ADVERTISEMENT

ವ್ಯಾಪಾರ ಕೌಶಲ ಮೆರೆದ ವಿದ್ಯಾರ್ಥಿಗಳು!

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2013, 5:40 IST
Last Updated 10 ಏಪ್ರಿಲ್ 2013, 5:40 IST

ಶ್ರೀರಂಗಪಟ್ಟಣ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಯಾರಿಸಿದ್ದ ಚಿಕನ್ ಕಬಾಬ್, ಬಿರಿಯಾನಿ, ವೆಜಿಟಬಲ್ ಮುಂತಾದ ತಿಂಡಿ ತಿನಿಸುಗಳು ನೋಡುಗರ ಬಾಯಲ್ಲಿ ನೀರೂರಿಸಿದವು. ವಿದ್ಯಾರ್ಥಿಗಳು ಬಾಣಸಿಗರಾಗಿ, ವ್ಯಾಪಾರಸ್ಥರಾಗಿ ಪರಿವರ್ತಿತರಾಗಿದ್ದರು.

ಹೌದು, ಕಾಲೇಜಿನಲ್ಲಿ ವ್ಯಾಪಾರ ಕೌಶಲ ವೃದ್ಧಿಸುವ ಕುರಿತು ಮಂಗಳವಾರ ತರಬೇತಿ ಹಮ್ಮಿಕೊಳ್ಳಲಾಗಿತ್ತು. ಈ ತರಬೇತಿಯಲ್ಲಿ ವಿದ್ಯಾರ್ಥಿಗಳು ತಯಾರಿಸಿದ ತಿನಿಸುಗಳನ್ನು ಉಪನ್ಯಾಸಕರು ಖರೀದಿಸಿದರು.

ನ್ಯೂಡಲ್ಸ್, ಫ್ರೈಡ್ ರೈಸ್, ಚಿಕನ್ ಬರ್ಗರ್, ಫೈವ್‌ಸ್ಟಾರ್ ಫಾಲುಡಾ, ಕುಲ್ಮಿ ಚಿಕನ್....ಹೀಗೆ ಬಗೆ ಬಗೆಯ ತಿನಿಸುಗಳನ್ನು ಸಿದ್ಧಪಡಿಸಿದ್ದರು. ಫ್ರೂಟ್ ವೈನ್, ಫ್ರೂಟ್ ಸಲಾಡ್, ಬೂದುಗುಂಬಳ ಜ್ಯೂಸ್, ಪಾನಕ, ಮಜ್ಜಿಗೆ, ಪಾನಿಪೂರಿಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಲಾವಂಚ ಹಾಗೂ ಕೇಸರಿಯಿಂದ ಶುದ್ಧೀಕರಿಸಿದ ನೀರನ್ನೂ ಮಾರಾಟಕ್ಕೆ ಇಟ್ಟಿದ್ದರು.

ಇಲ್ಲಿ ಬನ್ನಿ ತಾಜಾ ಫ್ರೂಟ್ ಜ್ಯೂಸ್, ತಗೊಳ್ಳಿ, ಬಿಸಿಬಿಸಿ ಬಿರ್ಯಾನಿ, ಪಾನಿಪೂರಿ ನಮ್ಮಲ್ಲಿ ಬಲು ಸಸ್ತ...ಹೀಗೆ ಅನುಭವಿ ವ್ಯಾಪಾರಿಗಳಂತೆ ವಿದ್ಯಾರ್ಥಿಗಳು ಗ್ರಾಹಕರನ್ನು ಸೆಳೆಯಲು ನಾಜೂಕಿನ ಮಾತುಗಳನ್ನಾಡುತ್ತಿದ್ದರು. ತಿಂದು ನೋಡಿ, ಆಮೇಲೆ ದುಡ್ಡು ಕೊಡಿ ಎಂಬ ಚಮತ್ಕಾರದ ಮಾತುಗಳೂ ಕೇಳಿ ಬಂದವು. ಬೆಳಿಗ್ಗೆ 10 ಗಂಟೆಗೆ ಆರಂಭವಾದ ಕಾಲೇಜು ಮಾರುಕಟ್ಟೆ ಮಧ್ಯಾಹ್ನ 3 ಗಮಟೆಯವರೆಗೆ ಗಿಜಿಗುಡತ್ತಿತ್ತು. ಕಾಲೇಜಿನ ವಿದ್ಯಾರ್ಥಿಗಳು ಮಾತ್ರವಲ್ಲದೆ ಉಪನ್ಯಾಸಕರು ತಮಗಿಷ್ಟವಾದ ತಿನಿಸುಗಳನ್ನು ಖರೀದಿಸಿ ತಿಂದು, ಬೀಡವನ್ನೂ ಜಗಿದು ತೃಪ್ತಿ ವ್ಯಕ್ತಪಡಿಸಿದರು. ತೃತೀಯ ಬಿ.ಎ ವಿದ್ಯಾರ್ಥಿನಿ ಲಕ್ಷ್ಮಿ ಕಡಲೆಪುರಿ ತಿನ್ನುವ ಸ್ಪರ್ಧೆ ಏರ್ಪಡಿಸಿ ಮನರಂಜನೆ ನೀಡುವ ಜತೆಗೆ ಲಾಭವನ್ನೂ ಮಾಡಿಕೊಂಡರು.

`ಬಿಬಿಎಂ ವಿದ್ಯಾರ್ಥಿಗಳಲ್ಲಿ ವ್ಯಾಪಾರ ಕೌಶಲ ಹೆಚ್ಚಿಸಲು ಕಾಲೇಜಿನಲ್ಲಿ ಈ ಮಾರುಕಟ್ಟೆ ವ್ಯವಸ್ಥೆ ಮಾಡಲಾಗಿದೆ. ಬಿ.ಎ, ಬಿ,ಕಾಂ ವಿದ್ಯಾರ್ಥಿಗಳು ಕೂಡ ಅಂಗಡಿ ಇಟ್ಟು ವ್ಯಾಪಾರ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿಗೆ ವೇದಿಕೆ ಕಲ್ಪಿಸಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ' ಎಂದು ಪ್ರಾಂಶುಪಾಲೆ ಪ್ರೊ.ಬಿ.ಗೌರಮ್ಮ ಹರ್ಷ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.