ADVERTISEMENT

ಜಿಟಿಡಿ, ನಾನು ಬಿಜೆಪಿ ಸೇರುವ ಪ್ರಶ್ನೆ ಇಲ್ಲ: ಸುರೇಶ್‌ಗೌಡ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2019, 14:42 IST
Last Updated 12 ಸೆಪ್ಟೆಂಬರ್ 2019, 14:42 IST

ಕೊಪ್ಪ: ‘ಶಾಸಕ ಜಿ.ಟಿ.ದೇವೇಗೌಡರಾಗಲೀ, ನಾನಾಗಲೀ ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ. ಜನರು ಊಹಾಪೋಹಗಳಿಗೆ ಕಿವಿಗೊಡಬಾರದು’ ಎಂದು ಶಾಸಕ ಸುರೇಶ್‌ಗೌಡ ಹೇಳಿದರು.

ಬೆಕ್ಕಳಲೆ ಗ್ರಾಮದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜೆಡಿಎಸ್‌ ಮುಖಂಡರು ಮಲೇಷ್ಯಾದಲ್ಲಿ ಸಭೆ ಸೇರಿ ಬಿಜೆಪಿಗೆ ಬೆಂಬಲ ನೀಡಲು ತೀರ್ಮಾನ ಮಾಡಿದ್ದಾರೆ ಎಂಬುದೆಲ್ಲಾ ಸುಳ್ಳು. ನಾನು ಮಲೇಷ್ಯಾಕ್ಕೆ ಹೋಗಿರಲಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ರಾಜ್ಯದಲ್ಲಿ ಸ್ಥಿರ ಸರ್ಕಾರ ಇದ್ದರೆ ಅಭಿವೃದ್ದಿ ಸಾಧ್ಯ. ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಮತ್ತು ಪಕ್ಷೇತರ ಶಾಸಕರು ಚುನಾವಣೆ ಎದುರಿಸಲು ಸಿದ್ಧವಿಲ್ಲ. ಪ್ರಸ್ತುತ ನಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಸಹಕಾರ ನೀಡುವವರಿಗೆ ನಾವು ಸಹಕಾರ ನೀಡಬೇಕು ಎಂಬುದು ನಮ್ಮ ಚಿಂತನೆಯಾಗಿದೆ’ ಎಂದರು.

ADVERTISEMENT

‘ಈ ಸಂಬಂಧ ಅಂತಿಮವಾಗಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ನಿರ್ಧಾರವೇ ಅಂತಿಮ. ಮಾಜಿ ಸಚಿವ ಡಿ.ಕೆ.ಶಿವಕುಮಾರ್ ತಪ್ಪು ಮಾಡಿದ್ದರೆ ಶೀಕ್ಷೆ ನೀಡಲಿ. ಆದರೆ ಇ.ಡಿ ಅಧಿಕಾರಿಗಳು ಬಂಧಿಸಿರುವುದು ಹಾಗೂ ವಿಚಾರಣೆ ಮಾಡುತ್ತಿರುವ ಸಂದರ್ಭ ಸರಿಯಲ್ಲ. ಉಪ ಚುನಾವಣೆಯ ಸಂದರ್ಭದಲ್ಲಿ ಈ ರೀತಿ ಮಾಡುತ್ತಿರುವುದನ್ನು ನೋಡಿದರೆ ಕೇಂದ್ರ ಸರ್ಕಾರ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎನ್ನಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.