ADVERTISEMENT

ಹೊಳಲು: ಮೂಲಸೌಲಭ್ಯಗಳ ಕಡಲು

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2018, 6:46 IST
Last Updated 2 ಫೆಬ್ರುವರಿ 2018, 6:46 IST
ಹೊಳಲು ಗ್ರಾಮದ ಸುಂದರ ನೋಟ
ಹೊಳಲು ಗ್ರಾಮದ ಸುಂದರ ನೋಟ   

ಮಂಡ್ಯ: ಹಸಿರಿನ ಪೈರು, ಎರಡು ದೊಡ್ಡ ಕೆರೆ, ಹೆಬ್ಬಾಗಿಲು, ಹಲವು ದೇಗುಲ ದರ್ಶನ, ಮೂಲ ಸೌಲಭ್ಯ, ಖ್ಯಾತನಾಮ ಹೆಸರುಗಳು. ಇವು ನಗರದಿಂದ 5 ಕಿ.ಮೀ ದೂರದಲ್ಲಿರುವ ಹೊಳಲು ಗ್ರಾಮದ ವಿಶೇಷಗಳು.

ಪಟ್ಟಣದಲ್ಲಿ ಸಿಗುವ ಎಲ್ಲಾ ವಿಶೇಷ ಸೌಲಭ್ಯಗಳು ಈ ಗ್ರಾಮದಲ್ಲಿವೆ. ಇದನ್ನೊಂದು ಮಾದರಿ ಗ್ರಾಮ ಎಂದರೂ ತಪ್ಪಲ್ಲ. ಹೊಳಲಮ್ಮ ದೇವಿ ಹಾಗೂ ತಾಂಡವೇಶ್ವರನ ಕೃಪೆ ಈ ಊರಿನ ಮೇಲಿದೆ.

ವಿಜಯನಗರ ಆಳ್ವಿಕೆಯ ಕಾಲದಲ್ಲಿ ವಲಸೆ ಬಂದ ಪಾಳೇಗಾರರು ಊರ ಹೆಬ್ಬಾಗಿಲ ಬಳಿ ಇದ್ದ ಹುಲಿಯನ್ನು ಕೊಂದು ಜನರ ಜೀವನಕ್ಕೆ ಅನುಕೂಲ ಮಾಡಿಕೊಟ್ಟರು. ಆ ಕಾರಣಕ್ಕೆ ಹೊಳಲು ಎಂದು ಹೆಸರು ಬಂದಿದೆ ಎಂದು ಊರಿನ ಹಿರಿಯರು ಹೇಳುತ್ತಾರೆ. ತಾಂಡವೇಶ್ವರ ದೇವರು ಗುತ್ತಲಿನ ಅರ್ಕೇಶ್ವರ ಲಿಂಗದ ಒಂದು ಭಾಗವಾಗಿದೆ. ಅದರಿಂದಲೂ ಹೊಳಲು ಎಂಬ ಹೆಸರು ಬಂದಿದೆ ಎಂಬ ಪ್ರತೀತಿ ಇದೆ.

ADVERTISEMENT

ಗುತ್ತಲು ಗ್ರಾಮದ ಪೊದೆಯಲ್ಲಿ ಅರ್ಕೇಶ್ವರ ಲಿಂಗ ಉದ್ಭವವಾಗಿ ಹಸುವೊಂದು ಪ್ರತಿದಿನ ಹಾಲಿಳಿಸಿ ಹೋಗುತ್ತಿತ್ತು. ಊರ ಪಾಳೆಗಾರು ಪೊದೆಯಲ್ಲೇನಿದೆ ಎಂದು ಚಂದ್ರಾಯುಧ ಬೀಸಿದಾಗ ಲಿಂಗದ ಮಂಡೆ ಸಿಡಿದು ಬಿದ್ದ ಜಾಗ ಮಂಡ್ಯ ಆಗಿ, ಅಲ್ಲಿಂದ ಪುಟಿದು ಮತ್ತೊಂದು ಜಾಗದಲ್ಲಿ ಬಿದ್ದಾಗ ಅದು ಚಿಕ್ಕಮಂಡ್ಯವಾಯಿತು. ಕೊನೆಗೆ ಲಿಂಗದ ಮಂಡೆ ಹೊರಳಿ ಹೊರಳಿ ನೆಲೆನಿಂತ ಜಾಗವೇ ಹೊಳಲು ಗ್ರಾಮವಾಯಿತು. ಹೊರಳಿ ಬಿದ್ದ ಮಂಡೆಯನ್ನು ತಾಂಡವೇಶ್ವರವಾಗಿ ಪೂಜೆ ಮಾಡುತ್ತೇವೆ ಎಂಬ ಕತೆ ಗ್ರಾಮದಲ್ಲಿ ಬಿಚ್ಚಿಕೊಳ್ಳುತ್ತದೆ.

ಧರ್ಮದರ್ಶಿಗಳ ನೆಲೆವೀಡು: ಧಾರ್ಮಿಕವಾಗಿ ಜಾಗೃತವಾಗಿರುವ ಈ ಗ್ರಾಮದಲ್ಲಿ ಹಲವು ಮಂದಿ ಧರ್ಮದರ್ಶಿಗಳಿದ್ದಾರೆ. ‘ಸಣ್ಣ ಪುಟ್ಟ ದೇವಾಲಯಗಳ ಅಭಿವೃದ್ಧಿ ಹಾಗೂ ಜೀರ್ಣೋದ್ಧಾರಕ್ಕೆ ಊರಿನ ಬಹಳಷ್ಟು ಜನರು ಕೊಡುಗೆ ನೀಡಿದ್ದಾರೆ. ಊರಿನಲ್ಲಿರುವ ದೇವಾಲಯಗಳನ್ನು ಒಂದೊಂದು ಸಂಘಟನೆ ಹಾಗೂ ನಾಯಕರು ವಹಿಸಿಕೊಂಡು ಅಭಿವೃದ್ಧಿ ಮಾಡಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ’ ಎಂದು ಗ್ರಾಮ ನಿವಾಸಿ ಮೋಹನ್‌ಕುಮಾರ್‌ ಪಟೇಲ್‌ ಹೇಳಿದರು.

ದೊಡ್ಡ ಕೆರೆಗಳು ಹಾಗೂ ವ್ಯವಸಾಯ: ಗ್ರಾಮದಲ್ಲಿ ತೊಂಡೆಕೆರೆ (80 ಎಕರೆ ವಿಸ್ತೀರ್ಣ) ಹಾಗೂ ದೊಡ್ಡ ಕೆರೆ (400 ಎಕರೆ ವಿಸ್ತೀರ್ಣ) ಎಂಬೆರಡು ಕೆರೆಗಳಿವೆ. ಎರಡೂ ಕೆರೆಗಳಲ್ಲಿ ಹೂಳು ತುಂಬಿಕೊಂಡು ಬರಿದಾಗಿ ನಿಂತಿವೆ. ‘ಊರಿನ ಜನರು ಕೃಷಿ ಕೆಲಸದಿಂದ ವಿಮುಕ್ತರಾಗುತ್ತಿದ್ದು ಜಿಲ್ಲಾ ಕೇಂದ್ರ ಹತ್ತಿರವಿರುವ ಕಾರಣ ಕೈ ಕೆಸರು ಮಾಡಿಕೊಳ್ಳದೆ ನಗರಜೀವನ ಮಾಡ ಹೊರಟಿದ್ದಾರೆ, ಕೃಷಿಯನ್ನು ಮರೆಯುತ್ತಿದ್ದಾರೆ’ ಎಂದು ಗ್ರಾಮದ ಶಿವಪ್ರಸಾದ್ ಹೇಳಿದರು. ವಿವಿಧ ಸಮುದಾಯಗಳ ಜನರು ಇಲ್ಲಿ ನೆಲೆಸಿದ್ದು ಎಲ್ಲರೂ ಐಕ್ಯತೆಯಿಂದ ಜೀವನ ಸಾಗಿಸುತ್ತಿದ್ದಾರೆ. ಊರಿಗೆ ಒಂದೇ ಸ್ಮಶಾನವಿದೆ. ಯಾವುದೇ ಭೇದ ಮಾಡದೇ ಶವ ಸಂಸ್ಕಾರ ಮಾಡುತ್ತಿರುವುದು ಗ್ರಾಮದ ವಿಶೇಷ.

ಸಾಧಕರು: ಮುದ್ದಮ್ಮ ಸಿದ್ದೇಗೌಡ ಹೆಸರು ಅಪಾರ ಪ್ರಸಿದ್ಧಿ ಪಡೆದಿದೆ. ಇವರಿಂದ ದಾನ ಹಾಗೂ ಧನ ಸಹಾಯದ ಸೇವೆಯನ್ನು ಊರಿನವರು ಪಡೆದಿದ್ದಾರೆ. ಊರಿನ ಶಾಲಾ ಕಟ್ಟಡ, ಆಸ್ಪತ್ರೆ, ಸಮುದಾಯ ಭವನ ನಿರ್ಮಾಣಕ್ಕೆ ಧನ ಸಹಾಯ ಮಾಡಿ ದಾನಿ ಮುದ್ದಮ್ಮ ಎನಿಸಿಕೊಂಡಿದ್ದಾರೆ. ತಾಂಡವಮೂರ್ತಿ ಸಂಗೀತ ವಿದ್ವಾನ್ ಆಗಿದ್ದು ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ಡಾ.ಚಿಕ್ಕಲಿಂಗಯ್ಯ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಹೃದ್ರೋಗ ತಜ್ಞರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಎಚ್.ಬಿ.ರಾಮುಲು ಶಾಸಕರಾಗಿ ತಾಲ್ಲೂಕು ಹಾಗೂ ಗ್ರಾಮದ ಅಭಿವೃದ್ಧಿ ಮಾಡಿದ್ದಾರೆ.

ಎಚ್.ಡಿ.ಚೌಡಯ್ಯ ಅವರು ಶಾಸಕ ಹಾಗೂ ಮಂತ್ರಿಯಾಗಿ ಊರಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಪ್ರಸ್ತುತ ಮಂಡ್ಯದ ಪ್ರತಿಷ್ಠಿತ ಪಿ.ಇ.ಟಿ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉಮೇಶ್ ತಾಂಡವಮೂರ್ತಿ ಕೆನಡಾ, ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇಲಿ ಶಾಸ್ತ್ರಕ್ಕೆ ಪ್ರಸಿದ್ಧಿ

ಇಲಿ ಕಚ್ಚಿ ದೇಹದಲ್ಲಿ ಗಂಟಾಗಿದ್ದರೆ ಅದಕ್ಕೆ ಊರಿನ ಆಚಾರ್‌ ಕುಟುಂಬ ಶಾಸ್ತ್ರ ಹೇಳಿ ಊಟದಲ್ಲಿ ಪಥ್ಯೆ ಮಾಡುತ್ತದೆ. ‘ಮೈಸೂರು ರಾಜರ ಆಳ್ವಿಕೆ ಕಾಲದಲ್ಲಿ ಊರಿಗೆ ಪ್ಲೇಗ್ ಮಹಾಮಾರಿ ಬಂದು ಎಲ್ಲರೂ ಊರು ತ್ಯಜಿಸಿದರು. ಆಗ ನವರಾತ್ರಿ ಪೂಜೆ ಮಾಡಲು ನಮ್ಮ ಮನೆಯ ಒಂದೇ ಕುಟುಂಬ ಇಲ್ಲಿ ವಾಸವಾಗಿತ್ತು. ಹಾಗಾಗಿ ಜೀವನ ನಡೆಸಲು ರಾಜರು ಇಲಿಶಾಸ್ತ್ರವನ್ನು ಬಳುವಳಿಯಾಗಿ ನೀಡಿದರು’ ಎಂದು ಆಚಾರ್‌ ಕುಟುಂಬದ ಸದಸ್ಯರು ತಿಳಿಸಿದರು.

ಸತೀಷ್‌ ಕೆ ಬಳ್ಳಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.