ADVERTISEMENT

ಮೊಳಕೆ ಬಾರದ ಬತ್ತದ ಬೀಜ: ಆತಂಕ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2012, 5:10 IST
Last Updated 2 ಆಗಸ್ಟ್ 2012, 5:10 IST
ಮೊಳಕೆ ಬಾರದ ಬತ್ತದ ಬೀಜ: ಆತಂಕ
ಮೊಳಕೆ ಬಾರದ ಬತ್ತದ ಬೀಜ: ಆತಂಕ   

ಶ್ರೀರಂಗಪಟ್ಟಣ: ತಾಲ್ಲೂಕಿನ ಮುಂಡುಗದೊರೆ, ಚಿಕ್ಕಪಾಳ್ಯ ಹಾಗೂ ದೊಡ್ಡಪಾಳ್ಯ ಗ್ರಾಮಗಳಲ್ಲಿ ಬಿತ್ತನೆ ಮಾಡಿರುವ ಬತ್ತದ ಬೀಜ 8 ದಿನ ಕಳೆದರೂ ಮೊಳಕೆ ಬಾರದ ಕಾರಣ ರೈತರಲ್ಲಿ ಆತಂಕ ಉಂಟಾಗಿದೆ.

  ದೊಡ್ಡಪಾಳ್ಯದ ವ್ಯವಸಾಯ ಸೇವಾ ಸಹಕಾರ ಸಂಘದಿಂದ ಖರೀದಿಸಿ ತಂದು ಬಿತ್ತನೆ ಮಾಡಿರುವ ಬತ್ತದ ಬೀಜ ಮೊಳಕೆ ಒಡೆದಿಲ್ಲ. ಚಿಕ್ಕಪಾಳ್ಯದ ಅನುಶೇಖರ, ನಂಜೇಗೌಡ, ಮುಂಡುಗದೊರೆ ಗ್ರಾಮದ ನಾಗರಾಜು, ದೊಡ್ಡಪಾಳ್ಯದ ಡಿ.ಎಂ.ರವಿ, ಡಿ.ಬಿ.ನಾರಾಯಣ, ಶಿವನಂಜೇಗೌಡ ಇತರ ರೈತರು ಮಡಿ ಪಾತಿಯಲ್ಲಿ ಹಾಕಿರುವ ಬತ್ತದ ಬೀಜ ಮೊಳಕೆ ಬಂದಿಲ್ಲ. 5 ದಿನಕ್ಕೆ ಮೊಳಕೆ ಬರಬೇಕಾದ ಬತ್ತದ ಬೀಜ 8 ದಿನ ಕಳೆದರೂ ಮೊಳಕೆ ಬಾರದೇ ಇರುವುದರಿಂದ ರೈತರು ಮತ್ತೆ ಬಿತ್ತನೆ ಬೀಜ ಖರೀದಿಸಿ ಬಿತ್ತನೆ ಮಾಡಬೇಕಾದ ಪರಿಸ್ಥಿತಿ ಬಂದಿದೆ.

  `ದೊಡ್ಡಪಾಳ್ಯ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ 25 ಕೆ.ಜಿ ತೂಕದ ಎಂಟಿಯು-1001 ತಳಿಯ ಬತ್ತದ ಬೀಜಕ್ಕೆ ರೂ.312 ಕೊಟ್ಟು ತಂದು ಬಿತ್ತನೆ ಮಾಡಿದ್ದೇವೆ. ಅದಕ್ಕಾಗಿ ನೂರಾರು ರೂಪಾಯಿ ಖರ್ಚು ಮಾಡಿದ್ದೇವೆ.

ಆದರೆ ಒಂದು ಕಾಳು ಕೂಡ ಮೊಳಕೆ ಬಂದಿಲ್ಲ. ಕೃಷಿ ಇಲಾಖೆ ಉತ್ತಮ ಎಂದು ಹೇಳಿರುವ ಬಿತ್ತನೆ ಬೀಜವನ್ನು ನಂಬಿ ಮೋಸ ಹೋಗಿದ್ದೇವೆ. ನಮಗೆ ಬದಲಿ ಬಿತ್ತನೆ ಬೀಜ ಕೊಡಬೇಕು~ ಎಂದು ಸ್ಥಳಕ್ಕೆ ಆಗಮಿಸಿದ್ದ ಅರಕೆರೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಕೆ.ಯು.ವೆಂಕಟರಾಜು ಅವರನ್ನು ರೈತರು ಒತ್ತಾಯಿಸಿದರು. `ಬಿತ್ತನೆ ಬೀಜ ಕಳಪೆಯಿಂದ ಕೂಡಿರುವುದರಿಂದ ಮೊಳಕೆ ಬಂದಿಲ್ಲ.

ಈ ಕುರಿತು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುತ್ತೇನೆ~ ಎಂದು ವೆಂಕಟರಾಜು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.