ADVERTISEMENT

ಸದನದಲ್ಲಿ ಗಂಭೀರ ಚರ್ಚೆ ಬದಲು ಬ್ಲೂಫಿಲಂ ವೀಕ್ಷಣೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 6:10 IST
Last Updated 25 ಫೆಬ್ರುವರಿ 2012, 6:10 IST
ಸದನದಲ್ಲಿ ಗಂಭೀರ ಚರ್ಚೆ ಬದಲು ಬ್ಲೂಫಿಲಂ ವೀಕ್ಷಣೆ
ಸದನದಲ್ಲಿ ಗಂಭೀರ ಚರ್ಚೆ ಬದಲು ಬ್ಲೂಫಿಲಂ ವೀಕ್ಷಣೆ   

ಮಂಡ್ಯ: ಜಲ ವಿವಾದ, ಗಡಿ ವಿವಾದ, ಕನ್ನಡಿಗರಿಗೆ ಉದ್ಯೋಗ ನೀಡುವಿಕೆ ಸೇರಿದಂತೆ ಅನೇಕ ಸಮಸ್ಯೆಗಳು ಇದ್ದರೂ ಶಾಸನ ಸಭೆಯಲ್ಲಿ ಇವುಗಳ ಬಗೆಗೆ ಗಂಭೀರ ಚರ್ಚೆಗೆ ಬದಲಾಗಿ, ಅಶ್ಲೀಲ ದೃಶ್ಯ ವೀಕ್ಷಿಸುವ ಜನಪ್ರತಿನಿಧಿಗಳು ಇದ್ದಾರೆ ಎಂಬುದೇ ಈಗಿನ ವಿಪರ್ಯಾಸಕರ ಎಂದು ಕರವೇ   ಅಧ್ಯಕ್ಷ ಟಿ.ಎ.ನಾರಾಯಣಗೌಡ ಅಭಿಪ್ರಾಯಪಟ್ಟರು.

ಕರ್ನಾಟಕ ರಕ್ಷಣಾ ವೇದಿಕೆಯು ಶುಕ್ರವಾರ ಇಲ್ಲಿನ ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಲ್ಲಿ ಆಯೋಜಿಸಿದ್ದ ಸುಗ್ಗಿ ಸಂಭ್ರಮ ಮತ್ತು ಜಾಗೃತಿ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಂಗಲ್ ಹನುಮಂತಯ್ಯ, ಕಡಿದಾಳ್ ಶಾಮಣ್ಣ ಅಂಥವರು ಕುಳಿತಿದ್ದ ಶಾಸನ ಸಭೆಯಲ್ಲಿ ಎಂಥವರು ಕುಳಿತಿದ್ದಾರೆ ನೋಡಿ ಎಂದು ವ್ಯಂಗ್ಯವಾಡಿದರು.

ರೈಲ್ವೆಯಲ್ಲಿ ಕನ್ನಡಿಗರಿಗೆ ನೇಮಕಾತಿ, ಕನ್ನಡ ಭಾಷೆಯಲ್ಲಿಯೂ ಪರೀಕ್ಷೆ ನಡೆಸಲು ಕರ್ನಾಟಕ ರಕ್ಷಣಾ ವೇದಿಕೆಯು ನಡೆಸಿದ ಹೋರಾಟವೂ ಕಾರಣ ಎಂದು ಹೇಳಿದ ಅವರು, ಕನ್ನಡಿಗರ ಹಿತ ರಕ್ಷಣೆಗೆ ವೇದಿಕೆ ಮತ್ತು ವೇದಿಕೆಯ ಕಾರ್ಯಕರ್ತರು ಎಂದಿಗೂ ಬದ್ಧರಾಗಿ ಇರುತ್ತಾರೆ ಎಂದು ಪ್ರತಿಪಾದಿಸಿದರು.

ಶಾಸಕ ಸಿ.ಎಸ್.ಪುಟ್ಟರಾಜು ಅವರು, ಬೆಂಗಳೂರಿನಂಥ ಪ್ರದೇಶದಲ್ಲಿ  ಪರಭಾಷಿಕರು ಕನ್ನಡಿಗರ ಬಗೆಗೆ ಭೀತಿಯನ್ನು ಹೊಂದಿದ್ದರೆ ಅದಕ್ಕೆ ಕರವೇ ಕಾರಣ. ಅಂಥದೊಂದು ಶಕ್ತಿಯನ್ನು ಗೌಡರು ವೇದಿಕೆಗೆ ತಂದು ಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡಿಗರೇ ಹೆಚ್ಚಾಗಿರುವ ಮಂಡ್ಯದಂಥ ಜಿಲ್ಲೆಯಲ್ಲಿ ಕನ್ನಡ ಪರ ಹೋರಾಟದಲ್ಲಿ ನಾರಾಯಣಗೌಡ ಅವರಿಗೆ ಬೆಂಬಲ ಸೂಚಿಸಬೇಕಾಗಿದೆ. ಕನ್ನಡಿಗರ ಬಗೆಗೆ ಲಘುವಾಗಿ ಮಾತನಾಡುವವರಿಗೆ ಪಾಠ ಕಲಿಸಲು ಎಲ್ಲರೂ ಕರವೇಜೊತೆಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಗಾಯಕರಾದ ಸಿ.ವಿ.ಎಲ್.ಶಾಸ್ತ್ರಿ, ನಟ ಗುರುರಾಜ ಹೊಸಕೋಟೆ, ನಿರ್ದೇಶಕ ಆನಂದ್ ಶ್ರೀರಾಜು, ವೈದ್ಯ ಡಾ. ಸತ್ಯನಾರಾಯಣರಾವ್, ಜೈನ್ ಶಿಕ್ಷಣ ಸಂಸ್ಥೆಯ ಶಶಿಕಲಾ ಫಾರೂಕ್ ಅವರನ್ನು ಕರವೇ ಪರವಾಗಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಕರವೇ ಮುಖಂಡರಾದ ಎಂ.ಎಸ್.ಚಿದಂಬರ್, ಜಿಲ್ಲಾ ಘಟಕದ ಅಧ್ಯಕ್ಷ ಉಮಾಶಂಕರ್, ಮಹಿಳಾ ಘಟಕದ ಸೌಭಾಗ್ಯ ಮಹದೇವು, ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ್, ಭಾರತೀ, ಸ್ವಾಮಿಗೌಡ, ಜೆಡಿಎಸ್‌ನ ಮುಖಂಡರಾದ ಅಶೋಕ್ ಎಸ್.ಡಿ.ಜಯರಾಂ, ಶಿವನಂಜು ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.