ADVERTISEMENT

ಶ್ರೀನಿವಾಸ್‌ ಮುಂದಿರುವ ಸವಾಲುಗಳು‌

​ಪ್ರಜಾವಾಣಿ ವಾರ್ತೆ
Published 3 ಜೂನ್ 2018, 11:15 IST
Last Updated 3 ಜೂನ್ 2018, 11:15 IST

ಮಂಡ್ಯ: ಕ್ಷೇತ್ರದಲ್ಲಿರುವ ಸಮಸ್ಯೆಗಳು ಒಂದಲ್ಲ, ಎರಡಲ್ಲ. ಜಿಲ್ಲಾ ಕೇಂದ್ರಸ್ಥಾನವಾಗಿರುವ ನಗರದಲ್ಲಿ ಮೂಲಸೌಲಭ್ಯಗಳು ಮರೀಚಿಕೆಯಾಗಿವೆ. ಹೀಗಿರುವಾಗ ಶಾಸಕ ಎಂ.ಶ್ರೀನಿವಾಸ್‌ ಮುಂದೆ ರಾಶಿ ಸವಾಲುಗಳಿವೆ.

ಜಿಲ್ಲೆಯ ಜೀವನಾಡಿಯಂತಿದ್ದ ಐತಿಹಾಸಿಕ ಕಾರ್ಖಾನೆಯ ಚಕ್ರ ತಿರುಗುತ್ತಿಲ್ಲ. ಸಹವಿದ್ಯುತ್‌ ಘಟಕವೂ ಸ್ತಬ್ಧಗೊಂಡಿದೆ. ಸರ್ಕಾರಗಳು ಬಿಡುಗಡೆ ಮಾಡಿದ ಹಣದಲ್ಲಿ ಹೊಸ ಕಾರ್ಖಾನೆಯೊಂದನ್ನು ಕಟ್ಟಬಹುದಾಗಿತ್ತು. ಬಕಾಸುರನ ಹೊಟ್ಟೆಯಾಗಿರುವ ಕಾರ್ಖಾನೆಯನ್ನು ಸಮಸ್ಯೆಗಳ ಕೂಪದೊಳಗಿಂದ ಪಾರು ಮಾಡಬೇಕಾದ ಅನಿವಾರ್ಯತೆ ಶಾಸಕರ ಮೇಲಿದೆ. ಇದು ಅವರೊಬ್ಬರ ಜವಾಬ್ದಾರಿ ಮಾತ್ರವಲ್ಲ, ಇಡೀ ಜಿಲ್ಲೆಯ ಜನಪ್ರತಿನಿಧಿಗಳ ಹೊಣೆಯೂ ಹೌದು ಎಂಬುದು ಸಾರ್ವಜನಿಕರ ಅಂಬೋಣ.

ದುರ್ಗಂಧಮಯ ಮಾರುಕಟ್ಟೆ : ತರಕಾರಿ ಮಾರುಕಟ್ಟೆ ಗಬ್ಬೆದ್ದು ನಾರುತ್ತಿದೆ. ಚರಂಡಿಯ ಮೇಲೆ ಕುಳಿತು ವ್ಯಾಪಾರಿಗಳು ತರಕಾರಿ ಮಾರಬೇಕಾದ ಸ್ಥಿತಿ ಇದೆ. ಮಳೆ ಬಂದರೆ ಇಡೀ ಮಾರುಕಟ್ಟೆ ಗದ್ದೆಯಂತಾಗುತ್ತದೆ. ಕೊಳಚೆ, ದುರ್ವಾಸನೆಯ ನಡುವೆಯೇ ವ್ಯಾಪಾರಿಗಳು ಮಾರುವ, ಗ್ರಾಹಕರು ಕೊಳ್ಳುವ ಸ್ಥಿತಿ ಇದೆ. ಹೊಸ ಮಾರುಕಟ್ಟೆ ನಿರ್ಮಾಣಕ್ಕೆ ₹ 6.5 ಕೋಟಿಗೆ ಟೆಂಡರ್‌ ನೀಡಲಾಗಿತ್ತು. ಅದು ಕಾರ್ಯಗತಗೊಳ್ಳದೇ ನನೆಗುದಿಗೆ ಬಿದ್ದಿದೆ.

ADVERTISEMENT

ಕೊಳೆಗೇರಿ ನಿವಾಸಿಗಳಿಗಿಲ್ಲ ಮನೆ ಭಾಗ್ಯ : ನಗರದಲ್ಲಿ 20ಕ್ಕೂ ಹೆಚ್ಚು ಘೋಷಿತ ಕೊಳೆಗೇರಿಗಳಿವೆ. ತಮಿಳು ಕಾಲೊನಿಗೆ ಬೆಂಕಿ ಬಿದ್ದು ನಿವಾಸಿಗಳು ಬದುಕು ಕಳೆದುಕೊಂಡು 10 ವರ್ಷ ತುಂಬಿವೆ. ಆದರೆ ಅವರಿಗೆ ಶಾಶ್ವತ ನೆಲೆ ಎನ್ನುವುದು ಮರೀಚಿಕೆಯಾಗಿಯೇ ಉಳಿದಿದೆ.

ಕೀಲಾರ ಗ್ರಾಮದ ತಮಿಳು ಕಾಲೊನಿ ನಿವಾಸಿಗಳ ಗುಡಿಸಲಿಗೆ ಬೆಂಕಿ ಬಿದ್ದು ಆರು ತಿಂಗಳಾಗಿದೆ. ಈಗಲೂ ಅವರು ಪಾಳು ಕಟ್ಟಡದಲ್ಲಿ ಮಲಗಿ ಜೀವನ ಮಾಡುತ್ತಿದ್ದಾರೆ. ಅಂಬರೀಷ್‌ ವಸತಿ ಸಚಿವರಾಗಿ ಕೆಲಸ ಮಾಡಿದರೂ ಮನೆ ಒದಗಿಸಲು ಸಾಧ್ಯವಾಗಲಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಬೈಪಾಸ್‌, ಮೇಲ್ಸೇತುವೆ : ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಹೆಚ್ಚಳ ಸಮಸ್ಯೆಯಿಂದ ಮುಕ್ತಿ ಪಡೆಯಲು ಉಮ್ಮಡಹಳ್ಳಿ ಗ್ರಾಮದಿಂದ ಕೆರೆಯಂಗಳದ ಮೂಲಕ ವಿ.ಸಿ.ಫಾರಂವರೆಗೆ ಬೈಪಾಸ್‌ ನಿರ್ಮಾಣ ಕನಸಾಗಿಯೇ ಉಳಿದಿದೆ. ರೈಲ್ವೆ ಗೇಟ್‌ ಬಳಿ ವಾಹನ ಸವಾರರು ಸಾಲುಗಟ್ಟಿ ನಿಲ್ಲಬೇಕಾದ ಅನಿವಾರ್ಯತೆ ಇದೆ. ಮಹಾವೀರ ವೃತ್ತದಲ್ಲಿ ಮೈಸೂರು– ಬೆಂಗಳೂರು ರಾಷ್ಟ್ರೀಯ ಹೆದ್ದಾರಿವರೆಗೂ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ. ಕಲ್ಲಹಳ್ಳಿ ರೈಲ್ವೆ ಗೇಟ್‌ಬಳಿ ಹಲವು ಅಪಘಾತಗಳು ಸಂಭವಿಸಿವೆ. ಮೇಲ್ಸೇತುವೆ ಕನಸು ನನಸಾಗಿಲ್ಲ.

ಸುವರ್ಣ ಮಹೋತ್ಸವದ ನೆನಪು : ಜಿಲ್ಲೆಯ ಸುವರ್ಣ ಸಂಭ್ರಮದ ನೆನಪಿನ ಭವನ ನನೆಗುದಿಗೆ ಬಿದ್ದಿದೆ. ದಿನೇದಿನೇ ವೆಚ್ಚ ಹೆಚ್ಚುತ್ತಲೇ ಇದೆ. ಮಂಡ್ಯದಲ್ಲಿ ಮಿನಿ ವಿಧಾನಸೌಧವೂ ಇಲ್ಲ. ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಹೊರವಲಯದ ಬಡಾವಣೆಗಳಿಗೆ ಚರಂಡಿ ವ್ಯವಸ್ಥೆ ಇಲ್ಲ. ಇಲ್ಲಗಳ ನಡುವೆ ನೂತನ ಶಾಸಕರಾಗಿ ಆಯ್ಕೆಯಾಗಿರುವ ಎಂ.ಶ್ರೀನಿವಾಸ್‌ ಅವರ ಕಾರ್ಯಚಟುವಟಿಕೆಯತ್ತ ಜನರ ಚಿತ್ತ ಹರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.