ADVERTISEMENT

ಮಂಡ್ಯ: 6 ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ 160 ಕಂಪ್ಯೂಟರ್‌ ಕಳ್ಳತನ

ಲಾಕ್‌ಡೌನ್‌ ರಜೆಯ ದುರುಪಯೋಗ, ₹ 61 ಲಕ್ಷ ಮೌಲ್ಯದ ಕಂಪ್ಯೂಟರ್‌, ಪರಿಕರ ವಶ, 7 ಬಂಧನ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2020, 13:18 IST
Last Updated 27 ಅಕ್ಟೋಬರ್ 2020, 13:18 IST
ಆರೋಪಿಗಳಿಂದ ವಶಕ್ಕೆ ಪಡೆದಿರುವ ಕಂಪ್ಯೂಟರ್‌ ಹಾಗೂ ಇತರ ಪರಿಕರಗಳು
ಆರೋಪಿಗಳಿಂದ ವಶಕ್ಕೆ ಪಡೆದಿರುವ ಕಂಪ್ಯೂಟರ್‌ ಹಾಗೂ ಇತರ ಪರಿಕರಗಳು   

ಮಂಡ್ಯ: ಲಾಕ್‌ಡೌನ್‌ ರಜೆಯ ವೇಳೆ ಸರ್ಕಾರಿ ಶಾಲೆಗಳಲ್ಲಿ ಭದ್ರತೆ ಇಲ್ಲದಿರುವುದನ್ನು ದುರುಪಯೋಗ ಮಾಡಿಕೊಂಡು ಕಂಪ್ಯೂಟರ್‌ ಕಳ್ಳತನ ಮಾಡುತ್ತಿದ್ದ 7 ಮಂದಿ ಆರೋಪಿಗಳನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ ₹ 61 ಲಕ್ಷ ಮೌಲ್ಯದ ಕಂಪ್ಯೂಟರ್‌, ಇತರ ಪರಿಕರಗಳನ್ನು ವಶಕ್ಕೆ ಪಡೆದಿದ್ದಾರೆ.

ನಾಗಮಂಗಲ ತಾಲ್ಲೂಕಿನ ಸಿ. ರವಿಕುಮಾರ್ (39)‌, ಮಂಡ್ಯ ತಾಲ್ಲೂಕಿನ ಸೂನಗಹಳ್ಳಿಯ ಎಸ್‌.ಆರ್‌.ಮಂಜುನಾಥ (33), ಎಸ್‌.ಪಿ.ನಾಗರಾಜು (33), ಸಿ.ಬಿ.ಹೇಮಂತ್‌ಕುಮಾರ್ (28)‌, ಬೆಂಗಳೂರು ಮಾರುತಿ ನಗರದ ಎಸ್‌.ವೈ.ರಾಮಕೃಷ್ಣ (46), ಅನ್ನಪೂರ್ಣೇಶ್ವರಿ ನಗರದ ಬಿ.ಜಿ.ವೆಂಕಟೇಶ್‌, ಮಂಡ್ಯದ ವಿವಿ ಪುರಂ ನಿವಾಸಿ ಸಾದಿಕ್‌ (50) ಬಂಧಿತ ಆರೋಪಿಗಳು.

‘ಕಂಪ್ಯೂಟರ್‌ ಕಳ್ಳತನ ಮಾಡಿ ಆರೋಪಿಗಳು ಬೆಂಗಳೂರಿನಲ್ಲಿ ಎಸ್‌.ವೈ.ರಾಮಕೃಷ್ಣ, ಬಿ.ಜಿ.ವೆಂಕಟೇಶ್‌ ಅವರಿಗೆ ಮಾರಾಟ ಮಾಡುತ್ತಿದ್ದರು. ಬ್ಯಾಟರಿಗಳನ್ನು ಸಾದಿಕ್‌ಗೆ ಮಾರುತ್ತಿದ್ದರು. 160 ಕಂಪ್ಯೂಟರ್‌, 16 ಬ್ಯಾಟರಿ, 03 ಟಿವಿ, 01 ವಾಷಿಂಗ್‌ ಮಷಿನ್‌, 1 ವೇಯಿಂಗ್‌ ಮಷಿನ್‌, 2ಯುಪಿಎಸ್‌, 3 ಜೆರಾಕ್ಸ್‌ ಯಂತ್ರ, 1 ಪ್ರಿಂಟರ್‌ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಎರಡು ಕಾರು, ಒಂದು ಸರಕು ಸಾಗಣೆ ವಾಹನವನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ್‌ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ಮಂಡ್ಯ, ಮೈಸೂರು, ರಾಮನಗರ, ಹಾಸನ, ತುಮಕೂರು, ಬೆಂಗಳೂರು ನಗರದಲ್ಲಿ 34 ಪ್ರಕರಣಗಳನ್ನು ಭೇದಿಸಲಾಗಿದೆ. ವಿವಿಧ ಶಾಲೆಗಳಲ್ಲಿ ಕಳ್ಳತನ ಮಾಡಿದ್ದ ₹ 54 ಲಕ್ಷ ಮೌಲ್ಯದ ಕಂಪ್ಯೂಟರ್‌ಗಳು, ಪ್ರಿಂಟರ್‌, ಜೆರಾಕ್ಸ್‌ ಮಷಿನ್‌, ಬ್ಯಾಟರಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಬೆಂಗಳೂರು ನಗರದಲ್ಲಿ ಕಳ್ಳತನ ಮಾಡಿದ್ದ ₹6 ಲಕ್ಷ ಮೌಲ್ಯದ ಇನೋವಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು ಹುಡುಕಾಟ ನಡೆಸಲಾಗುತ್ತಿದೆ’ ಎಂದರು.

2.1 ಕೆ.ಜಿ ಚಿನ್ನ ವಶ

‘ಅಧಿಕ ಬಡ್ಡಿ ಆಸೆ ತೋರಿಸಿ ಚಿನ್ನ, ಹಣ ಪಡೆದು ವಂಚಿಸಿದ ಪ್ರಕರಣದಲ್ಲಿ ಇಲ್ಲಿಯವರೆಗೆ ಇಬ್ಬರನ್ನು ಬಂಧಿಸಲಾಗಿದ್ದು 2.1 ಕೆ.ಜಿ ಚಿನ್ನ, ₹1.09 ಕೋಟಿ ಮೌಲ್ಯದ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಎಸ್‌ಪಿ ಪರಶುರಾಮ್‌ ತಿಳಿಸಿದರು.

‘ಹಣ ಕಳೆದುಕೊಂಡ ಮಹಿಳೆಯರು ನೀಡಿದ ದೂರು ಆಧರಿಸಿ ವಿಚಾರಣೆ ನಡೆಸಲಾಗುತ್ತಿದೆ. ಮಂಡ್ಯ ಪೂರ್ವ, ಪಶ್ಚಿಮ ಠಾಣೆಯ ನಾಲ್ಕು ತಂಡ ರಚಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.