ADVERTISEMENT

ವಿವಿಧ ಕಾಮಗಾರಿಗೆ ಶಾಸಕ ಸುರೇಶ್‌ಗೌಡ ಚಾಲನೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 7:15 IST
Last Updated 7 ಫೆಬ್ರುವರಿ 2012, 7:15 IST

ನಾಗಮಂಗಲ: ತಾಲ್ಲೂಕಿನ ವಿವಿಧೆಡೆ ರೂ.50 ಲಕ್ಷಕ್ಕೂ ಅಧಿಕ ವೆಚ್ಚದ ಹಲವು ಕಾಮಗಾರಿಗಳಿಗೆ ಶಾಸಕ ಸುರೇಶ್‌ಗೌಡ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಸೋಮವಾರ ಚಾಲನೆ ನೀಡಿದರು.

13ನೇ ಹಣಕಾಸು ಯೋಜನೆ ಅಡಿಯಲ್ಲಿ ಉಯ್ಯನಹಳ್ಳಿಯ ಅಣೆ ಮತ್ತು ಕೆರೆ ಅಭಿವೃದ್ಧಿ ಕಾರ್ಯಕ್ಕೆ ರೂ.24 ಲಕ್ಷ ವೆಚ್ಚದ ತಡೆಗೋಡೆ ಮತ್ತು ಸೇತುವೆ ನಿರ್ಮಾಣ ಕಾಮಗಾರಿ ಮತ್ತು ಬದ್ರಿಕೊಪ್ಪಲಿನಲ್ಲಿ ರೂ.10 ಲಕ್ಷ ವೆಚ್ಚದ ಕಾಂಕ್ರೀಟ್ ಚರಂಡಿ ಕಾಮಗಾರಿ ಹಾಗು ನಾಗಮಂಗಲ ಪಟ್ಟಣದ ಹಿರಿಕೆರೆ ಏರಿ ಬಳಿ ಎಸ್.ಎಫ್.ಸಿ ಅನುದಾನದಡಿಯಲ್ಲಿ ರೂ.10 ಲಕ್ಷ ವೆಚ್ಚದ ನೂತನ ಉದ್ಯಾನ, ಕಾಂಕ್ರೀಟ್ ರಸ್ತೆ ಮತ್ತು ಕಾಂಪೌಂಡ್ ನಿರ್ಮಾಣದ ಕಾಮಗಾರಿಗಳಿಗೆ ಚಾಲನೆ ನೀಡಿದರು.

ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ತಾಲ್ಲೂಕಿನ ಕೆ.ಮಲ್ಲೇನಹಳ್ಳಿಯಿಂದ ಕೆ.ಆರ್.ಪೇಟೆ ಮಾರ್ಗದ ರಸ್ತೆಯನ್ನು ನಾಗಮಂಗಲದ ಗಡಿ ಭಾಗದವರೆಗೂ ರಾಜ್ಯ ಹೆದ್ದಾರಿಯನ್ನಾಗಿ ಪರಿವರ್ತಿಸಲು ಈಗಾಗಲೇ ಅನುಮೋದನೆ ಪಡೆಯಲಾಗಿದೆ. ಮುಂದಿನ ದಿನಗಳಲ್ಲಿ ರೂ.45 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯ ಪ್ರಾರಂಭ ಮಾಡುವುದಾಗಿ ಅವರು ತಿಳಿಸಿದರು.

ತಾಲ್ಲೂಕಿನ ಅಭಿವೃದ್ಧಿ ಕಾರ್ಯಗಳಿಗೆ ವಿರೋಧಿಗಳು ಕೈ ಜೋಡಿಸುವುದಿಲ್ಲ. ಈಗಲಾದರೂ ಅಡ್ಡಿ ಪಡಿಸದೆ  ಸಹಕರಿಸಲಿ ಎಂದು ಮನವಿ ಮಾಡಿದರು.

ಗುತ್ತಿಗೆದಾರರಾದ ಕಲ್ಲೇನಹಳ್ಳಿ ದಿನೇಶ್, ಗ್ರಾಮ ಪಂಚಾಯಿತಿ ಸದಸ್ಯ ಮಾದೇಗೌಡ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಬಾಬು, ಮಾಜಿ ಅಧ್ಯಕ್ಷ ಮಕ್ಬೂಲ್ ಅಹ್ಮದ್, ಗೋಪಾಲ್, ಗೋಪಾಲಕೃಷ್ಣ,  ತಾಲ್ಲೂಕು ಪಂಚಾಯಿತಿ ಸದಸ್ಯರಾದ ಎನ್.ಬಿ.ಕುಮಾರ್, ಚಿಣ್ಯ ಗ್ರಾಮದ ಮುಖಂಡ ದೇವುಕುಮಾರ್ ಮುಂತಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.