ADVERTISEMENT

ಸ್ವಯಂ ರಕ್ಷಣೆಗೆ ಸಾಹಸ ಕಲೆ ಸಹಕಾರಿ

ಬಾಲಭವನದಲ್ಲಿ ಬೇಸಿಗೆ ಶಿಬಿರ; ಅಡ್ವೆಂಚರ್‌ ಫೌಂಡೇಷನ್‌ ಸದಸ್ಯರಿಂದ ಪ್ರಾತ್ಯಕ್ಷಿಕೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2018, 12:44 IST
Last Updated 13 ಏಪ್ರಿಲ್ 2018, 12:44 IST
ಮಂಡ್ಯದ ಬಾಲಭವನದದಲ್ಲಿ ನಡೆಯುತ್ತಿರುವ ಬೇಸಿಗೆ ಶಿಬಿರದಲ್ಲಿ ರಾಷ್ಟ್ರೀಯ ಅಡ್ವೆಂಚರ್‌ ಫೌಂಡೇಷನ್‌ ಸದಸ್ಯರು ಗುರುವಾರ ಸಾಹಸ ಕಲೆಗಳ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಿದರು
ಮಂಡ್ಯದ ಬಾಲಭವನದದಲ್ಲಿ ನಡೆಯುತ್ತಿರುವ ಬೇಸಿಗೆ ಶಿಬಿರದಲ್ಲಿ ರಾಷ್ಟ್ರೀಯ ಅಡ್ವೆಂಚರ್‌ ಫೌಂಡೇಷನ್‌ ಸದಸ್ಯರು ಗುರುವಾರ ಸಾಹಸ ಕಲೆಗಳ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಿದರು   

ಮಂಡ್ಯ: ‘ಸ್ವಯಂ ರಕ್ಷಣೆಗಾಗಿ ಮಕ್ಕಳು ಚಿಕ್ಕಂದಿನಿಂದಲೇ ಸಾಹಸ ಕಲೆ ಕಲಿಯುವತ್ತ ಆಸಕ್ತಿ ಬೆಳೆಸಿಕೊಳ್ಳಬೇಕು. ಸ್ವಯಂ ರಕ್ಷಣೆ ಜೊತೆಗೆ ಆಪತ್ತಿನ ಕಾಲದಲ್ಲಿ ಇರುವವರನ್ನು ರಕ್ಷಣೆ ಮಾಡಬಹುದು’ ಎಂದು ಮೈಸೂರಿನ ಸ್ವಯಂ ಅಡ್ವೆಂಚರ್‌ ಫೌಂಡೇಷನ್‌ ಮುಖ್ಯಸ್ಥರಾದ ರುಕ್ಮಿಣಿ ಚಂದನ್‌ ಹೇಳಿದರು.

ನಗರದ ಬಾಲಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಮ್ಮಿಕೊಂಡಿರುವ ಉಚಿತ ಬೇಸಿಗೆ ಶಿಬಿರದಲ್ಲಿ ಗುರುವಾರ ಅವರು ಮಕ್ಕಳಿಗೆ ಸಾಹಸ ಕಲೆಗಳ ಪ್ರಾತ್ಯಕ್ಷಿಕೆ ನಡೆಸಿದರು.

‘ಬೃಹತ್‌ ಕಟ್ಟಡದಲ್ಲಿ ಬೆಂಕಿ ಅಪಘಾತ ಸೇರಿ ಯಾವುದೇ ಅವಘಡಗಳು ಸಂಭವಿಸಿದಾಗ ಸ್ವಯಂ ರಕ್ಷಣೆ ಮಾಡಿಕೊಳ್ಳಲು ಸಾಹಸ ಕಲೆಗಳು ಸಹಾಯ ಮಾಡುತ್ತವೆ. ಜೊತೆಗೆ ಮಹಿಳೆಯರು, ಮಕ್ಕಳು ಹಾಗೂ ಅಂಗವಿಕಲರನ್ನು ರಕ್ಷಣೆ ಮಾಡಬಹುದು. ಮಕ್ಕಳಿಗೆ ಆಸಕ್ತಿ ಇದ್ದರೆ ಈ ಕಲೆಯನ್ನು ಸುಲಭವಾಗಿ ಕಲಿಯಬಹುದು. ಬೆಂಕಿ ಅಪಘಾತ ಸಂಭವಿಸಿದಾಗ ಅಗ್ನಿ ಶಾಮಕ ದಳ ಬರುವ ತನಕ ಕಾಯುತ್ತೇವೆ. ನಮಗೆ ಸಾಹಸ ಕಲೆ ತಿಳಿದಿದ್ದರೆ ಸಮಸ್ಯೆಯ ಸುಳಿಯಲ್ಲಿ ಸಿಕ್ಕಿಹಾಕಿಕೊಂಡವರನ್ನು ರಕ್ಷಣೆ ಮಾಡಬಹುದು’ ಎಂದು ಹೇಳಿದರು.

ADVERTISEMENT

‘ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಈ ಸಾಹಸ ಕಲೆಗಳು ಸಹಾಯ ಮಾಡುತ್ತವೆ. ಮಕ್ಕಳಲ್ಲಿ ಧೈರ್ಯ ಮೂಡಿಸುವ ಜೊತೆಗೆ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗಿವೆ. ನಮ್ಮ ಸಂಸ್ಥೆ ವತಿಯಿಂದ ಮಕ್ಕಳಲ್ಲಿ ಸಾಹಸ ಕಲೆಗಳ ಅರಿವು ಮೂಡಿಸಲಾಗುತ್ತಿದೆ’ ಎಂದು ಹೇಳಿದರು. ಪ್ರಾತ್ಯಕ್ಷಿಕೆಯಲ್ಲಿ ಎನ್‌ಎಎಫ್‌ ತಂಡದ ಸದಸ್ಯರು ಹಗ್ಗ ಬಳಸಿ ಕಟ್ಟಡದಿಂದ ಕೆಳಗೆ ಇಳಿಯುವ ಬಗೆ,  ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಾಗ ಅಪಾಯಕ್ಕೆ ಸಿಲುಕಿದರ ರಕ್ಷಣೆ ಮುಂತಾದ ವಿಷಯಗಳ ಬಗ್ಗೆ ಅಣಕು ಪ್ರದರ್ಶನ ನೀಡಿದರು.

ಉದ್ಘಾಟನೆ: ಬೇಸಿಗೆ ಶಿಬಿರ ಉದ್ಘಾಟಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಡಾ.ಎಸ್‌.ದಿವಾಕರ್‌ ಮಾತನಾಡಿ ‘ಬೇಸಿಗೆ ಶಿಬಿರಗಳು ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯ ಅಭಿವ್ಯಕ್ತಿಗೆ ಸೂಕ್ತ ವೇದಿಕೆಯಾಗಿವೆ. ಹಿಂದೆ ಬೇಸಿಗೆ ರಜೆ ಬಂದರೆ ಮಕ್ಕಳು ಅಜ್ಜಿ–ತಾತನ ಮನೆಗೆ ಹೋಗುತ್ತಿದ್ದರು. ಆದರೆ ಆಧುನಿಕ ಯುಗದಲ್ಲಿ ಹಿರಿಯ ಜೊತೆ ಜೀವನ ಕಡಿಮೆಯಾಗುತ್ತಿದೆ. ಅವಿಭಕ್ತ ಕುಟುಂಬಗಳು ಮಾಯವಾಗಿ ಸಣ್ಣ ಸಂಸಾರಗಳು ಹೆಚ್ಚಾಗುತ್ತಿವೆ. ಹೀಗಾಗಿ ಮಕ್ಕಳಲ್ಲಿ ರಚನಾತ್ಮಕ ಭಾವ ಮೂಡಿಸಲು ಬೇಸಿಗೆ ಶಿಬಿರಗಳು ಸಹಕಾರಿಯಾಗಿವೆ’ ಎಂದು ಹೇಳಿದರು.

‘ಉತ್ತಮ ಸಂಪನ್ಮೂಲ ವ್ಯಕ್ತಿಗಳು ಹಾಗೂ ತರಬೇತುದಾರರು ಇಲ್ಲಿ ತರಬೇತಿ ನೀಡುತ್ತಿದ್ದಾರೆ. ಮಕ್ಕಳಲ್ಲಿ ಪಠ್ಯೇತರ ಚಟುವಟಿಕೆಯಲ್ಲಿ ಆಸಕ್ತಿ ಬೆಳೆಸಲು ಇಂತಹ ಶಿಬಿರಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ಸರ್ಕಾರದ ವತಿಯಿಂದ ಪ್ರತಿ ವರ್ಷ 9ರಿಂದ 14 ವರ್ಷ ವಯಸ್ಸಿನೊಳಗಿನ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ ನಡೆಸಲಾಗುತ್ತದೆ. 60 ರಿಂದ 70 ಮಕ್ಕಳ ನೋಂದಣಿ ಗುರಿ ಹೊಂದಲಾಗಿತ್ತು. ಆದರೆ 120 ರಿಂದ 130 ಮಕ್ಕಳು ನೋಂದಣಿಯಾಗಿದ್ದಾರೆ’ ಎಂದು ಹೇಳಿದರು.

ಶಿಶು ಅಭಿವೃದ್ಧಿ ಅಧಿಕಾರಿ ಚವ್ಹಾಣ್, ಬಾಲಭವನ ಸಮಿತಿಯ ಕೋಮಲಾ ಆನಂದ್‌ಕುಮಾರ್, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ವಿ.ನಾಗರಾಜು, ಬಿ.ಎಸ್.ಅನುಪಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.