ADVERTISEMENT

ರೂ 16 ಕೋಟಿ ವೆಚ್ಚದಲ್ಲಿ ಪಟ್ಟಣದ ಅಭಿವೃದ್ಧಿ: ಶಾಸಕ

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 10:25 IST
Last Updated 2 ಜನವರಿ 2012, 10:25 IST

ಶ್ರೀರಂಗಪಟ್ಟಣ: ಗಂಜಾಂ ಸೇರಿದಂತೆ ಪಟ್ಟಣವನ್ನು ರೂ.16.3 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.

  ಟೌನ್ ವ್ಯಾಪ್ತಿಯ ಗಂಜಾಂನಲ್ಲಿ ಈಚೆಗೆ ರೂ.75.75 ಲಕ್ಷ ವೆಚ್ಚದ ರಸ್ತೆ ಮತ್ತು ಸಿಸಿ ಚರಂಡಿಗಳ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ರೂ.10.70 ಕೋಟಿ ವೆಚ್ಚದಲ್ಲಿ ಒಳ ಚರಂಡಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ವಿಶೇಷ ಘಟಕ ಯೋಜನೆಯಡಿ 54 ಮನೆಗಳಿಗೆ ರೂ.3.75 ಲಕ್ಷ ವೆಚ್ಚದ ನೀರು ಮತ್ತು ಯುಜಿಡಿ ಸಂಪರ್ಕ ಕಾಮಗಾರಿ ನಡೆಯುತ್ತಿದೆ. ಕುಡಿಯುವ ನೀರು ಮೋಟಾರ್ ಅಳವಡಿಕೆಗೆ ರೂ. 70 ಲಕ್ಷ, ಫಿಲ್ಟರ್ ಮೀಡಿಯಾ ದುರಸ್ತಿಗೆ ರೂ.8 ಲಕ್ಷ, ನಿರಂತರ ವಿದ್ಯುತ್ ಕಾಮಗಾರಿಗೆ ರೂ.28 ಲಕ್ಷ, ರಾಂಪಾಲ್ ರಸ್ತೆಯಲ್ಲಿ ಎಲ್‌ಇಡಿ  ವಿದ್ಯುತ್ ದೀಪ ಅಳವಡಿಕೆಗೆ ರೂ. 25 ಲಕ್ಷ ವ್ಯಯಿಸಲಾಗುತ್ತಿದೆ ಎಂದು ವಿವರಿಸಿದರು.

  ಎರೆಹುಳು ಘಟಕ ಸ್ಥಾಪನೆ, ಕೊಳಚೆ ನೀರು ಘಟಕಕ್ಕೆ ಕಾಂಪೌಂಡ್ ಮತ್ತು ರಸ್ತೆ ಹಾಗೂ ನೆಲ ಭರ್ತಿ ಸೇರಿ ಒಟ್ಟು ರೂ.65.75 ಲಕ್ಷ ಹಣವನ್ನು ವಿನಿಯೋಗಿಸಲಾಗುತ್ತಿದೆ. ಗಂಜಾಂ ಲಿಂಕ್ ರಸ್ತೆ ಅಭಿವೃದ್ಧಿಗೆ ರೂ.12 ಲಕ್ಷ, ಮಳೆನೀರು ಚರಂಡಿ ಕಾಮಗಾರಿಗೆ ರೂ.14.24 ಲಕ್ಷ, ಆಟೋ ಟಿಪ್ಪರ್ ಮತ್ತು ಕಂಟೇನರ್ ಖರೀದಿಗೆ ರೂ.11 ಲಕ್ಷ ಖರ್ಚು ಮಾಡಲಾಗುತ್ತಿದೆ. ಕಿರುನೀರು ಸರಬರಾಜು ಘಟಕ ಸ್ಥಾಪಿಸಲು ರೂ.9.60 ಲಕ್ಷ, ಪುರಸಭೆ ಕಚೇರಿ ನವೀಕರಣಕ್ಕೆ ರೂ.9.6 ಲಕ್ಷ ಖರ್ಚು ಮಾಡಲಾಗುತ್ತಿದೆ.
 
ವಾಜಪೇಯಿ ವಸತಿ ಯೋಜನೆಯಡಿ 62 ಮಂದಿ ಫಲಾನುಭವಿಗಳಿಗೆ ತಲಾ 70 ಸಾವಿರದಂತೆ ಒಟ್ಟು 44.10 ಲಕ್ಷ ನೀಡಲಾಗುತ್ತಿದೆ. ರೂ.52 ಲಕ್ಷ ವೆಚ್ಚದಲ್ಲಿ ಕೊಳಚೆ ನೀರು ಸಂಗ್ರಹ ಘಟಕವನ್ನು 1.39 ಎಂಎಲ್‌ಡಿಯಿಂದ 3.20 ಎಂಎಲ್‌ಡಿಗೆ ವಿಸ್ತರಿಸಲಾಗುತ್ತಿದೆ.   ಪಟ್ಟಣದ ಅಭಿವೃದ್ಧಿಗಾಗಿ 2011ನೇ ವರ್ಷದಲ್ಲಿ ಒಟ್ಟು16.03 ಕೋಟಿ ಹಣ ಖರ್ಚು ಮಾಡಲಾಗುತ್ತಿದೆ ಎಂದು ಹೇಳಿದರು. ಪುರಸಭೆ ಅಧ್ಯಕ್ಷ ಶಿವಾಜಿರಾವ್, ತಹಶೀಲ್ದಾರ್ ಅರುಳ್‌ಕುಮಾರ್, ಮುಖ್ಯಾಧಿಕಾರಿ ರಾಜಣ್ಣ, ಉಪಾಧ್ಯಕ್ಷೆ ಗಾಯತ್ರಿ, ಸದಸ್ಯರಾದ ಎಂ.ಎಲ್.ದಿನೇಶ್, ಕಮಲಮ್ಮ, ರಾಮೇಗೌಡ, ಜಯರಾಂ, ಪದ್ಮಮ್ಮ, ಅಣ್ಣಾಸ್ವಾಮಿ, ನಿಂಗಮ್ಮ, ಎಂಜಿನಿ ಯರ್ ರೂಪಾ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.