ADVERTISEMENT

ಮಂಡ್ಯ| ಹೊಸ ಸಿನಿಮಾ ಇಲ್ಲ, ಚಿತ್ರಮಂದಿರ ಆರಂಭವಾಗಲ್ಲ!

ಟಿವಿಯಲ್ಲಿ ಪ್ರಸಾರವಾದ ಚಿತ್ರ ಪ್ರದರ್ಶನಕ್ಕೆ ಮಾಲೀಕರ ನಕಾರ, ಅನ್ಯಭಾಷೆ ಸಿನಿಮಾ ಪ್ರದರ್ಶನಕ್ಕೆ ಸಿದ್ಧತೆ

ಎಂ.ಎನ್.ಯೋಗೇಶ್‌
Published 14 ಅಕ್ಟೋಬರ್ 2020, 19:30 IST
Last Updated 14 ಅಕ್ಟೋಬರ್ 2020, 19:30 IST
ಮಂಡ್ಯದ ಸಿದ್ಧಾರ್ಥ ಚಿತ್ರಮಂದಿರ ಬಂದ್‌ ಆಗಿರುವುದು
ಮಂಡ್ಯದ ಸಿದ್ಧಾರ್ಥ ಚಿತ್ರಮಂದಿರ ಬಂದ್‌ ಆಗಿರುವುದು   

ಮಂಡ್ಯ: ಬರೋಬ್ಬರಿ 7 ತಿಂಗಳ ನಂತರ ಗುರುವಾರದಿಂದ (ಅ.15) ಚಿತ್ರಮಂದಿರ ತೆರೆಯಲು ಸರ್ಕಾರ ಅನುಮತಿ ನೀಡಿದೆ. ಹೊಸದಾಗಿ ಯಾವುದೇ ಚಲನಚಿತ್ರ ಬಿಡುಗಡೆಯಾಗದ ಕಾರಣಕ್ಕೆ ಜಿಲ್ಲೆಯ ಪ್ರಮುಖ ಚಿತ್ರಮಂದಿರಗಳು ಆರಂಭಗೊಳ್ಳುತ್ತಿಲ್ಲ.

ಕೋವಿಡ್‌ ಕಾರ್ಯಸೂಚಿ ಅನುಸರಿಸಿ ಶೇ 50ರಷ್ಟು ಪ್ರೇಕ್ಷಕರಿಗೆ ಮಾತ್ರ ಸಿನಿಮಾ ಪ್ರದರ್ಶನ ಮಾಡಲು ಅನುಮತಿ ನೀಡಲಾಗಿದೆ. ಆದರೆ ಹೊಸದಾಗಿ ಯಾವುದೇ ಚಿತ್ರಗಳು ಬಿಡುಗಡೆ ಆಗದ ಹಿನ್ನೆಲೆಯಲ್ಲಿ ಚಿತ್ರಮಂದಿರಗಳ ಮಾಲೀಕರು ಪ್ರದರ್ಶನ ಆರಂಭಿಸಲು ಸಿದ್ಧರಾಗಿಲ್ಲ. ನಗರದ ಮಹಾವೀರ ಚಿತ್ರಮಂದಿರ ‘ಕಾಣದಂತೆ ಮಾಯವಾದನು’ ಚಿತ್ರ ಪ್ರದರ್ಶನ ಮಾಡಲು ಪ್ರಚಾರ ನಡೆಸಿತ್ತು. ಆದರೆ ಈಗಾಗಲೇ ಚಿತ್ರ ಟಿ.ವಿ ಸೇರಿ ವಿವಿಧೆಡೆ ಪ್ರಸಾರವಾಗಿರುವ ಹಿನ್ನೆಲೆಯಲ್ಲಿ ಅಲ್ಲಿಯೂ ಚಿತ್ರ ಪ್ರದರ್ಶನ ನಡೆಯುತ್ತಿಲ್ಲ.

ಕೆಲವು ಸಣ್ಣಪುಟ್ಟ ಚಿತ್ರಮಂದಿರಗಳು ಅನ್ಯಭಾಷೆ ಚಿತ್ರ ಪ್ರದರ್ಶನ ಮಾಡಲು ಸಿದ್ಧತೆ ಮಾಡಿಕೊಂಡಿವೆ. ನಗರದ ಜಯಲಕ್ಷ್ಮಿ ಚಿತ್ರಮಂದಿರ ಆರಂಭಗೊಳ್ಳುತ್ತಿದ್ದು ತೆಲುಗು ಚಿತ್ರ ಹಾಕಲು ಸಿದ್ಧತೆಮಾಡಿಕೊಂಡಿದೆ. ಪಾಂಡವಪುರದ ಲಾಲ್‌ಬಹದ್ದೂರ್‌, ಕೋಕಿಲಾ,ನಾಗಮಂಗಲದ ವೆಂಕಟೇಶ್ವರ, ಮಳವಳ್ಳಿಯ ರಾಜರಾಜೇಶ್ವರಿ ಚಿತ್ರಮಂದಿರ ಸಿದ್ಧತೆ ಮಾಡಿಕೊಂಡಿವೆ. ಆದರೆ ಚಿತ್ರಮಂದಿರಗಳ ಮಾಲೀಕರ ಸಂಘವು ಜಿಲ್ಲೆಯಲ್ಲಿ ಯಾವುದೇ ಚಿತ್ರಮಂದಿರ ಆರಂಭಗೊಳ್ಳುವುದಿಲ್ಲ ಎಂದು ತಿಳಿಸಿದೆ. ಹೀಗಾಗಿ ಕೊನೆಯ ಕ್ಷಣದಲ್ಲಿ ಸಣ್ಣಪುಟ್ಟ ಚಿತ್ರಮಂದಿರಗಳ ಮಾಲೀಕರು ಯಾವ ತೀರ್ಮಾನಕ್ಕೆ ಬರಲಿದ್ದಾರೆ ಎಂಬ ಬಗ್ಗೆ ಗುರುವಾರ ಗೊತ್ತಾಗಲಿದೆ.

ADVERTISEMENT

‘ಲವ್‌ ಮಾಕ್ಟೇಲ್‌, ಕಾಣದಂತೆ ಮಾಯವಾದನು ಮುಂತಾದ ಚಿತ್ರಗಳನ್ನು ಹತ್ತಾರು ಬಾರಿ ಟಿವಿಯಲ್ಲಿ ಪ್ರಸಾರ ಮಾಡಲಾಗಿದೆ. ಒಟಿಟಿ ವೇದಿಕೆಯಲ್ಲೂ ಬಂದು ಹೋಗಿವೆ. ಕೋವಿಡ್‌ ಅವಧಿಯಲ್ಲಿ ಚಿತ್ರಮಂದಿರಗಳತ್ತ ಜನರು ಬರುತ್ತಾರೆ ಎಂಬ ವಿಶ್ವಾಸವಿಲ್ಲ. ಹೊಸ ಚಿತ್ರ ಬಿಡುಗಡೆಯಾಗಿದ್ದರೆ ಜನರು ಬರುತ್ತಾರೆ ಎಂಬ ನಿರೀಕ್ಷೆ ಇಟ್ಟುಕೊಳ್ಳಬಹುದು. ಬಾಡಿಗೆ, ಸಂಬಳ, ವಿದ್ಯುತ್‌ ಬಿಲ್‌ ಗಮನದಲ್ಲಿ ಇಟ್ಟುಕೊಂಡು ಗುರುವಾರದಿಂದ ಚಿತ್ರಮಂದಿರ ಆರಂಭ ಮಾಡದಿರಲು ನಿರ್ಧರಿಸಲಾಗಿದೆ’ ಎಂದು ಸಂಘದ ಅಧ್ಯಕ್ಷ, ಸಿದ್ಧಾರ್ಥ ಚಿತ್ರಮಂದಿರ ಮಾಲೀಕ ಮಹೇಶ್‌ ಹೇಳಿದರು.

ಬೇಡಿಕೆ ಈಡೇರಿಲ್ಲ: ಚಿತ್ರಮಂದಿರ ಮಾಲೀಕರು ತಮ್ಮ ಬೇಡಿಕೆ ಈಡೇರಿಸುವಂತೆ ಚಲನಚಿತ್ರ ಪ್ರದರ್ಶಕರ ಮಹಾಮಂಡಳವನ್ನು ಒತ್ತಾಯ ಮಾಡಿದ್ದಾರೆ. ಆ ಬೇಡಿಕೆ ಈಡೇರಿಸುವವರೆಗೂ ಚಿತ್ರ ಪ್ರದರ್ಶನ ಮಾಡಬಾರದು ಎಂಬ ನಿರ್ಧಾರ ಕೈಗೊಂಡಿದ್ದಾರೆ. ಕೋವಿಡ್‌ ಅವಧಿಯಲ್ಲಿ ಸಂಕಷ್ಟ ಸ್ಥಿತಿ ಎದುರಿಸುತ್ತಿರುವ ಚಿತ್ರಮಂದಿರ ಮಾಲೀಕರು ಅತೀ ಹೆಚ್ಚು ಪ್ರದರ್ಶನ ತೆರಿಗೆ ಪಾವತಿ ಮಾಡಬೇಕಾಗಿದೆ. ಹಲವು ವರ್ಷಗಳಿಂದ ₹ 5 ಸಾವಿರ ಇದ್ದ ತೆರಿಗೆಯ ಮೊತ್ತವನ್ನು ವರ್ಷಕ್ಕೆ ₹ 30 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ತೆರಿಗೆ ಇಳಿಸದೇ ಚಿತ್ರ ಪ್ರದರ್ಶನ ಮಾಡಲು ಸಾಧ್ಯವಿಲ್ಲ ಎಂದು ಮಾಲೀಕರು ತಿಳಿಸಿದ್ದಾರೆ.

ಕಳೆದ 7 ತಿಂಗಳಿಂದ ಟಾಕೀಸ್‌ಗಳು ಚಿತ್ರ ಪ್ರದರ್ಶನ ಮಾಡಿಲ್ಲದಿದ್ದರೂ ವಿದ್ಯುತ್‌ ಬಿಲ್‌ ವಿಪರೀತ ಬಂದಿದೆ. ಕನಿಷ್ಠ ಬಿಲ್‌ನ ಮೊತ್ತವೂ ಹೆಚ್ಚಾಗಿದೆ. ವಿದ್ಯುತ್‌ ಬಿಲ್‌ನಲ್ಲಿ ವಿನಾಯಿತಿ ನೀಡಬೇಕು ಎಂದು ಮಾಲೀಕರು ಒತ್ತಾಯ ಮಾಡಿದ್ದಾರೆ.

‘ಚಿತ್ರಮಂದಿರ ನಡೆಸುವುದೇ ಕಷ್ಟವಾಗಿದೆ, ಈಗ ಚಿತ್ರ ಪ್ರದರ್ಶನ ಆರಂಭಿಸಿದರೆ ಪರಿಶೀಲನೆಗಾಗಿ ಪೊಲೀಸರು, ಆರೋಗ್ಯ ಇಲಾಖೆಯವರು, ಸೆಸ್ಕ್‌ ಸಿಬ್ಬಂದಿ ಬರುತ್ತಾರೆ. ಅವರ ತನಿಖೆ ಎದುರಿಸುವ ಬದಲು ಇನ್ನಷ್ಟ ದಿನ ಕಾದು ನೋಡಿ ಚಿತ್ರಮಂದಿರ ಆರಂಭಿಸುತ್ತೇವೆ’ ಎಂದು ಚಿತ್ರಮಂದಿರದ ವ್ಯವಸ್ಥಾಪಕರೊಬ್ಬರು ತಿಳಿಸಿದರು.

*******

ಆಯುಧಪೂಜೆ ನಂತರ ಪ್ರದರ್ಶನ

ಜಿಲ್ಲೆಯ ಬಹುತೇಕ ಚಿತ್ರಮಂದಿರಗಳ ಮಾಲೀಕರು ಆಯುಧಪೂಜೆ ನಂತರ ಪ್ರದರ್ಶನ ಆರಂಭಿಸಲು ನಿರ್ಧರಿಸಿದ್ದಾರೆ. ಚಿತ್ರಮಂದಿರ ಸ್ವಚ್ಛತೆ, ವಿದ್ಯುತ್‌ ಉಪಕರಣ, ತಾಂತ್ರಕ ವ್ಯವಸ್ಥೆಯನ್ನ ಸರಿಪಡಿಸಿ, ಚಿತ್ರಮಂದಿರಕ್ಕೆ ಪೂಜೆ ಸಲ್ಲಿಸಿ ಪ್ರರ್ದಶನ ಆರಂಭಿಸಲು ಯೋಚನೆ ನಡೆಸಿದ್ದಾರೆ.

‘ಇನ್ನೊಂದು 2–3 ವಾರ ಕಾದು ನೋಡಿದರೆ ಹೊಸ ಚಿತ್ರಗಳು ಬಿಡುಗಡೆ ಆಗಲಿವೆ. ಈಗ ಮಾಡುವವರು ಮಾಡಲಿ, ಜನರ ಪ್ರತಿಕ್ರಿಯೆ ನೋಡಿಕೊಂಡು ಆಯುಧ ಪೂಜೆ ದಿನದಿಂದ ಪ್ರದರ್ಶನ ಆರಂಭಿಸಲಾಗುವುದು’ ಎಂದು ಮಹಾವೀರ ಚಿತ್ರಮಂದಿರ ಸಿಬ್ಬಂದಿ ನಾಗರಾಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.