ADVERTISEMENT

ದೇವರಾಜುಗೆ ಟಿಕೆಟ್‌ ನೀಡದ್ದಕ್ಕೆ ಕಣ್ಣೀರಿಟ್ಟಿದ್ದ ದೇವೇಗೌಡ: ರೇವಣ್ಣ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2019, 10:50 IST
Last Updated 23 ನವೆಂಬರ್ 2019, 10:50 IST
ಕೆ.ಆರ್.ಪೇಟೆ ತಾಲ್ಲೂಕಿನ ಹೊಸಹೊಳಲು ಗ್ರಾಮದಲ್ಲಿ ಎಚ್.ಡಿ.ರೇವಣ್ಣ ಕಾರ್ಯಕರ್ತರೊಂದಿಗೆ ಮಾತನಾಡಿದರು
ಕೆ.ಆರ್.ಪೇಟೆ ತಾಲ್ಲೂಕಿನ ಹೊಸಹೊಳಲು ಗ್ರಾಮದಲ್ಲಿ ಎಚ್.ಡಿ.ರೇವಣ್ಣ ಕಾರ್ಯಕರ್ತರೊಂದಿಗೆ ಮಾತನಾಡಿದರು   

ಕೆ.ಆರ್.ಪೇಟೆ: ನಾಲ್ಕು ದಶಕಗಳಿಂದ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡಿದ ಬಿ.ಎಲ್.ದೇವರಾಜು ಅವರಿಗೆ ಕಳೆದ ಚುನಾವಣೆಯಲ್ಲಿ ಟಿಕೆಟ್ ಕೊಡಲಾಗದ್ದಕ್ಕೆ ದೇವೇಗೌಡರು ಕಣ್ಣೀರು ಹಾಕಿದ್ದರು. ಹೀಗಾಗಿ, ಈ ಬಾರಿ ದೇವರಾಜು ಅವರಿಗೆ ಟಿಕೆಟ್‌ ನೀಡಲಾಗಿದೆ. ತತ್ವ, ನಿಷ್ಠೆ, ದಕ್ಷತೆಗೆ ಹೆಸರಾದ ಬಿ.ಎಲ್.ದೇವರಾಜು ಅವರನ್ನು ಮತದಾರರು ಬೆಂಬಲಿಸಬೇಕು ಎಂದು ಶಾಸಕ ಎಚ್.ಡಿ.ರೇವಣ್ಣ ಮನವಿ ಮಾಡಿದರು.

ತಾಲ್ಲೂಕಿನ ಹೊಸಹೊಳಲು ಗ್ರಾಮಕ್ಕೆ ಗುರುವಾರ ರಾತ್ರಿ ಭೇಟಿ ನೀಡಿದ ಅವರು, ಕಾರ್ಯಕರ್ತರು ಮತ್ತು ಮುಖಂಡರನ್ನು ಭೇಟಿ ಮಾಡಿ ಮಾತನಾಡಿದರು.

‘ಗಾಂಧಿವಾದಿ ಎಸ್.ಎಂ.ಲಿಂಗಪ್ಪ ಅವರು ಶಾಸಕರಾಗಿದ್ದ ಪಕ್ಷದ ಬಸ್ ಕೃಷ್ಣೇಗೌಡ ಅವರು ಮುಂಬೈನಲ್ಲಿ ನಾರಾಯಣಗೌಡನನ್ನು ಪರಿಚಯಿಸಿದರು. ಕುಮಾರಣ್ಣ ಎಲ್ಲರಲ್ಲೂ ಒಳ್ಳೆಯದನ್ನು ಕಾಣುತ್ತಾನೆ. ಪರಿಣಾಮ ಪಕ್ಷದ ನಿಷ್ಠಾವಂತರನ್ನು ಕಡೆಗಣಿಸಿ ನಾರಾಯಣಗೌಡನಿಗೆ ಟಿಕೆಟ್ ಕೊಡಲಾಯಿತು. ಈಗ ಅವರು ಏನು ಮಾಡಿದ್ದಾನೆ ಎಂಬುದು ಎಲ್ಲರಿಗೂ ತಿಳಿದಿದೆ. ಇನ್ನುಮುಂದೆ ಕಾರ್ಯಕರ್ತರ ತೀರ್ಮಾನವೇ ಅಂತಿಮ. ಏನೇ ಭಿನ್ನಾಭಿಪ್ರಾಯವಿದ್ದರೂ ಮರೆತು ಈ ಬಾರಿ ದೇವರಾಜು ಅವರನ್ನು ಗೆಲ್ಲಿಸಬೇಕು. ನಾರಾಯಣಗೌಡನ ಬಗ್ಗೆ ಹೇಳಲು ದಿನಗಳೇ ಬೇಕು. ಆತನ ಮಾತುಗಳಿಗೆ ಮರುಳಾಗಬೇಡಿ’ ಎಂದು ಮನವಿ ಮಾಡಿದರು.

ADVERTISEMENT

ಪಕ್ಷದ ಕಾರ್ಯಕರ್ತರ ಮೇಲೆ ಕೇಸ್ ಹಾಕಿರುವ ಬಗ್ಗೆ ಕಾರ್ಯಕರ್ತರು ಪ್ರಸ್ತಾಪ ಮಾಡಿದರು. ಇದಕ್ಕೆ ಉತ್ತರಿಸಿದ ರೇವಣ್ಣ, ‘ಯಾವುದೇ ಕೇಸ್ ಹಾಕಲಿ, ಹೆದರಬೇಡಿ ನಾವಿದ್ದೇವೆ. ಕಾನೂನು ಪ್ರಕಾರ ಹೋರಾಟ ಮಾಡೋಣ’ ಎಂದರು.

ಪಕ್ಷದ ಅಭ್ಯರ್ಥಿ ಬಿ.ಎಲ್.ದೇವರಾಜು, ಹೊಸಹೊಳಲು ಗ್ರಾಮದ ಜೆಡಿಎಸ್ ಪಕ್ಷದ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.