ADVERTISEMENT

ಅವಧಿ ಮುಗಿದ ಟೆಂಡರ್ ರದ್ದುಪಡಿಸಲು ಆಗ್ರಹ

ಮದ್ದೂರು ಪುರಸಭೆಯ ತುರ್ತು ಸಭೆಯಲ್ಲಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2025, 12:59 IST
Last Updated 20 ಫೆಬ್ರುವರಿ 2025, 12:59 IST
ಮದ್ದೂರು ಪುರಸಭೆಯ ಎಸ್. ಎಂ ಕೃಷ್ಣ ಸಭಾಂಗಣದಲ್ಲಿ ಗುರುವಾರ ಪುರಸಭಾಧ್ಯಕ್ಷೆ ಕೋಕಿಲಾ ಅರುಣ್ ಅಧ್ಯಕ್ಷತೆಯಲ್ಲಿ ತುರ್ತು ಸಭೆಯು ನಡೆಯಿತು, ಪುರಸಭಾ ಮುಖ್ಯ್ಯಾಧಿಕಾರಿ ಮೀನಾಕ್ಷಿ ಸೇರಿದಂತೆ ಸದಸ್ಯರುಗಳು ಹಾಗೂ ಅಧಿಕಾರಿಗಳು ಹಾಜರಿದ್ದರು.
ಮದ್ದೂರು ಪುರಸಭೆಯ ಎಸ್. ಎಂ ಕೃಷ್ಣ ಸಭಾಂಗಣದಲ್ಲಿ ಗುರುವಾರ ಪುರಸಭಾಧ್ಯಕ್ಷೆ ಕೋಕಿಲಾ ಅರುಣ್ ಅಧ್ಯಕ್ಷತೆಯಲ್ಲಿ ತುರ್ತು ಸಭೆಯು ನಡೆಯಿತು, ಪುರಸಭಾ ಮುಖ್ಯ್ಯಾಧಿಕಾರಿ ಮೀನಾಕ್ಷಿ ಸೇರಿದಂತೆ ಸದಸ್ಯರುಗಳು ಹಾಗೂ ಅಧಿಕಾರಿಗಳು ಹಾಜರಿದ್ದರು.   

ಮದ್ದೂರು: ‘ಅವಧಿ ಮುಗಿದಿರುವ ಕಾರಣ ನೈರ್ಮಲ್ಯ ವಿಭಾಗದ ಟೆಂಡರ್ ರದ್ದು ಪಡಿಸಿ ಹೊಸದಾಗಿ ಟೆಂಡರ್ ಕರೆಯಬೇಕು’ ಎಂದು ಪುರಸಭಾ ಸದಸ್ಯರು ಆಗ್ರಹಿಸಿದರು.

ಪಟ್ಟಣದ ಪುರಸಭೆಯಲ್ಲಿ ಗುರುವಾರ ಕರೆಯಲಾಗಿದ್ದ ತುರ್ತು ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಲಾಯಿತು.

ಸಭೆಯಲ್ಲಿ ಈ ವಿಷಯ ಚರ್ಚೆಗೆ ಬರುತ್ತಿದ್ದಂತೆ ಪುರಸಭೆಯ ಮುಖ್ಯಾಧಿಕಾರಿಗಳು ಈ ಬಗ್ಗೆ ವಿವರಣೆ ನೀಡಿ,‘ಸುಮಾರು 14 ದಿನಗಳಿಂದ ಪುರಸಭೆ ಮುಂದೆ ಹೊರಗುತ್ತಿಗೆ ನೌಕರನಾಗಿ ಸಾರ್ಟರ್ ಆಗಿ ಕೆಲಸ ಮಾಡುತ್ತಿದ್ದ ಮನಿಶ್ ಎಂಬುವರನ್ನು ಹೊರಗುತ್ತಿಗೆ ತೆಗೆದುಕೊಂಡಿದ್ದ ಸಂಸ್ಥೆಯು ವಜಾಗೊಳಿಸಿದ್ದರ ವಿರುದ್ಧ ಧರಣಿ ಪ್ರತಿಭಟನೆ ನಡೆಯುತ್ತಿದೆ. ಆದ್ದರಿಂದ ಈ ಬಗ್ಗೆ ಸದಸ್ಯರು ನಿರ್ಣಯ ಕೈಗೊಳ್ಳಬೇಕು’ ಎಂದರು.

ADVERTISEMENT

ಈ ವೇಳೆ ಪುರಸಭಾ ಸದಸ್ಯರಾದ ಮಹೇಶ್, ಎಂ.ಐ.ಪ್ರವೀಣ್, ಪ್ರಿಯಾಂಕ ಅಪ್ಪುಗೌಡ, ನಂದೀಶ್, ಮನೋಜ್ ಎದ್ದು ನಿಂತು ಈ ಬಗ್ಗೆ ಈ ಮೊದಲೇ ಸಭೆಯ ಗಮನಕ್ಕೆ ಏಕೆ ತಂದಿಲ್ಲ, ಇದಕ್ಕೆ ಸಂಬಂಧಪಟ್ಟಂತೆ 2ರಿಂದ 3 ಬಾರಿ ಟೆಂಡರ್ ಅವಧಿ ಮುಗಿದಿದ್ದರೂ ಸದಸ್ಯರ ಗಮನಕ್ಕೆ ತಂದು ಏಕೆ ನೀವು ಮತ್ತೊಮ್ಮೆ ಟೆಂಡರ್ ಕರೆಯಲಿಲ್ಲ ಎಂದು ಪುರಸಭೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಅಷ್ಟೆ ಅಲ್ಲದೆ ವಜಾಗೊಂಡ ಇದೇ ನೌಕರನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಕೂಡಾ ದಾಖಲಾಗಿದೆಯಾದರೂ ಸಭೆಯ ಗಮನಕ್ಕೆ ತಂದಿಲ್ಲ ಏಕೆ ಎಂದು ಪ್ರಶ್ನಿಸಿದರು, ನಂತರ ಪುರಸಭಾಧ್ಯಕ್ಷೆ ಕೋಕಿಲ ಅರುಣ್ ಮಧ್ಯೆ ಪ್ರವೇಶಿಸಿ ಸದಸ್ಯರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಆದರೂ ಸದಸ್ಯರು ಹಾಗೂ ಅಧಿಕಾರಿಗಳ ನಡುವೆ ವಾಗ್ವಾದ ನಡೆದವು.

ನಂತರ ಹೊರಗುತ್ತಿಗೆಯ ಅವಧಿ ಮುಗಿದಿರುವ ಕಾರಣ ಟೆಂಡರ್ ರದ್ದು ಗೊಳಿಸಬೇಕೆಂದು ಸದಸ್ಯರು ನಿರ್ಧರಿಸಿದರು. 2025-26ನೇ ಸಾಲಿನ ಆಸ್ತಿ ತೆರಿಗೆ ಪರಿಷ್ಕರಣೆ ಮಾಡುವ ಬಗ್ಗೆ ಅಧಿಕಾರಿಗಳು ಸಭೆಯಲ್ಲಿ ಪ್ರಸ್ತಾಪಿಸಿದ ಹಿನ್ನೆಲೆ, ಶೇ3 ಮಾತ್ರ ಹೆಚ್ಚಿಸಲು ಹಾಗೂ ನೀರಿನ ತೆರಿಗೆ ₹5 ಹೆಚ್ಚಿಸಲು ಸದಸ್ಯರು ಒಪ್ಪಿಗೆ ಸೂಚಿಸಿದರು.

ಸಭೆಯ ಅಧ್ಯಕ್ಷತೆಯನ್ನು ಪುರಸಭಾಧ್ಯಕ್ಷೆ ಕೋಕಿಲಾ ಅರುಣ್ ವಹಿಸಿದ್ದರು, ಮುಖ್ಯಾಧಿಕಾರಿ ಮೀನಾಕ್ಷಿ ಸೇರಿದಂತೆ ಸದಸ್ಯರು ಹಾಗೂ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.