ADVERTISEMENT

ಸಂಗೀತ ಲೋಕದ ಭರವಸೆ ಶ್ರೀಕಾಂತ

ಶ್ಯಾಮೇಶ್ ಅತ್ತಿಗುಪ್ಪೆ
Published 12 ಆಗಸ್ಟ್ 2012, 3:50 IST
Last Updated 12 ಆಗಸ್ಟ್ 2012, 3:50 IST

ಕೃಷ್ಣರಾಜಪೇಟೆ: ಉತ್ತಮ ಗಾಯನ ಹಾಗೂ ತಬಲಾ ಪಟುವಾಗಿರುವ ಶ್ರೀಕಾಂತ ಚಿಮಲ ಸಂಗೀತ ಕ್ಷೇತ್ರದಲ್ಲಿ ಭರವಸೆ ಮೂಡಿಸಿರುವ ಯುವ ಪ್ರತಿಭೆಯಾಗಿದ್ದಾರೆ.

ಬಾದಾಮಿ ತಾಲ್ಲೂಕಿನ ಹಂಸನೂರಿನ ಸಂಗೀತವನ್ನೇ    ತಮ್ಮ ಬದುಕಾಗಿಸಿಕೊಂಡ ಕುಟುಂಬದಿಂದ ಬಂದಿರುವ   ಇವರ ತಾಯಿ ಅಂಬವ್ವ ಚಿಮಲ ಹಾರ್ಮೋನಿಯಂ ವಾದಕಿ ಹಾಗೂ ರಂಗಭೂಮಿ ಕಲಾವಿದೆಯಾಗಿದ್ದಾರೆ. ತಂದೆ ಬಸಪ್ಪ ಚಿಮಲ ಕಲೋಪಾಸಕರು, ಅಕ್ಕಂದಿರಾದ ಗೀತಾರಾಣಿ ಚಿಮಲ ಮತ್ತು ಇಂದಿರಾ ಚಿಮಲ ಹೆಸರಾಂತ ಸುಗಮ ಸಂಗೀತ ಕಲಾವಿದರು.

ಗದುಗಿನ ಡಾ.ಪಂಡಿತ್ ಪುಟ್ಟರಾಜ ಗವಾಯಿಗಳ   ಶಿಷ್ಯರಾಗಿ ಹತ್ತನೇ ವಯಸ್ಸಿನ್ಲ್ಲಲೇ ಸಂಗೀತದ ಓಂಕಾರ ಆರಂಭಿಸಿದರು. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಮತ್ತು ತಬಲಾ ವಾದನ ಪರೀಕ್ಷೆಗಳಲ್ಲಿ ರ‌್ಯಾಂಕ್ ಪಡೆದು ತಮ್ಮ ಸಾಮರ್ಥ್ಯ ತೋರಿದ್ದಾರೆ.

1991 ರಿಂದ ದೇಶದುದ್ದಕ್ಕೂ ನೂರಾರು ಕಾರ್ಯಕ್ರಮಗಳನ್ನು ನೀಡಿರುವ ಇವರು ಆಕಾಶವಾಣಿ      ಮತ್ತು ದೂರದರ್ಶನದಲ್ಲಿಯೂ ಕಾರ್ಯಕ್ರಮ    ನೀಡಿದ್ದಾರೆ.

ಕೊಪ್ಪಳ ಸೇರಿದಂತೆ ವಿವಿಧೆಡೆ ನಡೆದಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ, ಚಾಲುಕ್ಯ, ಬಾದಾಮಿ, ಪಟ್ಟದಕಲ್ಲು ಉತ್ಸವ, ಮೈಸೂರಿನ ದಸರಾ ಮಹೋತ್ಸವ, ನವರಾತ್ರಿ ಉತ್ಸವ ಸೇರಿದಂತೆ ಹಲವಾರು ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಜೊತೆಗೆ ಚಂದನ ಟಿ.ವಿ.ಯ `ರಾಗಮಂಟಪ~, `ಚಿತ್ತಾರ~, ಉದಯ ಟಿ.ವಿ.ಯ `ನಾದ~ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದಾರೆ.

ಡಾ.ಪಂಡಿತ್ ಪುಟ್ಟರಾಜ ಗವಾಯಿಗಳು, ಪಂಡಿತ ರಾಜಗುರು ಗುರುಸ್ವಾಮಿ ಕಲಕೇರಿ, ಪಂ. ಎಂ.ವೆಂಕಟೇಶಕುಮಾರ್, ಪಂ. ಶಫೀಕ್ ಖಾನ್,    ಡಾ.ಮುಕ್ತಾ ಮುಜಮದಾರ, ಬಾಲಚಂದ್ರ ನಾಕೋಡ್ ಮುಂತಾದ ಗಾಯಕರಿಗೆ ತಬಲಾ ಸಾಥ್ ನೀಡಿರುವುದಾಗಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ತಮ್ಮ ಸುಶ್ರಾವ್ಯ ಹಾಡುಗಾರಿಕೆ ಮತ್ತು ಉತ್ತಮ      ತಬಲಾ ವಾದನದಿಂದ ಜನಮನ ಗೆದ್ದಿರುವ ಇವರು,  ಅನೇಕ ಗೌರವ ಪುರಸ್ಕಾರಗಳಿಗೂ ಭಾಜನರಾಗಿದ್ದಾರೆ.

ಸಂಗೀತ ಲೋಕದ ಸಿರಿವಂತ, ಸಂಗೀತ ಸುಧಾಕರ,  ಸಂಗೀತ ಶ್ರೀ,  ತಬಲಾ ಚತುರ, ತಬಲಾ ವಿಚಕ್ಷಣ ವಾದಕ ಸೇರಿದಂತೆ  ಅನೇಕ ಬಿರುದು, ಸನ್ಮಾನಗಳು ಇವರಿಗೆ ಸಂದಿವೆ.

ಕುವೆಂಪು, ದ.ರಾ.ಬೇಂದ್ರೆ, ಎನ್.ಎಸ್.ಲಕ್ಷ್ಮೀನಾರಾಯಣ ಭಟ್, ಪ್ರೊ.ದೊಡ್ಡರಂಗೇಗೌಡರ ಕವನಗಳು ಹಾಗೂ ಬಸವಾದಿ ಶಿವಶರಣರ ವಚನಗಳಿಂದ ಪ್ರಭಾವಿತರಾಗಿ ರಾಗ ಸಂಯೋಜಕರಾಗಿಯೂ ಗಮನಾರ್ಹ ಸಾಧನೆ    ಮಾಡಿದ್ದಾರೆ.

ಪ್ರಸ್ತುತ ಮಂಡ್ಯ ಜಿಲ್ಲೆಯ   ಕೃಷ್ಣರಾಜಪೇಟೆಯಲ್ಲಿ ಸಂಗೀತ ಶಿಕ್ಷಕನಾಗಿ ಎಲೆಮರೆ ಕಾಯಿಯಂತೆಯೇ ಸಂಗೀತ ಸರಸ್ವತಿಯ ಸೇವೆ ಮಾಡುತ್ತಿರುವ ಇವರು, ಅನೇಕ ಮಕ್ಕಳಿಗೆ ಉಚಿತವಾಗಿ ಸಂಗೀತ ಪಾಠ ಹೇಳಿ ಕೊಡುತ್ತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.