ADVERTISEMENT

ಹೆದ್ದಾರಿ ತಡೆದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2012, 6:00 IST
Last Updated 19 ಜುಲೈ 2012, 6:00 IST

ಮದ್ದೂರು: ಸಮೀಪದ ನಗರಕೆರೆ ಗ್ರಾಮವನ್ನು ಕೆ.ಹೊನ್ನಲಗೆರೆ ನಾಡಕಚೇರಿ ವ್ಯಾಪ್ತಿಗೆ ಸೇರ್ಪಡೆಗೊಳಿಸಿರುವುದನ್ನು ಖಂಡಿಸಿ ಗ್ರಾಮಸ್ಥರು ಬುಧವಾರ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದ ಗ್ರಾಮಸ್ಥರು ಅರ್ಧಗಂಟೆಗೂ ಹೆಚ್ಚು ಕಾಲ ಹೆದ್ದಾರಿ ತಡೆ ನಡೆಸಿದ್ದರಿಂದ ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ಕೆಲ ಕಾಲ ಅಸ್ತವ್ಯಸ್ತಗೊಂಡಿತು. ನಂತರ ತಾಲ್ಲೂಕು ಕಚೇರಿ ಆವರಣಕ್ಕೆ ಆಗಮಿಸಿದ ಗ್ರಾಮಸ್ಥರು ಒಂದು ಗಂಟೆಗೂ ಹೆಚ್ಚುಕಾಲ ಧರಣಿ ನಡೆಸಿದರು. ನಂತರ ಶಿರಸ್ತೇದಾರ್ ಪ್ರಸಾದ್ ಅವರಿಗೆ ಮನವಿ ಸಲ್ಲಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಡಿ.ಶಿವಚರಣ್ ಮಾತನಾಡಿ, ಕಸಬಾ-2ರ ನಾಡಕಚೇರಿಯನ್ನು ಕೆ.ಹೊನ್ನಲಗೆರೆಯಲ್ಲಿ ಈಚೆಗೆ ತೆರೆಯಲಾಗಿದೆ. ಈ ವ್ಯಾಪ್ತಿಗೆ ಅವೈಜ್ಞಾನಿಕವಾಗಿ ನಗರಕೆರೆ ಸೇರಿದಂತೆ ಹಲವು ಗ್ರಾಮಗಳನ್ನು ಸೇರ್ಪಡೆಗೊಳಿಸಲಾಗಿದೆ. ಕೆ.ಹೊನ್ನಲಗೆರೆಯು ನಮ್ಮ ಗ್ರಾಮಕ್ಕೆ 14ಕಿ.ಮೀ ದೂರದಲ್ಲಿರುವುದರಿಂದ ಜನರು ಅಲ್ಲಿಗೆ ತೆರಳಲು ಅನಾನುಕೂಲವಾಗಿದೆ. ಹೀಗಾಗಿ ಹಿಂದಿನಂತೆ ಪಟ್ಟಣ ತಾಲ್ಲೂಕು ಕಚೇರಿ ವ್ಯಾಪ್ತಿಗೆ ನಮ್ಮ ಗ್ರಾಮವನ್ನು ಸೇರ್ಪಡೆಗೊಳಿಸಿ ಎಂದು ಆಗ್ರಹಿಸಿದರು.

ಗ್ರಾಮದ ಮುಖಂಡರಾದ ಬಸವಯ್ಯ, ಜಯರಾಮು, ಸೋಮು, ಶಂಕರ್, ಹನುಮೇಗೌಡ, ಚಿಕ್ಕಮಾಯಿಗಯ್ಯ, ಲಿಂಗಪ್ಪ, ಉಮೇಶ್, ರಾಜಶೇಖರ್, ಅರುಣ್‌ಕುಮಾರ್, ಆನಂದ್ ಇತರರು ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.