ADVERTISEMENT

ಮಕ್ಕಳಿಗೆ ಶೀತ ಜ್ವರ: ಆಸ್ಪತ್ರೆಗಳು ಭರ್ತಿ

ಮಿಮ್ಸ್‌ ಆಸ್ಪತ್ರೆಯಲ್ಲಿ ಪಿ.ಜಿ ವಿದ್ಯಾರ್ಥಿಗಳಿಂದ ಚಿಕಿತ್ಸೆ: ಪೋಷಕರ ಆಕ್ರೋಶ, ಕೋವಿಡ್‌ ಭಯ

ಎಂ.ಎನ್.ಯೋಗೇಶ್‌
Published 27 ಸೆಪ್ಟೆಂಬರ್ 2021, 5:50 IST
Last Updated 27 ಸೆಪ್ಟೆಂಬರ್ 2021, 5:50 IST
ಮಿಮ್ಸ್‌ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾದ ಕಾರಣ ಕಾರಿಡಾರ್‌ನಲ್ಲಿ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಸಾಲಾಗಿ ಕುಳಿತು ಚಿಕಿತ್ಸೆ ನೀಡುತ್ತಿರುವುದು
ಮಿಮ್ಸ್‌ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾದ ಕಾರಣ ಕಾರಿಡಾರ್‌ನಲ್ಲಿ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಸಾಲಾಗಿ ಕುಳಿತು ಚಿಕಿತ್ಸೆ ನೀಡುತ್ತಿರುವುದು   

ಮಂಡ್ಯ: ಕಳೆದೆರಡು ವಾರದಿಂದ ಜಿಲ್ಲೆಯಲ್ಲಿ ಮಕ್ಕಳಿಗೆ ಶೀತ ಜ್ವರ ತೀವ್ರಗೊಂಡಿದ್ದು ಕ್ಲಿನಿಕ್‌, ಆಸ್ಪತ್ರೆಗಳು ಭರ್ತಿಯಾಗಿವೆ. ಕೋವಿಡ್‌ ಭೀತಿಯ ನಡುವೆ ಜ್ವರ ತೀವ್ರಗೊಂಡಿರುವುದು ಪೋಷಕರನ್ನು ಆತಂಕಕ್ಕೆ ದೂಡಿದೆ.

ನೆಗಡಿ, ಕೆಮ್ಮು, ವಾಂತಿ ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುವ ಪುಟಾಣಿಗಳು ಔಷಧ ಸೇವನೆಯಿಂದ ಹೈರಾಣಾಗಿವೆ. ಕೆಲವು ಮಕ್ಕಳ ಪರಿಸ್ಥಿತಿ ಉಲ್ಬಣಗೊಂಡಿದ್ದು ಮಕ್ಕಳನ್ನು ಎನ್‌ಐಸಿಯುಗೆ ದಾಖಲು ಮಾಡಲಾಗಿದೆ. ಶ್ವಾಸಕೋಶದ ತೊಂದರೆಯಾದ ಮಕ್ಕಳಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರತಿ ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರತಿದಿನ 200ಕ್ಕೂ ಹೆಚ್ಚು ಮಕ್ಕಳು ಚಿಕಿತ್ಸೆಗೆ ಬರುತ್ತಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ 500ಕ್ಕೂ ಹೆಚ್ಚು ಮಕ್ಕಳಿಗೆ ಪ್ರತಿದಿನ ಚಿಕಿತ್ಸೆ ನೀಡಲಾಗುತ್ತಿದೆ.

ನಗರದ ಮಿಮ್ಸ್‌ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಮಕ್ಕಳೇ ತುಂಬಿದ್ದಾರೆ. ಹೊರ ರೋಗಿಗಳ ವಿಭಾಗ ಮಕ್ಕಳಿಂದ ತುಂಬಿ ಹೋಗಿದ್ದು, ವೈದ್ಯರು ಕಟ್ಟಡದ ಕಾರಿಡಾರ್‌ನಲ್ಲಿ ಸಾಲಾಗಿ ಕುಳಿತು ಚಿಕಿತ್ಸೆ ನೀಡುತ್ತಿದ್ದಾರೆ. ಹೆಚ್ಚು ಮಕ್ಕಳು ಬರುತ್ತಿರುವ ಕಾರಣ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳ ಸಹಾಯದೊಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಂದ ಚಿಕಿತ್ಸೆ ಕೊಡಿಸುತ್ತಿರುವುದಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಮಕ್ಕಳ ರೋಗ ತಜ್ಞರೆಲ್ಲರೂ ತಮ್ಮ ಖಾಸಗಿ ಕ್ಲಿನಿಕ್‌ನಲ್ಲಿ ಕುಳಿತಿದ್ದಾರೆ. ಕ್ಲಿನಿಕ್‌ಗಳು ಕೂಡ ತುಂಬಿ ತುಳುಕುತ್ತಿರುವ ಕಾರಣ ಎಲ್ಲರೂ ಅಲ್ಲಿಯೇ ಇದ್ದಾರೆ. ಮಿಮ್ಸ್‌ಗೆ ಬಂದರೆ ಮಕ್ಕಳ ತಜ್ಞ ವೈದ್ಯರು ಸಿಗುವುದೇ ಇಲ್ಲ. ವಿದ್ಯಾರ್ಥಿಗಳು ಕೊಡುವ ಔಷಧಿಗಳನ್ನು ಮಕ್ಕಳಿಗೆ ಹಾಕಲು ಭಯವಾಗುತ್ತದೆ’ ಎಂದು ಸಬೀನಾ ಬೇಗಂ ಆತಂಕ ವ್ಯಕ್ತಪಡಿಸಿದರು.

ಹಬೆ ಯಂತ್ರ ಮಾರಾಟ ಹೆಚ್ಚಳ: ಶ್ವಾಸಕೋಶದ ಸಮಸ್ಯೆಯಿಂದ ಮಕ್ಕಳಿಗೆ ಹಬೆ (ನೆಬ್ಯುಲೈಸೇಷನ್‌) ನೀಡಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗೆ ಬರುವ ಮಕ್ಕಳಿಗೆ ಆಸ್ಪತ್ರೆಗಳಲ್ಲೇ ಯಂತ್ರ ಅಳವಡಿಸಿ ಹಬೆ ನೀಡಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಮಾಸ್ಕ್‌ಗಳ (ನೆಬ್ಯುಲೈಸರ್‌ ಮಾಸ್ಕ್‌) ಕೊರತೆ ಉಂಟಾಗಿದ್ದು, ಪೋಷಕರೇ ಮಾಸ್ಕ್‌ ತರುವಂತೆ ಸೂಚನೆ ನೀಡಲಾಗುತ್ತಿದೆ.

ಖಾಸಗಿ ಕ್ಲಿನಿಕ್‌ಗಳಲ್ಲೂ ಮಕ್ಕಳಿಗೆ ಹಬೆ ನೀಡಲಾಗುತ್ತಿದೆ. ಹಲವು ಕ್ಲಿನಿಕ್‌ಗಳಲ್ಲಿ ಹಬೆ ನೀಡಲು ಹೆಚ್ಚು ಹಣ ವಸೂಲಿ ಮಾಡಲಾಗುತ್ತಿದೆ ಎಂದು ಪೋಷಕರು ಆರೋಪಿಸುತ್ತಾರೆ.

‘ಮಕ್ಕಳಿಗೆ ನಿತ್ಯ ಮೂರು ಬಾರಿ ಹಬೆ ನೀಡಬೇಕು. ಪ್ರತಿ ಬಾರಿ ಹಬೆ ನೀಡಲು ₹ 100 ವಸೂಲಿ ಮಾಡುತ್ತಿದ್ದಾರೆ. ಹಬೆಗಾಗಿಯೇ ದಿನಕ್ಕೆ ₹ 300 ತೆರಬೇಕಾಗಿದೆ’ ಎಂದು ಚಾಮುಂಡೇಶ್ವರಿ ನಗರದ ಮಹಿಳೆಯೊಬ್ಬರು ನೋವು ವ್ಯಕ್ತಪಡಿಸಿದರು.

ಮೆಡಿಕಲ್‌ ಸ್ಟೋರ್‌ಗಳಲ್ಲಿ ಹಬೆ ಯಂತ್ರ ಹಾಗೂ ಮಾಸ್ಕ್‌ಗಳ ಖರೀದಿ ಜೋರಾಗಿದೆ. ಯಂತ್ರಕ್ಕೆ ₹ 1, 800ರಿಂದ ₹ 3 ಸಾವಿರದವರೆಗೂ ಇದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಸಂಗ್ರಹ ಹೆಚ್ಚಾಗಿರುವ ಕಾರಣ ಆಮ್ಲಜನಕ ಪೈಪ್‌ಲೈನ್‌ ಮೂಲಕವೇ ಮಕ್ಕಳಿಗೆ ಹಬೆ ನೀಡಲಾಗುತ್ತಿದೆ.

ಕೋವಿಡ್‌ ಭಯ: 3ನೇ ಕೋವಿಡ್‌ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂಬ ಅಭಿಪ್ರಾಯ ಇರುವ ಕಾರಣ ಪೋಷಕರು ಹೆಚ್ಚು ಆತಂಕಗೊಂಡಿದ್ದಾರೆ. ಸಣ್ಣ ಜ್ವರ ಬಂದರೂ ಕೋವಿಡ್‌ ಇರಬಹುದು ಎಂದು ಭಯ ಕಾಡುತ್ತಿದ್ದು, ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಎಲ್ಲಾ ತಾಲ್ಲೂಕು ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್‌ ಪರೀಕ್ಷೆಗೆ ಒಳಪಡುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ.

ಋತುಮಾನ ಆಧಾರಿತ ಜ್ವರ: ‘ಇದು ಕೇವಲ ಋತುಮಾನ ಆಧಾರಿತ ಜ್ವರವಾ
ಗಿದ್ದು, ಈ ಸಮಯದಲ್ಲಿ ಜ್ವರ ಮಕ್ಕಳನ್ನು ಕಾಡುವುದು ಸಾಮಾನ್ಯ’ ಎಂದು ವೈದ್ಯರು ಹೇಳುತ್ತಾರೆ. ಸದ್ಯ ಜಿಲ್ಲೆಯಲ್ಲಿ ಮಳೆ ಕೊರತೆಯಾಗಿದ್ದು, ಬೇಸಿಗೆಯಂತ ಬಿಸಿಲಿನ ವಾತಾವರಣ ಇದ್ದು ಇದು ಜ್ವರ ಜಾಸ್ತಿಯಾಗಲು ಕಾರಣವಾಗಿದೆ ಎಂಬ ಅಭಿಪ್ರಾಯವೂ ಇದೆ.

‘ಈಗ ಎಲ್ಲೆಡೆ ಕೋವಿಡ್‌ ಭೀತಿ ಇರುವ ಕಾರಣ ಜ್ವರ ಕಾಣಿಸಿಕೊಂಡ ಕೂಡಲೇ ವೈದ್ಯರನ್ನು ಕಾಣಬೇಕು. ವೈದ್ಯರ ಸಲಹೆಗಳನ್ನು ಪಾಲನೆ ಮಾಡಬೇಕು. ಜ್ವರ ನಿಯಂತ್ರಣಕ್ಕೆ ಬಾರದಿದ್ದರೆ ತಪ್ಪದೇ ಕೋವಿಡ್‌ ಪರೀಕ್ಷೆ ಮಾಡಬೇಕು. ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಜಿಲ್ಲೆಯ ಮಕ್ಕಳಲ್ಲಿ ಜ್ವರ ಪರಿಸ್ಥಿತಿ ಉಲ್ಬಣವಾಗಿಲ್ಲ. ಆದರೂ ಮಕ್ಕಳ ಆರೋಗ್ಯದ ಮೇಲೆ ಕಾಳಜಿ ವಹಿಸಲಾಗಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಟಿ. ಎನ್‌.ಧನಂಜಯ ಹೇಳಿದರು.

ಗಾಳಿಯಲ್ಲಿ ಹರಡುವ ವೈರಾಣು: ‘ಸದ್ಯ ಕಾಣಿಸಿಕೊಂಡಿರುವ ಋತುಮಾನದ ವೈರಾಣು ಸಾಂಕ್ರಾಮಿಕವಾಗಿದ್ದು ಗಾಳಿಯಲ್ಲಿ ಹರಡುತ್ತದೆ. ಕೋವಿಡ್‌ ಹಿನ್ನೆಲೆಯಲ್ಲಿ ಪಾಲಿಸುತ್ತಿರುವ ಎಲ್ಲ ಎಚ್ಚರಿಕೆಯ ಕ್ರಮಗಳನ್ನು ಈಗಲೂ ಪಾಲಿಸಬೇಕು. ಜ್ವರದಿಂದ ಬಳಲುತ್ತಿರುವ ಮಕ್ಕಳು ಮನೆಯಲ್ಲಿ ಇದ್ದಾಗಲೂ ಮಾಸ್ಕ್‌ ಹಾಕಿಕೊಳ್ಳಬೇಕು’ ಎಂದು ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ, ಮಕ್ಕಳ ರೋಗ ತಜ್ಞ ಡಾ.ಎಚ್‌.ಪಿ.ಮಂಚೇಗೌಡ ಸಲಹೆ ನೀಡಿದರು.

‘ಕೋವಿಡ್‌ ಸನ್ನಿವೇಶದಲ್ಲಿ ನಿಯಮ ಪಾಲನೆ ಮಾಡುವುದನ್ನು ಮಕ್ಕಳು ದೊಡ್ಡವರಿಗಿಂತಲೂ ಚೆನ್ನಾಗಿ ಕಲಿತಿದ್ದಾರೆ. ಕ್ಲಿನಿಕ್‌ನಲ್ಲಿದ್ದಾಗ ನಾನು ಸ್ಯಾನಿಟೈಸರ್‌ ಹಾಕಿಕೊಂಡರೆ ತನಗೂ ಹಾಕಿ ಎಂದು ಮಕ್ಕಳು ಕೇಳುತ್ತಾರೆ. ಈಗಿನ ಶೀತ ಜ್ವರಕ್ಕೆ ಯಾರೂ ಹೆದರಬೇಕಾಗಿಲ್ಲ. ಆದರೆ, ವೈದ್ಯರಿಗೆ ತೋರಿಸುವುದನ್ನು ಮಾತ್ರ ಮರೆಯಬಾರದು. ಶ್ವಾಸಕೋಶಕ್ಕೆ ತೊಂದರೆಯಾಗದಂತೆ ಕಾಳಜಿಯಿಂದ ಮಕ್ಕಳನ್ನು ನೋಡಿಕೊಳ್ಳಬೇಕು. ಮನೆಯಲ್ಲಿ ಸಿಗುವ ಔಷಧೋಪಚಾರವನ್ನು ತಪ್ಪದೇ ಮಾಡಬೇಕು’ ಎಂದರು.

1 ಮಗುವಿಗಷ್ಟೇ ಡೆಂಗಿ: ಕಳೆದ ಮೂರು ತಿಂಗಳಲ್ಲಿ 20 ಮಂದಿಯಲ್ಲಿ ಡೆಂಗಿ ಕಾಣಿಸಿಕೊಂಡಿದೆ. ಆದರೆ ಮಕ್ಕಳಲ್ಲಿ ಕಂಡುಬಂದಿಲ್ಲ. ಸೆಪ್ಟೆಂಬರ್‌ ತಿಂಗಳಲ್ಲಿ 1 ಮಗುವಿನಲ್ಲಷ್ಟೇ ಡೆಂಗಿ ಕಂಡು ಬಂದಿದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಡೆಂಗಿ, ಮಲೇರಿಯಾ ಹೆಚ್ಚಾಗಿ ಕಂಡುಬಂದಿಲ್ಲ. ಗ್ರಾಮ ಮಟ್ಟದಲ್ಲಿ ಈ ರೋಗಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.

‘ಇಲ್ಲಿಯವರೆಗೆ ಜಿಲ್ಲೆಯಲ್ಲಿ ಡೆಂಗಿ, ಮಲೇರಿಯಾ ಸಮಸ್ಯೆ ಇಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಉಂಟಾಗಿರುವ ಡೆಂಗಿ ಸಮಸ್ಯೆ ನಮ್ಮಲ್ಲಿ ಇಲ್ಲ. ಮುಂದೆಯೂ ಸಮಸ್ಯೆ ಬಾರದಂತೆ ಕ್ರಮ ವಹಿಸಲಾಗಿದೆ’ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಭವಾನಿ ಶಂಕರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.