ADVERTISEMENT

ವಿಜೃಂಭಣೆಯ ವೀರಭದ್ರೇಶ್ವರ ಜಾತ್ರೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2013, 4:12 IST
Last Updated 8 ಏಪ್ರಿಲ್ 2013, 4:12 IST

ಕಿಕ್ಕೇರಿ: ಸಮೀಪದ ಗೋವಿಂದನಹಳ್ಳಿಯಲ್ಲಿ ವೀರಭದ್ರೇಶ್ವರ ಸ್ವಾಮಿಯ ಜಾತ್ರೆ ಸಂಭ್ರಮದಿಂದ ಭಕ್ತರ ಜಯ ಉದ್ಘೋಷದೊಂದಿಗೆ ನೆರವೇರಿತು.
ಶುಕ್ರವಾರ ವೀರಭದ್ರೇಶ್ವರ ಸ್ವಾಮಿಯ ಉತ್ಸವ ಮೂರ್ತಿಯ ಮೆರವಣಿಗೆ ಆರಂಭವಾದೊಡನೆ ಭಕ್ತರು ಜೈ ಶಂಕರ, ಜಯ ಜಯ ವೀರಭದ್ರ ಎಂದು ಕೂಗುತ್ತ ಅಡ್ಡೆದೇವರ ಹಿಂದೆ ಸಾಗಿದರು. ಗೋವಿಂದನಹಳ್ಳಿ, ಗೋವಿಂದನಹಳ್ಳಿಕೊಪ್ಪಲು, ಜಯಪುರ ಗ್ರಾಮಗಳಲ್ಲಿ ದೇವರ ಮೆರವಣಿಗೆಯೊಂದಿಗೆ ಹರಕೆ ಹೊತ್ತ ಬಾಯಿ ಬೀಗಧಾರಿಗಳು ನಮಸ್ಕಾರ ಹಾಕುತ್ತ ನಡೆದರು.

ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆದ ಜಾತ್ರೆಯಲ್ಲಿ ಸುತ್ತಮುತ್ತಲ ಗ್ರಾಮವಲ್ಲದೆ ದೂರದ ಊರಿನ ನೆಂಟರಿಷ್ಟರು ಆಗಮಿಸಿ ದೇವರ ದರ್ಶನ ಪಡೆದು ಪಾವನರಾದರು.

ಅರ್ಚಕ ಸಮೂಹದವರು ದೇವರಿಗೆ ವಿವಿಧ ಅಭಿಷೇಕ, ಅರ್ಚನೆ ಮಾಡಿ ಪುಷ್ಪ, ವಸ್ತ್ರಗಳಿಂದ ಅಲಂಕರಿಸಿ ಭಕ್ತರಿಗೆ ದರ್ಶನಕ್ಕೆ ಅನುಕೂಲ ಮಾಡಿಕೊಟ್ಟರು.

ಜಾತ್ರೆಯ ಅಂಗವಾಗಿ ಗ್ರಾಮಸ್ಥರು ರಂಗನ ಕುಣಿತವನ್ನು ಪ್ರದರ್ಶಿಸಿ ಭಕ್ತ ಸಮೂಹವನ್ನು ರಂಜಿಸಿದರು. ಜಾತ್ರೆಯ ಮುನ್ನದಿನವಾದ ಗುರುವಾರ ಶನಿಮಹಾತ್ಮೆ ನಾಟಕ ಏರ್ಪಡಿಸಲಾಗಿತ್ತು.

ಬಿಸಿಲಿನ ಬೇಗೆಯಿಂದ ಬಳಲಿದ ಭಕ್ತರಿಗೆ ಗ್ರಾಮದ ಯುವ ಸಮೂಹ ನೀರು, ಮಜ್ಜಿಗೆ, ಪಾನಕ, ಕೋಸಂಬರಿ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.