947 ಜೂನ್‌ 22ರಂದು ಕಾರ್ಯಾರಂಭ ಮಾಡಿದ್ದ ಈ ಆಸ್ಪತ್ರೆ ಜಿಲ್ಲೆಯ ಏಕೈಕ ದೊಡ್ಡಾಸ್ಪತ್ರೆ ಎಂದು ಪ್ರಸಿದ್ಧಿ ಪಡೆದಿತ್ತು. ಜಿಲ್ಲಾಸ್ಪತ್ರೆ ಆರಂಭಕ್ಕೂ ಮೊದಲು, ನಗರದಲ್ಲಿ ಯಾವುದೇ ನರ್ಸಿಂಗ್‌ ಹೋಂ ಇಲ್ಲದ ಕಾಲದಲ್ಲಿ ಈ ಆಸ್ಪತ್ರೆ ಸ್ಥಾಪನೆಗೊಂಡಿತ್ತು. ಮೈಷುಗರ್‌ ಕಾರ್ಖಾನೆ ರೋಗಿಗಳು ಮಾತ್ರವಲ್ಲದೆ ಹೊರಗಿನಿಂದ ಬರುವ ಜನರಿಗೂ ಆರೋಗ್ಯ ಸೇವೆ ನೀಡುತ್ತಿತ್ತು. ಆದರೆ ಐದಾರು ವರ್ಷಗಳಿಂದ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆಯಿಂದ ಕಟ್ಟಡ ಅನಾಥವಾಗಿದೆ.

ಮೈಷುಗರ್‌ ಕಾರ್ಖಾನೆಯ ಕಾರ್ಮಿಕರಿಗೆ ಚಿಕಿತ್ಸೆ ನೀಡುವ ದೃಷ್ಟಿಯಿಂದ ಗುತ್ತಿಗೆ ಆಧಾರದ ಮೇಲೆ ಒಬ್ಬ ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಅವರು ಆಸ್ಪತ್ರೆ ಕಟ್ಟಡದಲ್ಲಿ ಚಿಕಿತ್ಸೆ ನೀಡದೆ ಕಾರ್ಖಾನೆಯ ಕೇಂದ್ರ ಕಟ್ಟಡದಲ್ಲಿ ಕಾರ್ಮಿಕರಿಗೆ ದಿನಕ್ಕೊಂದು ಗಂಟೆ ಬಂದು ಚಿಕಿತ್ಸೆ ನೀಡುತ್ತಿದ್ದರು. ಆದರೆ, ವೈದ್ಯರ ನೇಮಕಾತಿ ಅವಧಿ ಜನವರಿಯಲ್ಲೇ ಮುಗಿದಿದ್ದು ಆರು ತಿಂಗಳಿಂದ ಕಾರ್ಮಿಕರಿಗೆ ಯಾವುದೇ ರೀತಿ ಚಿಕಿತ್ಸೆ ದೊರೆಯುತ್ತಿಲ್ಲ. 25 ಹಾಸಿಗೆಗಳ ಆಸ್ಪತ್ರೆಯಲ್ಲಿ ಎಕ್ಸ್‌ರೇ ಕೊಠಡಿ, ಔಷಧಾಲಯ, ಪೀಠೋಪಕರಣ ಸೇರಿ ವೈದ್ಯಕೀಯ ಉಪಕರಣಗಳೂ ಚೆನ್ನಾಗಿದ್ದರೂ ಆಸ್ಪತ್ರೆ ಕಾರ್ಯನಿರ್ವಹಣೆ ಮಾಡುತ್ತಿಲ್ಲ.

ADVERTISEMENT

ಸುತ್ತಮುತ್ತಲ ಹಳ್ಳಿಗಳಿಗೆ ಇದು ಪ್ರಸಿದ್ಧ ಹೆರಿಗೆ ಆಸ್ಪತ್ರೆಯಾಗಿತ್ತು. ಯಾವ ಖಾಸಗಿ ಆಸ್ಪತ್ರೆಯಲ್ಲೂ ಸಿಗದ ಸೌಲಭ್ಯ ಇಲ್ಲಿ ಉಚಿತವಾಗಿ ಸಿಗುತ್ತಿತ್ತು. ಆದರೆ ಕಾರ್ಖಾನೆ ರೋಗಗ್ರಸ್ತಗೊಂಡ ನಂತರ ಆಸ್ಪತ್ರೆಗೆ ಸಿಬ್ಬಂದಿ ಕೊರತೆ ಎದುರಾಯಿತು. ಈಗ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು ನಾವು ಬಿ.ಪಿ ಪರೀಕ್ಷೆಗೂ ಖಾಸಗಿ ಆಸ್ಪತ್ರೆಗಳಿಗೆ ಹೋಗಬೇಕಾದ ಪರಿಸ್ಥಿತಿ ಬಂದಿದೆ ಎಂದು ಕಾರ್ಮಿಕರು ತಿಳಿಸಿದರು.

ಎಚ್‌.ಡಿ.ದೇವೇಗೌಡರಿಗೆ ಮನವಿ:

ಮೈಷುಗರ್‌ ಆಸ್ಪತ್ರೆ ಕಟ್ಟಡಕ್ಕೆ ಮರುಜೀವ ನೀಡಲು ಕಾರ್ಮಿಕರ ಸಮನ್ವಯ ಸಮಿತಿ ಸದಸ್ಯರು 2015 ಎಚ್‌.ಡಿ.ದೇವೇಗೌಡ ಅವರಿಗೆ ಮನವಿ ಸಲ್ಲಿಸಿದ್ದರು. ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರಿಗೆ ಈ ಕುರಿತು ಪತ್ರ ಬರೆದಿದ್ದರು. ಆಸ್ಪತ್ರೆಗೆ ಮರುಜೀವನ ನೀಡುವಂತೆ ಮುಖ್ಯಮಂತ್ರಿಗಳು ಆರೋಗ್ಯ ಇಲಾಖೆಗೆ ಸೂಚಿಸಿದ್ದರು. ಆದರೆ ಈ ನಡುವೆ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್‌) ಮೈಷುಗರ್‌ ಆಸ್ಪತ್ರೆಗೆ ವೈದ್ಯರನ್ನು ನಿಯೋಜನೆ ಮಾಡುವುದಾಗಿ ಭರವಸೆ ನೀಡಿತ್ತು. ಅದರಂತೆ ವೈದ್ಯರನ್ನೂ ನಿಯೋಜಿಸಲಾಗಿತ್ತು. ಆದರೆ ನಗರದ ಕ್ಯಾತುಂಗೆರೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಯಾದ ನಂತರ ಮಿಮ್ಸ್‌, ಇಲ್ಲಿಯ ವೈದ್ಯರನ್ನು ಕ್ಯಾತುಂಗೆರೆ ಕೇಂದ್ರಕ್ಕೆ ವರ್ಗಾಯಿಸಿತು. ಅಲ್ಲಿಂದ ಮೈಷುಗರ್‌ ಆಸ್ಪತ್ರೆ ಸ್ಥಗಿತಗೊಂಡಿತು.

‘ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ಹಾಗೂ ಔಷಧಿ ವಿತರಿಸುವುದಾಗಿ ಭರವಸೆ ನೀಡಿದ ಕಾರಣ ಬಾಡಿಗೆ ರಹಿತವಾಗಿ ಕಟ್ಟಡವನ್ನು ಮಿಮ್ಸ್‌ಗೆ ನೀಡಲಾಗಿತ್ತು. ಆದರೆ ಮಿಮ್ಸ್‌ನವರು ಕರಾರು ಮೀರಿ ಆಸ್ಪತ್ರೆ ತ್ಯಜಿಸಿದರು. ಆಸ್ಪತ್ರೆ ಮುಚ್ಚಿ ಹೋಗಲೂ ಇದೂ ಒಂದು ಪ್ರಮುಖ ಕಾರಣವಾಯಿತು’ ಎಂದು ಮೈಷುಗರ್‌ ಕಾರ್ಮಿಕರ ಸಮನ್ವಯ ಸಮಿತಿ ಉಪಾಧ್ಯಕ್ಷ ಡಿ.ಸಿ.ಯದುನಾಥ್‌ ಹೇಳಿದರು.

‘ಜಯದೇವ ಆಸ್ಪತ್ರೆ ಶಾಖೆ ಆರಂಭಿಸಿ’

‘ಮಂಡ್ಯದಲ್ಲಿ ಇಂದಿಗೂ ಹೃದಯ ರೋಗಕ್ಕೆ ತುರ್ತು ಚಿಕಿತ್ಸೆ ದೊರೆಯುತ್ತಿಲ್ಲ. ಖಾಸಗಿ ಆಸ್ಪತ್ರೆಗಳಲ್ಲೂ ಆಧುನಿಕ ಚಿಕಿತ್ಸಾ ಸೌಲಭ್ಯಗಳಿಲ್ಲ. ಸ್ಥಗಿತಗೊಂಡಿರುವ ಮೈಷುಗರ್‌ ಕಾರ್ಖಾನೆ ಆಸ್ಪತ್ರೆ ಕಟ್ಟಡದಲ್ಲಿ ಜಯದೇವ ಆಸ್ಪತ್ರೆಯ ಶಾಖೆ ಆರಂಭಿಸಬೇಕು. ಇದರಿಂದ ಐತಿಹಾಸಿಕ ಆಸ್ಪತ್ರೆಯೂ ಉಳಿಯುತ್ತದೆ. ಜೊತೆಗೆ ಕಾರ್ಮಿಕರು ಹಾಗೂ ಸುತ್ತಮುತ್ತಲ ಹಳ್ಳಿಯ ಜನರಿಗೆ ಗುಣಮಟ್ಟದ ಚಿಕಿತ್ಸೆಯೂ ದೊರೆಯುತ್ತದೆ. ಈ ಕುರಿತು ಶೀಘ್ರ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಗುವುದು’ ಎಂದು ಡಿ.ಸಿ.ಯದುನಾಥ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.