ಮಳವಳ್ಳಿ: ‘ಕಾವೇರಿ ಆರತಿ ಹೆಸರಿನಲ್ಲಿ ಸಾರ್ವಜನಿಕರ ಹಣವನ್ನು ಲೂಟಿ ಹೊಡೆಯಲು ರಾಜ್ಯ ಸರ್ಕಾರ ಹುನ್ನಾರ ನಡೆಸುತ್ತಿದೆ. ಕಾವೇರಿ ಆರತಿ ಯೋಜನೆಯನ್ನು ಕೈಬಿಡಬೇಕು’ ಎಂದು ಒತ್ತಾಯಿಸಿ ಭಾರತ ಜನವಾದಿ ಮಹಿಳಾ ಸಂಘಟನೆ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ಸದಸ್ಯರು ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಮುಂಭಾಗ ಸೋಮವಾರ ಪ್ರತಿಭಟಿಸಿದರು.
‘ಜಿಲ್ಲೆಯ ಬಹುತೇಕ ಹಳ್ಳಿಗಳಿಗೆ ಕುಡಿಯಲು ಕಾವೇರಿ ಸಿಗುತ್ತಿಲ್ಲ. ತಾಲ್ಲೂಕಿನ ರೈತರ ಜಮೀನುಗಳಿಗೆ ವ್ಯವಸಾಯ ಮಾಡಲು ಸಮರ್ಪಕವಾಗಿ ನೀರು ಹರಿಸಲು ವಿಫಲವಾಗಿರುವ ಸರ್ಕಾರ ಕಾವೇರಿ ಆರತಿ ಹೆಸರಲ್ಲಿ ₹92 ಕೋಟಿ ಖರ್ಚು ಮಾಡಲು ಮುಂದಾಗಿದ್ದು, ಇದರ ಹಿಂದೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಹಣ ಲೂಟಿ ಹೊಡೆಯುವ ಹುನ್ನಾರ ಅಡಗಿದೆ’ ಎಂದು ಪ್ರತಿಭಟನಕಾರರು ಆರೋಪಿಸಿದರು.
‘ಆಸ್ಪತ್ರೆ, ರಸ್ತೆ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸಲು ಹಣ ನೀಡದ ಸರ್ಕಾರ, ಗ್ಯಾರಂಟಿ ಯೋಜನೆಗಳಿಗೆ ಹಣ ಬಳಕೆ ಮಾಡುತ್ತಿದೆ. ಇದರಿಂದ ಅಭಿವೃದ್ಧಿ ಕುಂಠಿತವಾಗಿದೆ. ಗಂಗಾ ಆರತಿ ಹೆಸರಿನಲ್ಲಿ ಇಡೀ ಗಂಗಾ ನದಿಯೇ ಕಲುಷಿತವಾಗಿದೆ ಎಂದು ವೈಜ್ಞಾನಿಕವಾಗಿ ವರದಿ ಬಂದಿದೆ. ಅದೇ ರೀತಿಯಲ್ಲಿ ಕಾವೇರಿ ನದಿಯನ್ನು ಸಹ ಕಲುಷಿತ ಮಾಡಲು ಹೊರಟಿರುವ ಕ್ರಮ ಸರಿಯಲ್ಲ’ ಎಂದರು.
ಪ್ರಮುಖರಾದ ಎನ್.ಎಲ್.ಭರತ್ ರಾಜ್, ದೇವಿ, ಸುಶೀಲಾ, ಡಿ.ಕೆ.ಲತಾ, ಜಯಶೀಲಾ, ಗುರುಸ್ವಾಮಿ, ಎ.ಎಲ್.ಶಿವಕುಮಾರ್, ಚಿಕ್ಕಸ್ವಾಮಿ, ಹಿಪ್ಜುಲ್ಲಾ, ವಿಷಕಂಠ, ಮಹದೇವಮ್ಮ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.