ADVERTISEMENT

ಸಂಭ್ರಮ ಜನಪದದ್ದು;

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 10:10 IST
Last Updated 11 ಫೆಬ್ರುವರಿ 2012, 10:10 IST

ಮಂಡ್ಯ: ಅದು ಮಕ್ಕಳ ಹಬ್ಬ. ಸರ್ಕಾರಿ ಶಾಲೆಗಳಿಗೆ ಸೇರಿದ್ದ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಆಗಮಿಸಿದ್ದ ಮಕ್ಕಳ ಪಾಲಿಗೆ ನಿಜಕ್ಕೂ ಹಬ್ಬವೇ. ನಗರದ ಕಾರಸವಾಡಿ ರಸ್ತೆಯ ಆದರ್ಶ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಒಂದುಗೂಡಿದ್ದ ವಿವಿಧ ಸರ್ಕಾರಿ ಶಾಲೆಗಳ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ತೆರೆದುಕೊಂಡಿದ್ದರು.

ಬಾಲವಿಕಾಸ ಅಕಾಡೆಮಿಯ ಸಹಯೋಗದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆದರ್ಶ ಶಿಕ್ಷಣ ಸಂಸ್ಥೆ ಮತ್ತು ಕ್ಷೀರಸಾಗರ ಮಿತ್ರಕೂಟದ ಸಹಯೋಗದಲ್ಲಿ ನಡದ ಮಕ್ಕಳ ಹಬ್ಬ ವಿವಿಧ ಶಾಲೆಗಳ ಮಕ್ಕಳಿಗೆ ತಮ್ಮ ಜಾನಪದ ಅಭಿರುಚಿ, ಕಲೆಗಳನ್ನು ಪ್ರದರ್ಶಿಸುವಲ್ಲಿ ಉತ್ತಮ ವೇದಿಕೆಯಾಯಿತು.

ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಮಹೇಶ್ ಟೆಂಗಿನಕಾಯಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ವಿಮಲಾ, ಆದರ್ಶ ಶಿಕ್ಷಣ ಸಂಸ್ಥೆಯ ಸ್ಥಾಪಕರಾದ ಡಾ. ಮೂರ್ತಿ ಅವರೂ ಮಕ್ಕಳ ಸಾಧನೆಯನ್ನು ಕೊಂಡಾಡಿದರು.

ಮಂಡ್ಯ ಶಾರದಾ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಸಾಮೂಹಿಕ ನೃತ್ಯ ಪ್ರದರ್ಶಿಸಿದರೆ; ಪಾಂಡವಪುರ ತಾಲ್ಲೂಕು ನಾರಾಯಣಪುರ ಶಾಲೆಯ ವಿದ್ಯಾರ್ಥಿಗಳು ಡೊಳ್ಳು ಕುಣಿತ; ಡ್ಯಾಪೋಡಿಲ್ ಶಾಲೆಯ ಮಕ್ಕಳು ಕಾಶ್ಮೀರಿ ನೃತ್ಯ, ಕೆ.ಆರ್.ಪೇಟೆಯ ಶಾಲೆಯ ತಂಡ ಕೋಲಾರ, ಆದರ್ಶ ಪ್ರೌಢಶಾಲೆಯ ವಿದ್ಯಾರ್ಥಿಗಳು ಜನಪದ ನೃತ್ಯ, ಸಮೂಹ ನೃತ್ಯ, ಕೊಪ್ಪದ ಅಂಬೇಡ್ಕರ್ ಪ್ರೌಢಶಾಲೆಯ ಮಕ್ಕಳು ಕೋಲಾಟ, ಕಂಸಾಳೆ ನೃತ್ಯ, ಮಂಡ್ಯ ಸೇಂಟ್‌ಜಾನ್ ಸ್ಕೂಲ್‌ನ ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ಪ್ರಸ್ತುತಪಡಿಸಿದರು.

ಜನಪದ ಕಮ್ಮಟ
ಶಿಕ್ಷಕರೇ ವಿದ್ಯಾರ್ಥಿಗಳು!
ಮಂಡ್ಯ:
ಅದು ಜನಪದ ಕಮ್ಮಟ. ಅಲ್ಲಿ ಶಿಕ್ಷಕರೇ ವಿದ್ಯಾರ್ಥಿಗಳು! ಜನಪದವನ್ನು ಮಕ್ಕಳಿಗೆ ಹೇಳಿಕೊಡಬೇಕಾದ ಅಗತ್ಯ, ಅದನ್ನು ತಿಳಿಸುವ ಪರಿಣಾಮಕಾರಿ ಕ್ರಮ, ಜನದಪದ ಶ್ರೀಮಂತಿಕೆ, ಅದನ್ನು ಉಳಿಸಬೇಕಾದ ಅಗತ್ಯ ಕುರಿತು ಶಿಕ್ಷಕರಿಗೆ ಮಾಹಿತಿ ನೀಡುವುದು ಕಮ್ಮಟದ ಉದ್ದೇಶವಾಗಿತ್ತು.

ಕರ್ನಾಟಕ ಜಾನಪದ ಅಕಾಡೆಮಿಯ ಸಹಯೋಗದಲ್ಲಿ ಯುವಜನ ಸೇವಾ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಾನಪದ ಪರಿಷತ್ತು ಜಿಲ್ಲಾ ಘಟಕ ಈ ಕಮ್ಮಟವನ್ನು ಆಯೋಜಿಸಲು ಕೈಜೋಡಿಸಿದ್ದವು. ಅನ್ಯಕಾರ್ಯ ನಿಮಿತ್ತ ಸೌಲಭ್ಯ ಇದ್ದರೂ ಹಾಜರಿದ್ದ ಪ್ರೌಢಶಾಲೆಯ ಕನ್ನಡ ಭಾಷಾ ಬೋಧನೆಯ ಶಿಕ್ಷಕರ ಸಂಖ್ಯೆ ನೂರು ದಾಟಿರಲಿಲ್ಲ.

ಈ ಬಗೆಗೆ ಜಾನಪದ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಡಿ.ಪಿ.ಸ್ವಾಮಿ, ಯುವಜನ ಸೇವಾ ಇಲಾಖೆಯ ಸಹಾಯಕ ನಿರ್ದೇಶಕಿ ಎಚ್.ಪಿ.ಮಂಜುಳಾ, ಶಿಕ್ಷಕರ ವಿರಳ ಹಾಜರಾತಿ ಇದೆ. ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರೆ ಚೆನ್ನಾಗಿತ್ತು ಎಂದರು.

ಆದರೆ, ವೇದಿಕೆಯಲ್ಲಿದ್ದ ಜಾನಪದ ಅಕಾಡೆಮಿಯ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಅವರು,  ನಾವು ಸಮ್ಮೇಳನ ಮಾಡುತ್ತಿಲ್ಲ. ಆಸಕ್ತಿ ಇರುವ ಕೆಲವರೂ ಬಂದರೂ ಸಾಕು. ಕಮ್ಮಟದ ಉದ್ದೇಶ ಈಡೇರಬೇಕು ಅಷ್ಟೆ ಎಂದರು.
ಜನಪದ ಕಲೆಯ ಶ್ರೀಮಂತಿಕೆ, ಮಹತ್ವ ಕುರಿತು ಡಾ. ಜಯಲಕ್ಷ್ಮೀ ಸೀತಾಪುರ, ವ.ನಂ. ಶಿವರಾಮು, ಜನಪದ ಗಾಯಕ ಕೆ.ಸಣ್ಣಹೊನ್ನಯ್ಯ, ಪ್ರಾಧ್ಯಾಪಕ ಪ್ರೊ. ಎಸ್. ಶಶಿಕುಮಾರ್ ಅವರು ಉಪನ್ಯಾಸ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.