ADVERTISEMENT

ವಿಶ್ವಮಾನವತೆ ಸಾರುವ ಸಾಹಿತ್ಯ ರಚನೆಯಾಗಲಿ

ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್ ಹೇಳಿಕೆ, ಬೆಸಗರಹಳ್ಳಿ ರಾಮಣ್ಣ ಕಥಾ ಸಂಕಲನ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 16 ಜೂನ್ 2019, 17:14 IST
Last Updated 16 ಜೂನ್ 2019, 17:14 IST
ಡಾ.ಬೆಸಗರಹಳ್ಳಿ ರಾಮಣ್ಣ ಕಥಾಸಂಕಲನ ಪ್ರಶಸ್ತಿಯನ್ನು ಎಸ್.ಗಂಗಾಧರಯ್ಯ ಅವರಿಗೆ ಪ್ರದಾನ ಮಾಡಲಾಯಿತು. ರವಿಕಾಂತೇಗೌಡ, ಡಾ.ಕೆ.ಪುಟ್ಟಸ್ವಾಮಿ, ಕೆ.ವೈ.ನಾರಾಯಣಸ್ವಾಮಿ, ಪ್ರೊ.ಬಿ.ಎ.ವಿವೇಕ ರೈ, ಡಿ.ಪಿ.ರಾಜಮ್ಮ ರಾಮಣ್ಣ, ಡಾ.ಬಂಜಗೆರೆ ಜಯಪ್ರಕಾಶ್, ಡಾ.ಎಲ್.ಜಿ.ಮೀರಾ ಇದ್ದಾರೆ
ಡಾ.ಬೆಸಗರಹಳ್ಳಿ ರಾಮಣ್ಣ ಕಥಾಸಂಕಲನ ಪ್ರಶಸ್ತಿಯನ್ನು ಎಸ್.ಗಂಗಾಧರಯ್ಯ ಅವರಿಗೆ ಪ್ರದಾನ ಮಾಡಲಾಯಿತು. ರವಿಕಾಂತೇಗೌಡ, ಡಾ.ಕೆ.ಪುಟ್ಟಸ್ವಾಮಿ, ಕೆ.ವೈ.ನಾರಾಯಣಸ್ವಾಮಿ, ಪ್ರೊ.ಬಿ.ಎ.ವಿವೇಕ ರೈ, ಡಿ.ಪಿ.ರಾಜಮ್ಮ ರಾಮಣ್ಣ, ಡಾ.ಬಂಜಗೆರೆ ಜಯಪ್ರಕಾಶ್, ಡಾ.ಎಲ್.ಜಿ.ಮೀರಾ ಇದ್ದಾರೆ   

ಮಂಡ್ಯ: ಜನಸಾಮಾನ್ಯರಿಗೆ ಪ್ರಶ್ನೆ ಕೇಳುವಮನೋಭಾವ ಬೆಳೆಸುವ ಹಾಗೂ ವಾಸ್ತವವನ್ನು ನಿರ್ದಯವಾಗಿ ಹೇಳುವ ಶಕ್ತಿಯನ್ನು ಬೆಳೆಸುವಂತಹ ಕೃತಿಗಳು ರಚನೆಯಾಗಬೇಕು ಎಂದು ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್ ಹೇಳಿದರು.

ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದ ವತಿಯಿಂದ ಭಾನುವಾರ ಆಯೋಜಿಸಿದ್ದ ಡಾ.ಬೆಸಗರಹಳ್ಳಿ ರಾಮಣ್ಣ ಕಥಾ ಸಂಕಲನ ಪ್ರಶಸ್ತಿ ಪ್ರದಾನ ಹಾಗೂ ಶೋಕಚಕ್ರ ಕವನ ಸಂಕಲನ (ಎರಡನೇ ಮುದ್ರಣ) ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಮನುಷ್ಯನಲ್ಲಿ ಒಂದು ಔನತ್ಯವಿದೆ. ಜಾತಿ, ಮತ, ಹೆಸರು ಮತ್ತು ಆಕೃತಿಗಳನ್ನು ಮೀರಿದಂತಹ ಒಂದು ವಿಶ್ವಮಾನವತೆ ಇದೆ. ಅಂತಹ ವಿಶ್ವಮಾನವತೆಯ ಚೈತನ್ಯದ ಎಳೆಗಳನ್ನು ಎಳೆದು ಹೊರ ತೆಗೆಯುವ ಸಾಹಿತ್ಯ ರಚನೆ ಯಾಗಬೇಕು. ಸಾಹಿತಿಗಳು ಬರೆದಂತೆ ಬದುಕುವುದು ಬಹಳ ಮುಖ್ಯ. ತನ್ನ ಸಾಹಿತ್ಯ ಶಕ್ತಿಗೆ ಸನ್ಮಾನ, ಪ್ರಶಸ್ತಿ ಪಡೆಯಲು ವಿರೋಧ ಎದುರಾದಾಗ ನಿರ್ಲಿಪ್ತವಾಗಿ ನೇಣಿಗೇರಲು ಸಿದ್ಧವಾಗಿರಬೇಕು. ಸಾಹಿತಿಗಳು ಸರ್ವತ್ಯಾಗಕ್ಕೂ ಸಿದ್ಧರಾಗಬೇಕು ಎಂದು ಕರೆ ನೀಡಿದರು.

ADVERTISEMENT

‘ಗಾಂಧಿ ಪ್ರತಿಮೆ ನಾಶ, ನೋಟಿನ ಮೇಲಿರುವ ಗಾಂಧಿ ಭಾವಚಿತ್ರ ತೆಗೆಯಲು ಸಕಾಲ ಎಂದು ಐಎಎಸ್ ಅಧಿಕಾರಿಯೊಬ್ಬರು ಹೇಳುವುದು ದುರಂತವಾಗಿದೆ. ಗಾಂಧಿಯನ್ನು ಕೊಂದವರು ದೇಶ ಭಕ್ತರು ಎಂದು ಬಹಿರಂಗವಾಗಿ ಹೇಳುವಂತಹ ಸ್ವಾತಂತ್ರ್ಯ ಸಿಕ್ಕಿದೆ. ಆದರೆ ಸರ್ವೋದಯದ ಕನಸು ಹಾಗೂ ಸ್ವಾತಂತ್ರ್ಯದ ಫಲ ಈವರೆಗೂ ನಮಗೆ ಸಿಕ್ಕಿಲ್ಲ. ಮತ್ತೆ ಕೆಲವರಿಗೆ ಉಸಿರಾಡುವುದಕ್ಕೂ ಆಲೋಚಿಸಿ ಉಸಿರಾಡುವಂತಹ ಭಯದ ಸ್ಥಿತಿ ನಿರ್ಮಾಣವಾಗಿದೆ. ಇಂತಹ ದೇಶದಲ್ಲಿ ಸಾಹಿತಿ ಇರುವುದಕ್ಕಿಂತ ಗಡಿಪಾರಾಗುವುದು ಲೇಸು’ ಎಂದು ಅಭಿಪ್ರಾಯಪಟ್ಟರು.

‘ನೇರ ನುಡಿಯ, ನಿರ್ಭಯದ ವ್ಯಕ್ತಿತ್ವ ರಾಮಣ್ಣನವರದ್ದಾಗಿತ್ತು. ಅವರು ಸಾಮಾನ್ಯರ ಬಗ್ಗೆ, ಸಾಮಾನ್ಯ ಭಾಷೆಯಲ್ಲಿ, ಗ್ರಾಮೀಣ ಭಾಷೆಯ ಸೊಗಡನ್ನು ತಮ್ಮ ಸಾಹಿತ್ಯದಲ್ಲಿ ಕಟ್ಟಿಕೊಟ್ಟಿದ್ದಾರೆ. ಸಾಹಿತ್ಯ ಹಾಗೂ ಜೀವನಾಭಿರುಚಿ ಒಂದಕ್ಕೊಂದು ಬೆರೆತಿರುವಂತೆ, ವಿಶ್ವಮಾನವ ತತ್ವದಡಿಯಲ್ಲಿ ಜೀವಿಸಿದ್ದಾರೆ. ಜನ ಸಾಮಾನ್ಯರು ಉನ್ನತಿ ಕಂಡು ಅದರಲ್ಲಿ ಮಹೋನ್ನತಿ ಕಾಣಬೇಕು ಎಂಬುದು ಅವರ ಆಶಯವಾಗಿತ್ತು. ಅವರ ಸಾಹಿತ್ಯವನ್ನು ಕಿರಿಯರಾದ ನಾವು ಎಷ್ಟು ಅರಗಿಸಿಕೊಂಡಿದ್ದೇವೆ ಎಂಬುದು ಗೊತ್ತಿಲ್ಲ. ಆದರೆ, ಹಿರಿಯರ ಸಾಮಾಜಿಕ ಕಳಕಳಿಯ ಹಾದಿಯಲ್ಲಿ ಸಾಹಿತ್ಯ ರಚಿಸಬೇಕು’ ಎಂದರು.

‘ದೇವರ ಕುದುರೆ’ ಕೃತಿಯ ಕರ್ತೃ, ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮಾಕುವಳ್ಳಿ ಗ್ರಾಮದ ಎಸ್.ಗಂಗಾಧರಯ್ಯ ಅವರಿಗೆ ‘ಡಾ.ಬೆಸಗರಹಳ್ಳಿ ರಾಮಣ್ಣ ಕಥಾಸಂಕಲನ ಪ್ರಶಸ್ತಿ’ಯನ್ನು ಜನಪದ ತಜ್ಞ ಡಾ.ಬಿ.ಎ.ವಿವೇಕ ರೈ ಪ್ರದಾನ ಮಾಡಿದರು.

ಕಾರ್ಯಕ್ರಮದಲ್ಲಿ ಬೆಂಗಳೂರಿನ ಮಹಾರಾಣಿ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕಿ ಡಾ.ಎಲ್.ಜಿ.ಮೀರಾ, ಬೆಸಗರಹಳ್ಳಿ ರಾಮಣ್ಣ ಅವರ ಪತ್ನಿ ಡಿ.ಪಿ.ರಾಜಮ್ಮ ರಾಮಣ್ಣ, ಪ್ರತಿಷ್ಠಾನದ ಅಧ್ಯಕ್ಷ ಡಾ.ಕೆ.ಪುಟ್ಟಸ್ವಾಮಿ ಹಾಗೂ ಸದಸ್ಯ ರವಿಕಾಂತೇಗೌಡ ಇದ್ದರು.

ಜೀವಮಿಡಿಯುವ ರಾಮಣ್ಣನ ಕಥೆಗಳು

ಬೆಸಗರಹಳ್ಳಿ ರಾಮಣ್ಣನವರ ಕಥೆಗಳು ಸರ್ವಕಾಲಿಕ ಜೀವಿಮಿಡಿತವನ್ನು ಹೊಂದಿವೆ. ನಾಚಿಕೆ ಹಾಗೂ ಸಂಕೋಚವನ್ನು ಹುಟ್ಟಿಸುವ ಕವಿತೆಗಳನ್ನು ಬರೆದಿದ್ದಾರೆ. ಯಾವುದೇ ಜಾತಿ, ಧರ್ಮ, ಶಾಸ್ತ್ರಗಳನ್ನು ಮೀರಿದಂತಹ ಸಾಹಿತ್ಯ ರಾಮಣ್ಣನವರದಾಗಿದ್ದು, ಅಂಬೇಡ್ಕರ್, ಗಾಂಧಿ ಹಾಗೂ ಲೋಹಿಯಾ ತತ್ವಗಳನ್ನು ಸಾರಿ ಹೇಳಿದ್ದಾರೆ ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದ ಸದಸ್ಯ ಡಾ.ಕೆ.ವೈ.ನಾರಾಯಣಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.