ADVERTISEMENT

ಹೋರಾಟದ ಹಾದಿಯಲ್ಲಿ ‘ಸದನ ಶೂರ’ನಾದರು!

ಎಂ.ಎನ್.ಯೋಗೇಶ್‌
Published 7 ಫೆಬ್ರುವರಿ 2018, 6:56 IST
Last Updated 7 ಫೆಬ್ರುವರಿ 2018, 6:56 IST
ಕೆ.ಎಸ್‌.ಪುಟ್ಟಣ್ಣಯ್ಯ
ಕೆ.ಎಸ್‌.ಪುಟ್ಟಣ್ಣಯ್ಯ   

ಮಂಡ್ಯ: ರೈತ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದ ಕೆ.ಎಸ್‌.ಪುಟ್ಟಣ್ಣಯ್ಯ ಅವರು ಮೊದಲು ಶಾಸಕರಾಗಿ ಆಯ್ಕೆಯಾದುದು 1994ರಲ್ಲಿ. ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ವಿಚಾರ ಶಾಲೆಯಲ್ಲಿ ಪಳಗಿದ್ದ ಪುಟ್ಟಣ್ಣಯ್ಯ ವಿಧಾನಸಭೆ ಪ್ರವೇಶಿಸಿದಾಗ ರಾಜ್ಯದ ರೈತ ಸಮುದಾಯದ ಧ್ವನಿಯಾದರು.

ಪಾಂಡವಪುರ ವಿಧಾನಸಭಾ ಕ್ಷೇತ್ರದಲ್ಲಿ ರೈತಸಂಘದಿಂದ 1989ರಲ್ಲಿ ಮೊದಲ ಬಾರಿಗೆ ಸ್ಪರ್ಧೆ ಮಾಡಿದ್ದ ಪುಟ್ಟಣ್ಣಯ್ಯ ಸೋಲು ಅನುಭವಿಸಿದರು. 1994ರ ಚುನಾವಣೆಯಲ್ಲಿ ಪಾಂಡವವುರ ಕ್ಷೇತ್ರದ ಕಣ ಅಪಾರ ಜಿದ್ದಾಜಿದ್ದಿಗೆ ಕಾರಣವಾಗಿತ್ತು. ಕಾಂಗ್ರೆಸ್‌ನಿಂದ ಡಿ.ಹಲಗೇಗೌಡ, ಮಾಜಿ ಶಾಸಕ ಕೆ.ಕೆಂಪೇಗೌಡ ಸ್ವತಂತ್ರ ಅಭ್ಯರ್ಥಿಯಾಗಿ ಕಣದಲ್ಲಿದ್ದರು. ಕ್ಷೇತ್ರದಾದ್ಯಂತ ಸಂಚಲನ ಉಂಟುಮಾಡಿದ್ದ ರೈತಸಂಘದ ಅಭ್ಯರ್ಥಿ ಪುಟ್ಟಣ್ಣಯ್ಯ ಅಭೂತಪೂರ್ವ ಗೆಲುವು ದಾಖಲಿಸಿದರು.

‘ನಾನು ಶಾಸಕನಾಗಬೇಕು ಎಂದು ಕನಸಿನಲ್ಲೂ ಬಯಸಿರಲಿಲ್ಲ, ಚಳವಳಿಯೇ ನನ್ನ ಕನಸಾಗಿತ್ತು. ಹೊಲದಲ್ಲಿ ದಿನಕ್ಕೆ 12 ಗಂಟೆ ದುಡಿಯುತ್ತಿದ್ದೆ. ಬೆಳೆಗೆ ಬೆಲೆ ಸಿಗದಿದ್ದಾಗ ನೋವಾಗುತ್ತಿತ್ತು. ರೈತನ ನೋವು ಚಳವಳಿಯ ದಾರಿ ತೋರಿಸಿತು. ಹೋರಾಟವೇ ಉದ್ದೇಶವಾಗಿತ್ತು. ಒತ್ತಾಯಕ್ಕೆ ಮಣಿದು 1989ರ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಸೋತೆ. 1994ರಲ್ಲಿ ನನ್ನ ಗೆಲುವು ಇಡೀ ರಾಜ್ಯದ ರೈತರ ಗೆಲುವಾಗಿತ್ತು. ವಿಧಾನಸಭೆಯಲ್ಲಿ ಹೇಗೆ ಮಾತನಾಡಬೇಕು ಎಂಬ ಅರಿವು ನನ್ನಲ್ಲಿ ಇರಲಿಲ್ಲ. ನನ್ನ ಚಳವಳಿ ಹಾದಿಯಲ್ಲಿ ಕಂಡದ್ದನ್ನು ಮಾತನಾಡಿದೆ. ವಿಚಾರದ ಮೇಲೆ ಮಿಂಚಿದ ಶಾಸಕ ಎಂದು ಮಾಧ್ಯಮಗಳು ವರದಿ ಮಾಡಿದವು’ ಎಂದು ಶಾಸಕ ಕೆ.ಎಸ್‌.ಪುಟ್ಟಣ್ಣಯ್ಯ ನೆನಪಿನ ಬುತ್ತಿ ಬಿಚ್ಚಿದರು.

ADVERTISEMENT

ಸದನ ಶೂರನಿಗೆ ಸರಣಿ ಸೋಲು: ಕಾವೇರಿ ನೀರು, ಕಬ್ಬಿಗೆ ಬೆಲೆ ನಿಗದಿ, ಸಕ್ಕರೆ ಕಾರ್ಖಾನೆ ಸೇರಿ ಗ್ರಾಮೀಣ ಬದುಕಿನ ಚಿತ್ರಣವನ್ನು ಸದನದಲ್ಲಿ ಬಿಚ್ಚಿಡುತ್ತಿದ್ದ ಪುಟ್ಟಣ್ಣಯ್ಯ ‘ಸದನ ಶೂರ’ ಎಂದೇ ಖ್ಯಾತಿ ಗಳಿಸಿದ್ದರು. ಆದರೆ ನಂತರದ ಮೂರು ಚುನಾವಣೆಗಳಲ್ಲಿ ಸತತವಾಗಿ ಸೋತರು. 1999ರ ಚುನಾವಣೆಯಲ್ಲಿ ಸಿ.ಎಸ್‌.ಪುಟ್ಟರಾಜು ಜೆಡಿಎಸ್‌ ಅಭ್ಯರ್ಥಿಯಾದರೆ, ಕೆ.ಕೆಂಪೇಗೌಡ ಕಾಂಗ್ರೆಸ್‌ ಅಭ್ಯರ್ಥಿ. ಸ್ವತಂತ್ರ ಅಭ್ಯರ್ಥಿಯಾಗಿದ್ದ ಪುಟ್ಟಣ್ಣಯ್ಯ ಸೋಲು ಕಂಡರು. ಈ ಚುನಾವಣೆಯಲ್ಲಿ ಕೆ.ಕೆಂಪೇಗೌಡರು ಜಯ ಗಳಿಸಿದರು.

2004ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಜೆಡಿಎಸ್‌ ಪ್ರಾಬಲ್ಯ ತೀವ್ರವಾಗಿತ್ತು. ಸಿ.ಎಸ್‌.ಪುಟ್ಟರಾಜು ವಿರುದ್ಧ ಪುಟ್ಟಣ್ಣಯ್ಯ ಮತ್ತೆ ಸೋಲು ಕಂಡರು. 2008ರಲ್ಲಿ ನಡೆದ ಕ್ಷೇತ್ರ ಪುನರ್‌ ವಿಂಗಡಣೆಯಿಂದ ಪಾಂಡಪುರ ಕ್ಷೇತ್ರ ಮೇಲುಕೋಟೆ ವಿಧಾನಸಭಾ ಕ್ಷೇತ್ರವಾಯಿತು. 2009ರಲ್ಲಿ ನಡೆದ ಚುನಾವಣೆಯಲ್ಲಿ ರೈತಸಂಘದಿಂದ ಸ್ಪರ್ಧಿಸಿದ್ದ ಪುಟ್ಟಣ್ಣಯ್ಯ ಜೆಡಿಎಸ್‌ ಅಭ್ಯರ್ಥಿ ಸಿ.ಎಸ್‌.ಪುಟ್ಟರಾಜು ಅವರಿಗೆ ಪ್ರಬಲ ಸ್ಪರ್ಧೆ ನೀಡಿದರು. ಆದರೆ ಗೆಲುವು ಪುಟ್ಟರಾಜು ಪಾಲಾಯಿತು. ಈ ನಡುವೆ 2008ರಲ್ಲಿ ರೈತರ ಒತ್ತಾಯಕ್ಕೆ ಪುಟ್ಟಣ್ಣಯ್ಯ ಮಣಿದು ಲೋಕಸಭಾ ಚುನಾವಣೆಗೂ ಸ್ಪರ್ಧಿಸಿ ಸೋಲು ಕಂಡರು.

‘ಸರಣಿ ಸೋಲುಗಳಿಂದ ನನಗೇನೂ ಬೇಸರವಾಗಲಿಲ್ಲ. ಏಕೆಂದರೆ ನನ್ನ ಹೋರಾಟದ ಹಾದಿ ಸಾಕಷ್ಟು ಸವಾಲುಗಳ ನಡುವೆಯೂ ಸುಗಮವಾಗಿತ್ತು. ಆದರೆ ನಮ್ಮಂಥ ಹೋರಾಟಗಾರರನ್ನು ಮತದಾರರು ಸೋಲಿಸಬಾರದು ಎಂಬ ಭಾವ ನನ್ನೊಳಗೆ ಮೂಡಿತು. ಎಚ್‌.ಡಿ.ದೇವೇಗೌಡ, ಚರಣ್‌ಸಿಂಗ್‌ ಬಿಟ್ಟರೆ ಮತ್ತಾರೂ ರೈತರ ಬಗ್ಗೆ ಸದನದಲ್ಲಿ ಮಾತನಾಡುತ್ತಿರಲಿಲ್ಲ. ಹೀಗಾಗಿ ರೈತರ ಧ್ವನಿಯಾಗುವ ಜನಪ್ರತಿನಿಧಿಗಳನ್ನು ಮತದಾರರು ಕೈ ಹಿಡಿಯಬೇಕು ಎಂಬುದು ನನ್ನ ಭಾವನೆ’ ಎಂದು ಪುಟ್ಟಣ್ಣಯ್ಯ ಹೇಳಿದರು.

2013ರ ವಿಧಾನಸಭಾ ಚುನಾವಣೆಯಲ್ಲಿ ಸರ್ವೋದಯ ಪಕ್ಷದಿಂದ ಸ್ಪರ್ಧೆ ಮಾಡಿದ ಪುಟ್ಟಣ್ಣಯ್ಯ, ಸಿ.ಎಸ್‌.ಪುಟ್ಟರಾಜು ವಿರುದ್ಧ ಗೆಲುವು ದಾಖಲಿಸಿದರು. ಒಂದು ಲೋಕಸಭೆ ಸೇರಿ ನಾಲ್ಕು ಚುನಾವಣೆ ಸೋತಿದ್ದ ಅವರು ವಿಧಾನಸಭೆಯಲ್ಲಿ ಮತ್ತೊಮ್ಮೆ ರೈತರ ಧ್ವನಿಯಾದರು.

‘ನಾನು ಶಾಸಕ ಎಂಬ ಭಾವನೆ ನನ್ನೊಳಗೆ ಇಲ್ಲ. ಈಗಲೂ ಹೋರಾಟಗಾರನಾಗಿಯೇ ಉಳಿದಿದ್ದೇನೆ. ಸಮಗ್ರ ಕೃಷಿ ನೀತಿಗಾಗಿ ನನ್ನ ಹೋರಾಟ ಮುಂದುವರಿಯುತ್ತದೆ. ರೈತರಿಗೂ ವೇತನ ಆಯೋಗ ರಚನೆಯಾಗಬೇಕು, ಕೃಷಿ ಆದಾಯದ ಮೂಲವಾಗಬೇಕು, ಹಳ್ಳಿಗಳು ಪುನರುಜ್ಜೀವನಗೊಳ್ಳಬೇಕು, ಕೃಷಿ ಸಂಬಂಧಿತ ಕೈಗಾರಿಕೆ, ರೈತ ಮಾರುಕಟ್ಟೆ ಸ್ಥಾಪನೆಗೊಳ್ಳಬೇಕು. ಇವೇ ಮೊದಲಾದ ಬೇಡಿಕೆಗಳ ಈಡೇರಿಕೆಗೆ ನನ್ನ ಹೋರಾಟ ಮುಂದುವರಿಸುತ್ತೇನೆ’ ಎಂದರು.

ಸದ್ಯ ಸರ್ವೋದಯ ಪಕ್ಷ, ಸ್ವರಾಜ್‌ ಇಂಡಿಯಾ ಪಕ್ಷದೊಂದಿಗೆ ವಿಲೀನಗೊಂಡಿದ್ದು ಮುಂಬರುವ ಚುನಾವಣೆಯಲ್ಲಿ ಸ್ವರಾಜ್‌ ಇಂಡಿಯಾದಿಂದ ಪುಟ್ಟಣ್ಣಯ್ಯ ಮತ್ತೊಮ್ಮೆ ಸ್ಪರ್ಧೆ ಬಯಸಿದ್ದಾರೆ.

ಪುಟ್ಟಣ್ಣಯ್ಯ ಅವರ ಹೆಜ್ಜೆ ಗುರುತು

1989ರಲ್ಲಿ ರೈತಸಂಘದಿಂದ ಸ್ಪರ್ಧೆ: ಸೋಲು

1994ರಲ್ಲಿ ರೈತಸಂಘದಿಂದ ಸ್ಪರ್ಧೆ: ಗೆಲುವು

1999ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ: ಸೋಲು

2004ರಲ್ಲಿ ರೈತಸಂಘದಿಂದ ಸ್ಪರ್ಧೆ: ಸೋಲು

2009ರಲ್ಲಿ ರೈತಸಂಘದಿಂದ ಸ್ಪರ್ಧೆ: ಸೋಲು

2008ರಲ್ಲಿ ಲೋಕಸಭೆಗೆ ಸ್ಪರ್ಧೆ: ಸೋಲು

2013ರಲ್ಲಿ ಸರ್ವೋದಯ ಪಕ್ಷದಿಂದ ಸ್ಪರ್ಧೆ: ಗೆಲುವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.